* ಕೆರೆ ಅಭಿವೃದ್ದಿಗೆ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆ
* ಹಣದುರುಪಯೋಗ ಮಾಡಿಕೊಂಡಿರುವ ಆರೋಪ
* ಅಧಿಕಾರಿಗಳು ಹಾಗೂ ಕಂಟ್ರಾಕ್ಟರ್ ವಿರುದ್ಧ ಕೆಂಡಾಮಂಡಲ
* ಕಾಮಗಾರಿ ನಡೆಸದೇ ಬಿಲ್ ಪಾಸ್
* ಸಮಗ್ರ ತನಿಖೆಗೆ ಜಿಲ್ಲಾಪಂಚಾಯಿತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸೂಚನೆ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಜೂನ್.23) : ಗ್ರಾಮಗಳಲ್ಲಿ ಇರುವ ಕೆರೆ ಅಭಿವೃದ್ದಿಗಾಗಿ ಸರ್ಕಾರ ಅನುದಾನವನ್ನು ಬಿಡುಗೆಡೆ ಮಾಡಿತ್ತು. ಕೆರೆ ಅಭಿವೃದ್ದಿಯಾದ್ರೆ ಗ್ರಾಮದ ರೈತರು ಸಮೃದ್ದಿಯಿಂದ ಜೀವನ ನಡೆಸಬಹುದು ಎನ್ನುವ ಆಸೆಯೂ ಇತ್ತು. ಆದ್ರೆ ಇಲ್ಲಿನ ಅಧಿಕಾರಿಗಳು, ಗುತ್ತಿಗೆದಾರರು ಸೇರಿಕೊಂಡು ಕೆರೆ ಅಭಿವೃದ್ದಿ ಮಾಡುವ ಬದಲು ಅನುದಾನವನ್ನು ಖಾಲಿ ಮಾಡಿದ್ದಾರೆ.ಕೆರೆಯಲ್ಲಿ ಊಳೆತ್ತಿ ,ಅಭಿವೃದ್ದಿ ಮಾಡುವ ಬದಲು ರಾಮ ಕೃಷ್ಣನ ಲೆಕ್ಕೆ ತೋರಿಸಿ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ…
ಕಾಮಗಾರಿ ನಡೆಸಿದೇ ಬಿಲ್ ಪಾಸ್
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ 37 ಕೆರೆಗಳನ್ನ ಅಧಿಕಾರಿ ಹಾಗೂ ಕಂಟ್ರಾಕ್ಟರ್ ಹಳ್ಳ ಹಿಡಿಸಿದ್ದಾರೆ. ಈಚಿಕೆರೆ ಕೆರೆ 40 ಸಾವಿರ. ಅರಳಿಕೊಪ್ಪದ್ದು 50 ಸಾವಿರ. ಮೆಣಸೂರ್ದು 40 ಸಾವಿರ. ಕಡಹೀನಬೈಲ್ದು 50 ಸಾವಿರ. ಬಾಳೆದು 60 ಸಾವಿರ. ಮುತ್ತಿನಕೊಪ್ಪದ್ದು 50 ಸಾವಿರ. ಬನ್ನೂರ್ದು 50 ಸಾವಿರ. ಇದೆಲ್ಲಾ ಕೆರೆ ಅಭಿವೃದ್ಧಿಗೆ ಬಂದ ಹಣ. ಆದ್ರೆ, ಕೆಲಸವಾದ ಲೆಕ್ಕಕ್ಕಿಂತ ಅಧಿಕಾರಿಗಳು-ಕಂಟ್ರಾಕ್ಟರ್ಗಳ ಖಜಾನೆ ಸೇರಿದ ಲೆಕ್ಕವೇ ದೊಡ್ಡದ್ದು. 37 ಕೆರೆಗಳ ಅಭಿವೃದ್ಧಿಗೆ ಬಂದಿದ್ದು 30 ಲಕ್ಷ. ದಾಖಲೆಗಾಗಿ 20 ಕೆರೆ ಬಳಿ ಫೋಟೋ ತೆಗೆದ ಅಧಿಕಾರಿಗಳು, ಉಳಿದ 17 ಕೆರೆ ಕಡೆ ಮುಖವನ್ನೇ ಮಾಡಿಲ್ಲ.
undefined
ಚಿಕ್ಕಮಗಳೂರು: ವಾರದ ಹಿಂದೆ ಓಪನ್ ಆಗಿದ್ದ ಸೇತುವೆ ಕುಸಿತ, ಲಕ್ಷಾಂತರ ಹಣ ಮಣ್ಣುಪಾಲು..!
ಸುಮಾರು 37 ಕೆರೆಗಳ ಅಭಿವೃದ್ಧಿಗೆಂದು ಜಿಲ್ಲಾ ಪಂಚಾಯಿತಿಯ ಗ್ರ್ಯಾಂಟ್ನಲ್ಲಿ 30 ಲಕ್ಷ ಬಿಡುಗಡೆಯಾಗಿತ್ತು. ಕೆರೆಯನ್ನ ಉಳಿಸಿ-ಬೆಳೆಸಬೇಕೆಂದು. ಆದ್ರೆ, ಅಧಿಕಾರಿಗಳು ಕೆರೆ ಬೆಳೆಸಲಿಲ್ಲ. ತಾವು ಮಾತ್ರ ಬೆಳೆದಿದ್ದಾರೆ. 37 ಕೆರೆಗಳ ಪೈಕಿ 20-22 ಕೆರೆಗಳ ಬಳಿ ಫೋಟೋಗಾಗಿ ಜೆಸಿಬಿ ಹಾಗೂ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿ ಫೋಟೋ ಮಾತ್ರ ಹೊಡೆಸಿದ್ದಾರೆ. ಉಳಿದ ಕೆರೆಗಳ ಕಡೆ ಮುಖವನ್ನೇ ಮಾಡಿಲ್ಲ. ಬಹಶಃ ಆ ಕೆರೆಗಳು ಎಲ್ಲಿವೆ ಅಂತನಾದ್ರು ಗೊತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ಹಣ ಮಾತ್ರ ಫುಲ್ ಡ್ರಾ ಆಗಿದೆ. ಇದೀಗ ಈ ವಿಷಯ ತಿಳಿದು ಸರ್ಕಾರದ ಹಣವನ್ನ ಸರಾಸಗಟಾಗಿ ಗುಳುಂ ಮಾಡಿದ್ದಾರೆಂದು ಆರೋಪಿಸಿರೋ ಎನ್.ಆರ್.ಪುರದ ಜನ ಅಧಿಕಾರಿಗಳು ಹಾಗೂ ಕಂಟ್ರಾಕ್ಟರ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಸಮಗ್ರ ತನಿಖೆಗೆ ಜಿ.ಪಂ ಸಿಇಓ ಆದೇಶ
ಕೆಲಸವನ್ನೇ ಮಾಡದೆ ಹಣ ಡ್ರಾ ಮಾಡಿಕೊಂಡಿರೋ ಅಧಿಕಾರಿಗಳು ರೈತರ ಮಾಡಿದ ಕೆಲಸಕ್ಕೂ ನಾವೇ ಅಪ್ಪಂದಿರು ಅಂತ ಅದಕ್ಕೂ ಬಿಲ್ ಮಾಡಿಕೊಂಡಿದ್ದಾರೆ ಎಂದು ರೈತರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಉದ್ಯೋಗ ಖಾತರಿ ಯೋಜನೆಯಡಿ ಎನ್.ಆರ್.ಪುರದ ಈಚಿಕೆರೆ ಗ್ರಾಮದ ಸರ್ವೇ ನಂಬರ್ 26ರಲ್ಲಿರೋ ಕೆರೆ ಅಭಿವೃದ್ಧಿಗೆ ಐದು ಲಕ್ಷ ಹಣ ಸ್ಯಾಂಕ್ಷನ್ ಆಗಿತ್ತು. ಅಧಿಕಾರಿಗಳು ಹಾಗೂ ಕಂಟ್ರಾಕ್ಟರ್ 2 ಜೆಸಿಬಿ, 2 ಟ್ರ್ಯಾಕ್ಟರ್ ತಂದು 50 ಲೋಡ್ ಮಣ್ಣು ತೆಗೆದು ಹೋದವರು ಮತ್ತೆ ಬಂದಿಲ್ಲ. ಕೆರೆ ಕ್ಲೀನ್ ಆಗ್ಲಿಲ್ಲ. ಹಣ ಮಾತ್ರ ಡ್ರಾ ಮಾಡಿಕೊಂಡಿದ್ದಾರೆ. ಅದು ರೈತರು ಕೆರೆಯಲ್ಲಿ ತೆಗೆದ ಮಣ್ಣನ್ನೂ ನಾವೇ ತಗೆದಿದ್ದು ಎಂದು ಹೇಳಿ ಹಣ ಡ್ರಾ ಮಾಡಿಕೊಂಡಿದ್ದಾರೆ.
ಈ ಕೆರೆ ಬಳಿ ಯಾವ ಕಾಮಗಾರಿಯೂ ಆಗಿಲ್ಲ. ಯಾರೂ ಮಾಡಿಲ್ಲ. ಸರ್ಕಾರದ ದುಡ್ಡನ್ನ ಮಾತ್ರ ಹೊಡೆದು ತಿಂದಿದ್ದಾರೆ ಅಂತ ಆರೋಪಿಸಿರೋ ರೈತರು ಈ ಬಗ್ಗೆ ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯಿತ್ ಸಿಇಓ ಈ ಸಮಗ್ರ ತನಿಖೆಗೆ ಆದೇಶ ಮಾಡಿದ್ದು ತನಿಖೆ ನಡೆಯುತ್ತಿದ್ದು ತಪ್ಪಾಗಿದ್ರೆ ಕ್ರಮ ಖಂಡಿತವೆಂದು ಭರವಸೆ ನೀಡಿದ್ದಾರೆ.
ಒಟ್ಟಾರೆ, ಸರ್ಕಾರದ ದುಡ್ಡನ್ನ ಕೆಲಸವನ್ನೆ ಮಾಡದೆ ಹಣವನ್ನ ಡ್ರಾ ಮಾಡಿಕೊಂಡಿರೋ ಈ ಅಧಿಕಾರಿ ಹಾಗೂ ಕಂಟ್ರಾಕ್ಟರ್ಗೆ ಇದೀಗ ಪೀಕಲಾಟ ಶುರವಾಗಿದೆ. ಇದೀಗ ಜಿಪಂ ಸಿಇಓ ಪ್ರಭು ಕೂಡ ತಾಪಂ ಇಓಗೆ ಸ್ಪಾಟ್ ಮಜರ್ ವರದಿ ಕೇಳಿದ್ದಾರೆ. 5000-10000 ಆಗಿದ್ರೆ ಜನಾನೂ ಕೂಡ ಹಾಳಾಗ್ ಹೋಗ್ಲಿ ಸರ್ಕಾರದ ವ್ಯವಸ್ಥೆಯಲ್ಲಿ ಇದೆಲ್ಲಾ ಕಾಮನ್ ಅಂತ ಸುಮ್ನಾಗೋರೋ ಏನೋ. ಆದ್ರೆ, ಹೀಗೆ ಕೆಲಸವನ್ನೇ ಮಾಡದೆ ಹಣ ಡ್ರಾ ಮಾಡಿಕೊಳ್ಳೋದು ಹಗಲು ದರೋಡೆ ಅಲ್ಲದೆ ಮತ್ತೇನೂ ಅಲ್ಲ. ಅದು ಹಳ್ಳಿಗಳ ಜೀವನಾಡಿಯಾಗಿರೋ ಕೆರೆಗಳ ವಿಚಾರದಲ್ಲಿ. ಹಾಗಾಗಿ, ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಬಹಳಷ್ಟಿದೆ.