
ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಐತಿಹಾಸಿಕ ರಾವುತರಾಯ ಜಾತ್ರಾ ಮಹೋತ್ಸವದಲ್ಲಿ ನುಡಿದಿರುವ ಕಾರ್ಣಿಕ ನುಡಿ ಮತ್ತೆ ರಾಜ್ಯದ ಗಮನ ಸೆಳೆದಿದೆ.
ವಿಜಯದಶಮಿ ಬಳಿಕ ದ್ವಾದಶಿಯಿಂದ ರಾವುತರಾಯನ ಜಾತ್ರೆ ಆರಂಭವಾಗಿದೆ. ಬಂಡಿ ಜಾತ್ರೆಯ ಪ್ರಯುಕ್ತ ತೆರೆದ ಬಂಡಿಯಲ್ಲಿ ಅಶ್ವಾರೂಢನಾಗಿ ಮಾನೆದೊಡ್ಡಿಗೆ ರಾವುತರಾಯ ತೆರಳಿದರು. ಶಿವನ ಅವತಾರ ಮಾರ್ತಾಂಡ ಭೈರವನಿಗೆ ರಾವುತರಾಯ. ಈ ಜಾತ್ರೆಯಲ್ಲಿ ರಾವುತರಾಯಗೆ ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ.
ಇಲ್ಲಿನ ಇನ್ನೊಂದು ವಿಶೇಷ ಏನೆಂದರೆ.. ರಥೋತ್ಸವದ ಬದಲಾಗಿ ಬಂಡಿಯಲ್ಲಿ ರಾವುತರಾಯನ ಮೆರವಣಿಗೆ ನಡೆಯತ್ತದೆ. ರಾವುತರಾಯನಿಗೆ ಭಂಡಾರ ಎರಚಿ ಸಾವಿರಾರು ಭಕ್ತರು ಪಾವನರಾದರು. ಇನ್ನು ಈ ಜಾತ್ರೆಯಲ್ಲಿ ಕಾರ್ಣಿಕ ನುಡಿಗೆ ತುಂಬಾನೇ ಮಹತ್ವ ನೀಡಲಾಗುತ್ತದೆ. ತಲತಲಾಂತರಗಳಿಂದ ರಾವುತರಾಯನ ಕಾರ್ಣಿಕ ನುಡಿ ಕೇಳಲಾಗುತ್ತದೆ. ಇಲ್ಲಿ ಕೇಳಿಬರುವ ಭವಿಷ್ಯವಾಣಿ ನಾಡಿನ ಮುಂದಿನ ದಿಕ್ಸೂಚಿ ಎಂದು ನಂಬಲಾಗುತ್ತದೆ.
ಜಾತ್ರೆಯಲ್ಲಿ ರಾವುತರಾಯನ ಕಾರ್ಣಿಕ ನುಡಿ ಭಕ್ತರ ಗಮನ ಸೆಳೆಯಿತು. ಮಳೆ ಇಲ್ಲವೆಂದು ಕೊರಗಬೇಡಿ, ಮುತ್ತಿನ ಜಾಳಗಿ ಹಾಕಿ ಸರ್ವ ಮಳೆ ಕೊಡ್ತೀನಿ ಎಂದು ಕಾರ್ಣಿಕ ಹೇಳಿದೆ. ಮಳೆ ಹೋದಂತೆ ಧೈರ್ಯ ಬಿಡಬೇಡಿ, ಒಂದು ಸರ್ವ ಕೊಟ್ಟು ಸಲಹುತ್ತೇನೆ ಎಂಬ ಭವಿಷ್ಯವಾಣಿ ಇದಾಗಿದೆ. ಜೊತೆಗೆ ಜೋಡು ಬಾಂಬು ಬೀಳತಾವ ಹುಷಾರ್, ಯುದ್ಧದ ಭೀತಿ ಇದೆ ಎಂಬ ಎಚ್ಚರಿಕೆಯನ್ನೂ ನೀಡಿದೆ. ವಕ್ಕಲಿಗರಿಗೆ ಬಾಳ ಕಷ್ಟ ಬಂತು, ಎಷ್ಟೇ ಕಷ್ಟ ಬಂದರೂ ಕೈ ಹಿಡಿದು ಕಾಪಾಡ್ತೀನಿ ಎಂದು ಹೇಳಿದೆ. ಮಳೆ, ಕೃಷಿ, ಯುದ್ಧದ ಭೀತಿ ಹಾಗೂ ಸಂಕಷ್ಟದ ಕುರಿತು ಕಾರ್ಣಿಕ ನುಡಿಯಲಾಗಿದೆ. ಜಾತ್ರೆಯ ಕಾರ್ಣಿಕ ನುಡಿ ಬೆನ್ನಲ್ಲೇ ವಿಶ್ಲೇಷಕರು ತಮ್ಮದೇ ಅರ್ಥದಲ್ಲಿ ಚರ್ಚೆಯಲ್ಲಿ ತೊಡಗಿದಿದ್ದಾರೆ.
ಇನ್ನು, ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಭಕ್ತಿಭಾವದಲ್ಲಿ ಮಿಂದೆಂದ ಭಕ್ತರು ದೇವರಲ್ಲಿ ತಮ್ಮ ಇಷ್ಟಾರ್ಥಗಳನ್ನ ಈಡೇರಿಸುವಂತೆ ಕೇಳಿಕೊಂಡರು. ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಜಾತ್ರೆ ಸಂದರ್ಭದಲ್ಲಿನ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಸಾವಿರಾರು ಜನರು ಭಾಗಿಯಾಗಿರೋದನ್ನು ನಾವು ವಿಡಿಯೋಗಳಲ್ಲಿ ನೋಡಬಹುದಾಗಿದೆ.
ರಾವುತರಾಯ ಜಾತ್ರೆಯು ಉತ್ತರ ಕರ್ನಾಟಕದ ಪ್ರಸಿದ್ಧ ಹಾಗೂ ಐತಿಹಾಸಿಕ ಜಾತ್ರೆ ಆಗಿದೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಈ ಕ್ಷೇತ್ರ ಇರೋದು. ಶ್ರೀ ರಾವುತರಾಯ ಹಾಗೂ ಶ್ರೀ ಮಲ್ಲಯ್ಯ ಬಂಡಾರದ ಒಡೆಯ ಎಂದೇ ಖ್ಯಾತಿ ಪಡೆದುಕೊಂಡಿದೆ. ಸಂಪ್ರದಾಯದ ಪ್ರಕಾರ ಇಲ್ಲಿ ರಾವುತರಾಯ ಮತ್ತು ಗಂಗೆಮಾಳಮ್ಮರ ವಿವಾಹ ಸಮಾರಂಭ ವಿಜೃಂಭಣೆಯಿಂದ ನಡೆಯುತ್ತದೆ. ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಪುಷ್ಪಾಲಂಕಾರ, ಅನ್ನಸಂತರ್ಪಣೆ, ಡೊಳ್ಳು ಕುಣಿತ ಹಾಗೂ ವಗ್ಗಯ್ಯಗಳ ಕುಣಿತಗಳು ಜೋರಾಗಿ ನಡೆಯುತ್ತವೆ. ನಾಡಿನ ಮೂಲೆಗಳಿಂದ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿ-ಭಾವದಿಂದ ಈ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.