ಪತ್ರಕರ್ತರು ಗ್ರಾಮವಾಸ್ತವ್ಯ ಮಾಡಿದ ಊರಿಗೆ ರಸ್ತೆ ಭಾಗ್ಯ!

By Suvarna News  |  First Published Jun 27, 2022, 1:18 PM IST

ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮಕ್ಕೀಗ ಅಭಿವೃದ್ಧಿ ಶಕೆ


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ‌ಮಂಗಳೂರು

ಮಂಗಳೂರು(ಜೂ.27): ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮಕ್ಕೀಗ ಅಭಿವೃದ್ಧಿ ಶಕೆ. ಎರಡು ವರ್ಷಗಳ ಹಿಂದೆ ಪತ್ರಕರ್ತರು ಗ್ರಾಮವಾಸ್ಯವ್ಯ ಮಾಡಿದ ಊರಿಗೆ 1.35 ಕೋಟಿ ಅನುದಾನದಲ್ಲಿ ರಸ್ತೆ ನಿರ್ಮಾಣಗೊಂಡು ಉದ್ಘಾಟನೆಯಾಗಿದೆ.

Tap to resize

Latest Videos

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 2020 ಜನವರಿ 5 ರಂದು ಮಡಪ್ಪಾಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗಿತ್ತು. ಸಚಿವರು, ಸಂಸದರು, ಶಾಸಕರು ಸೇರಿ ಜನಪ್ರತಿನಿಧಿಗಳು ಹಾಗು ಜಿಲ್ಲಾಧಿಕಾರಿ ಸೇರಿ ಅಧಿಕಾರಿಗಳು ಭಾಗವಹಿಸಿದ ಗ್ರಾಮ ವಾಸ್ತವ್ಯದಲ್ಲಿ ನೂರಾರು ಮಂದಿ  ಗ್ರಾಮದ ಪ್ರಮುಖ ಬೇಡಿಕೆಗಳನ್ನು ಮಂಡಿಸಿದ್ದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸಚಿವ ಎಸ್.ಅಂಗಾರ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಲವು ಅಭಿವೃದ್ಧಿಗೆ ಅನುದಾನ ಒದಗಿಸಿದ್ದಾರೆ.

ಮಡಪ್ಪಾಡಿ ಗ್ರಾಮವನ್ನು ಸಂಪರ್ಕಿಸುವ ಸೇವಾಜೆ- ಮಡಪ್ಪಾಡಿ ರಸ್ತೆ ಅಭಿವೃದ್ಧಿಗೆ  ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ 1.5 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಇದೀಗ ರಸ್ತೆ ಕಾಮಗಾರಿ ಪೂರ್ತಿಯಾಗಿ ಉದ್ಘಾಟನೆಗೊಂಡಿದೆ. ಸಚಿವ ಎಸ್. ಅಂಗಾರ ಅವರು ಕಳೆದ ಎರಡು ವರ್ಷದಲ್ಲಿ ಹಲವು ಅಭಿವೃದ್ಧಿಗೆ ಅನುದಾನ ಒದಗಿಸಿದ್ದಾರೆ.

ಗ್ರಾಮದ ಪ್ರಮುಖ ಬೇಡಿಕೆಯಾದ ಮಡಪ್ಪಾಡಿ- ಹಾಡಿಕಲ್ಲು ರಸ್ತೆಗೆ 80 ಲಕ್ಷ ಅನುದಾನ ಒದಗಿಸಿದ್ದಾರೆ. ಇನ್ನೊಂದು ಬೇಡಿಕೆ  ಎಳುವೆ ಸೇತುವೆ ಒಂದು ಕೋಟಿ ಅನುದಾನ ನೀಡಿ ಕಾಮಗಾರಿ ಪೂರ್ತಿಯಾಗಿದೆ. ಪತ್ರಕರ್ತರು, ಜನರು ಮುಂದಿರಿಸಿದ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಆದ್ಯತೆಯ ಮೇರೆಗೆ ಪ್ರಯತ್ನ ನಡೆಸುವುದಾಗಿ ಸಚಿವ ಅಂಗಾರ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ  ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಬಳಿಕ ಕಳೆದ ಎರಡು ವರ್ಷದಲ್ಲಿ ಗ್ರಾಮದಲ್ಲಿ ಹಲವು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆತಿದೆ.

ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮವನ್ನು ಸಂಪರ್ಕಿಸುವ ಸೇವಾಜೆ- ಮಡಪ್ಪಾಡಿ ರಸ್ತೆ ಅಭಿವೃದ್ಧಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಯತ್ನ ಮತ್ತು ಗ್ರಾಮ ವಾಸ್ತವ್ಯದ ಫಲವಾಗಿ ಸರಕಾರ ಒಂದೂವರೆ ಕೋಟಿ ರೂ ಅನುದಾನ ಬಿಡುಗಡೆ ಮಾಡಿತ್ತು. ಜ.11ರಂದು ಶಂಕುಸ್ಥಾಪನೆ ನೆರವೇರಿ ಕಾಮಗಾರಿ ಆರಂಭಗೊಂಡಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ 2020 ಜನವರಿ 5 ರಂದು ಮಡಪ್ಪಾಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಮಡಪ್ಪಾಡಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡಬೇಕು ಎಂಬುದು ಜನರಿಂದ ಕೇಳಿ ಬಂದ ಪ್ರಮುಖ ಬೇಡಿಕೆಯಾಗಿತ್ತು.

ಬಳಿಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ನೇತೃತ್ವದ ಪತ್ರಕರ್ತರ ನಿಯೋಗ ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮಡಪ್ಪಾಡಿಯ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಕೂಡಲೇ ಸ್ಪಂದಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು 2 ಕೋಟಿ ಅನುದಾನ ಘೋಷಣೆ ಮಾಡಿದ್ದರು.

ಅದರಲ್ಲಿ 1.5 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪೂರ್ತಿಯಾಗಿದೆ. ಎಲಿಮಲೆಯಿಂದ ಮಡಪ್ಪಾಡಿಗೆ 9 ಕಿ.ಮಿ.ದೂರವಿದೆ. ಎಲೆಮಲೆ- ಅರಂತೋಡು ಲೋಕೋಯೋಗಿ ರಸ್ತೆಯ ಸೇವಾಜೆಯಿಂದ ಮಡಪ್ಪಾಡಿಗೆ 5 ಕಿ.ಮಿ.ದೂರ ಇದೆ. ಇದರಲ್ಲಿ 1.5 ಕಿ. ಅಭಿವೃದ್ಧಿಯಾಗಿತ್ತು. ಉಳಿದ 3.7 ಕಿ.ಮಿ. ರಸ್ತೆ ಸಂಪೂರ್ಣ ಎಕ್ಕುಟ್ಟಿ ಹೋಗಿತ್ತು. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಿತ್ತು. ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯು ಕಾಮಗಾರಿ ಅನುಷ್ಠಾನ ಮಾಡಿದೆ. ರಸ್ತೆಯ 3.75 ಕಿ.ಮಿ. ಅಭಿವೃದ್ಧಿಯಾಗಿದೆ. 3.75 ಮೀಟರ್ ಅಗಲದಲ್ಲಿ ಅಭಿವೃದ್ಧಿಯಾಗಿದ್ದು 150 ಮೀಟರ್ ಕಾಂಕ್ರೀಟೀಕರಣ ಮತ್ತು 3.6 ಕಿ.ಮಿ. ಡಾಮರೀಕರಣ ನಡೆದಿದೆ. 3 ಮೋರಿಗಳು ನಿರ್ಮಾಣವಾಗಿದೆ.

click me!