* ಸಿದ್ದರಬೆಟ್ಟ ಬಾಳೇಹೊನ್ನೂರು ಶಾಖಾ ಮಠದ 16ನೇ ವರ್ಷದ ವಾರ್ಷಿಕೋತ್ಸವ
* ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ಗೆ ಸಿದ್ಧಶ್ರೀ ಪ್ರಶಸ್ತಿ ಪ್ರಧಾನ.
* ವಾರ್ಷಿಕೋತ್ಸವದ ನೆನಪಿಗಾಗಿ ಮಠದಿಂದ ಗ್ರಾಮ ದತ್ತು ಯೋಜನೆ ಜಾರಿ
ತುಮಕೂರು, (ಜೂನ್.23): ಪವಾಡ ಪುರುಷರ ತಪೋ ನೆಲ ಸಿದ್ದರಬೆಟ್ಟದ ಬಾಳೇಹೊನ್ನೂರು ಶಾಖಾ ಮಠದ 16ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬಸವಣ್ಣ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ.
ಜೊತೆಗೆ ಸಿದ್ದರಬೆಟ್ಟ ಕೊಡುವ ಸಿದ್ದಶ್ರೀ ಪ್ರಶಸ್ತಿಯನ್ನು ಜಯದೇವ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅವರಿಗೆ ನೀಡಿ ಗೌರವಿಸಲಾಯ್ತು. ಇದೇ ವೇಳೆ ಕೊರಟಗೆರೆ ತಾಲ್ಲೂಕು ಹನುಮಂತಯ್ಯನಪಾಳ್ಯ ಗ್ರಾಮವನ್ನು ಮಠ ದತ್ತುತೆಗೆದುಕೊಂಡಿದೆ.
16 ವರ್ಷದ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಗ್ರಾಮ ದತ್ತು.
ಕೊರಟಗೆರೆ ತಾಲ್ಲೂಕು ಹನುಮಂತಯ್ಯನಪಾಳ್ಯ ಗ್ರಾಮವನ್ನು ಮಠ ದತ್ತುತೆಗೆದುಕೊಂಡಿದೆ. ಗ್ರಾಮ ಮೂಲಭೂತ ಸೌಕರ್ಯ ಸೇರಿದಂತೆ ಸಂಪೂರ್ಣ ಅಭಿವೃದ್ಧಿ ಮಾಡುವ ಪಣವನ್ನು ಸಿದ್ದರಬೆಟ್ಟ ಬಾಳೇ ಹೊನ್ನೂರು ಶಾಖಾ ಮಠ ತೆಗೆದುಕೊಂಡಿದೆ. ಅಲ್ಲದೆ ಪ್ರತಿ ವರ್ಷವೂ ಕೂಡ ಒಂದೊಂದು ಗ್ರಾಮವನ್ನು ದತ್ತು ತೆಗೆದುಕೊಳ್ಳುವ ನಿರ್ಧಾರವನ್ನು ಮಾಡಲಾಗಿದೆ. ಮಠದ ಈ ಮಹತ್ಕಾರ್ಯಕ್ಕೆ ಗೃಹ ಸಚಿವ ವಿ.ಸೋಮಣ್ಣ ಕೂಡ ಬೆಂಬಲ ವ್ಯಕ್ತಪಡಿಸಿದ್ರು.
ನಿಮ್ಮ ಜಿಲ್ಲೆಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನವಜೋಡಿಗಳಿಗೆ ಚಿನ್ನದ ತಾಳಿ,ವಸ್ತ್ರ ಉಡುಗೊರೆ
ಪ್ರತಿ ವರ್ಷದಂತೆ ಈ ಭಾರಿಯೂ ಕೂಡ ಸಾಮೂಹಿಕ ವಿವಾಹ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಕೊರಟಗೆರೆ, ಮಧುಗಿರಿ, ಶಿರಾ, ತುಮಕೂರು ತಾಲ್ಲೂಕಿನ 27 ಜೋಡಿಗಳಿಗೆ ಸಪ್ತಪದಿ ತುಳಿದರು. ನವವಿವಾಹಿತರಿಗೆ ಚಿನ್ನದ ತಾಳಿ, ವಧುವಿಗೆ ಸೀರೆ ಹಾಗೂ ವರನಿಗೆ ಬಟ್ಟೆ ನೀಡಿ ಶುಭಹಾರೈಸಲಾಗಿಯ್ತು.
ಪುಸ್ತಕ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ
ಬಡ ಶಾಲಾ ಮಕ್ಕಳಿಗೆ ಹಾಗೂ ಓದುಗ ಹವ್ಯಾಸಿ ವರ್ಗ ಸೃಷ್ಟಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಮಠದ ವತಿಯಿಂದ ಪುಸ್ತಕ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಜನರು ಒಂದು ಪುಸ್ತಕ ದಾನ ನೀಡಿ ಎರಡು ಪುಸ್ತಕಗಳನ್ನು ತೆಗೆದುಕೊಂಡು ಹೋಗುವ ವಿನೂತನ ಪ್ರಯತ್ನಕ್ಕೆ ಭಕ್ತರು ಅದ್ಭುತವಾಗಿ ಸ್ಪಂದಿಸಿದ್ರು. ಸುಮಾರು 10 ಸಾವಿರ ಪುಸ್ತಕ ಸಂಗ್ರಹವಾಗಿದೆ. ಮಠದ ಈ ಪ್ರಯತ್ನಕ್ಕೆ ಕೊರಟಗೆರೆ ತಾಲ್ಲೂಕು ಗ್ರಾ.ಪಂ ಗ್ರಂಥಪಾಲಕರ ಸಂಘ ಕೂಡ ಕೈ ಜೋಡಿಸಿದೆ.
ಭರ್ಜರಿ ಭೋಜನದ ವ್ಯವಸ್ಥೆ
ಕಾರ್ಯಕ್ರಮಕ್ಕೆ ಅಂದಾಜು 20 ಸಾವಿರ ಭಕ್ತರು ಆಗಮಿಸಿದ್ದರು, ಬಂದಂತಹ ಭಕ್ತರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಪಾಯಸ, ಬೂಂದಿ, ಮಾಲ್ದಿ,ಅನ್ನಸಾರು, ಮಜ್ಜಿಗೆ ಹೆಸರುಬೆಳೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರು ಪುಷ್ಕಳ ಭೋಜನದ ಸವಿ ಸವಿದರು. ಇನ್ನು ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡು ಭಕ್ತರನ್ನು ಹರಸಿದ್ರು.
ರಂಭಾಪುರಿ ಮಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಚಾರ್ಯ ಸ್ವಾಮೀಜಿ ಹಿಮವತ್ಕೇದಾರ ಪೀಠದ ಭೀಮಾಶಂಕರಲಿಂಗ ಶಿವಚಾರ್ಯ ಸ್ವಾಮೀಜಿ, ವಸತಿ ವಿ.ಸೋಮಣ್ಣ, ಶಾಸಕ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.