ಜೆಡಿಎಸ್-ಕೈ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಗೆ ಮೂವರು ಸಚಿವರಿದ್ದರು| ಈಗ ಮೂವರು ಬಿಜೆಪಿ ಶಾಸಕರ ಪೈಕಿ ಒಬ್ಬರಿಗೂ ಸಚಿವ ಸ್ಥಾನವಿಲ್ಲ| ಹೆಸರಿನಲ್ಲೇ ಜಯ ಹೊಂದಿದರೂ ಜಿಲ್ಲೆ ಅಪಜಯಪುರ| 8 ವಿಧಾನಸಭೆ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರ ಬಿಜೆಪಿ| ಈ ಒಂದು ಕ್ಷೇತ್ರವೂ ಸಚಿವ ಸ್ಥಾನ ಪಡೆಯಲಿಲ್ಲ|
ರುದ್ರಪ್ಪ ಆಸಂಗಿ
ವಿಜಯಪುರ(ಫೆ.07): ಬಹು ನಿರೀಕ್ಷಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ಒಂದೂ ಸಚಿವ ಸ್ಥಾನ ಸಿಗದೆ ಜಿಲ್ಲೆಯು ಸಚಿವ ಸ್ಥಾನದಿಂದ ಮತ್ತೆ ವಂಚಿತವಾಗಿದೆ.
undefined
ಜಿಲ್ಲೆಯಲ್ಲಿ 8 ವಿಧಾನಸಭೆ ಮತ ಕ್ಷೇತ್ರಗಳ ಪೈಕಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ವೇಳೆ ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲೂ ಜಿಲ್ಲೆಗೆ ಪ್ರಾತಿನಿಧ್ಯ ದೊರೆತಿರಲಿಲ್ಲ. ಸಚಿವ ಸಂಪುಟ ವಿಸ್ತರಣೆ ವೇಳೆಗಾದರೂ ಸಚಿವ ಸ್ಥಾನ ದೊರೆಯಬಹುದು ಎಂಬ ಆಶಾಭಾವನೆಯಿಂದ ಜಿಲ್ಲೆಯ ಮೂವರು ಬಿಜೆಪಿ ಶಾಸಕರು ರಹಸ್ಯವಾಗಿಯೇ ವರಿಷ್ಠರ ಮೇಲೆ ಒತ್ತಡ ಹೇರಿ, ತೆರೆಮರೆಯಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದರು. ಬಹಿರಂಗವಾಗಿ ಲಾಬಿ ನಡೆಸಿಲ್ಲ ಎಂದು ತೋರಿಸಿಕೊಳ್ಳುವುದರಲ್ಲಿ ಜಾಣ್ಮೆ ಮೆರೆದಿರುವುದು ಈಗ ಬಹಿರಂಗ ಗುಟ್ಟು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎರಡನೆ ಬಾರಿಯೂ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ನಿರಾಸೆ ಮೂಡಿಸಿದೆ. ಸಚಿವ ಸ್ಥಾನ ಸಿಗದಿರುವುದಕ್ಕೆ ಬಹಿರಂಗವಾಗಿ ಅಸಮಾಧಾನ ತೋರಿಸಿಕೊಳ್ಳದಿದ್ದರೂ ಕೆಲವು ಬಿಜೆಪಿ ಮುಖಂಡರು, ಕಾರ್ಯಕರ್ತರಲ್ಲಿ ಅಸಮಾಧಾನದ ಬೇಗುದಿ ಇದೆ. ಇದು ಯಾವಾಗ ಸ್ಫೋಟಗೊಳ್ಳುತ್ತದೆಯೋ ಗೊತ್ತಿಲ್ಲ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
2008-09ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಕೆಲವು ತಿಂಗಳುಗಳವರೆಗೆ ಮಾತ್ರ ಎಸ್.ಕೆ.ಬೆಳ್ಳುಬ್ಬಿ ಸಚಿವರಾಗಿದ್ದರು. ಅದಾದ ಬಳಿಕ ವಿಜಯಪುರ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತವಾಗಿತ್ತು. 2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಎಂ.ಬಿ.ಪಾಟೀಲರು ಸಚಿವರಾಗಿದ್ದರು. 2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂತು. ಆಗ ವಿಜಯಪುರ ಜಿಲ್ಲೆ ಮೂವರು ಸಚಿವ ಸ್ಥಾನ ಪಡೆದಿತ್ತು. ಕಾಂಗ್ರೆಸ್ ಖೋಟಾದಿಂದ ಶಿವಾನಂದ ಪಾಟೀಲ, ಎಂ.ಬಿ. ಪಾಟೀಲ ಹಾಗೂ ಜೆಡಿಎಸ್ ಖೋಟಾದಿಂದ ಸಿಂದಗಿಯ ಎಂ.ಸಿ. ಮನಗೂಳಿ ಸಚಿವರಾಗಿದ್ದರು.
ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ದೊರೆತಿಲ್ಲ. ಅನರ್ಹರ ಕೃಪೆಯಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನೀಡಿದ ಭರವಸೆಯಂತೆ ಗೆದ್ದು ಬಂದ ಅನರ್ಹ ಶಾಸಕರಿಗೆ ಮಾತ್ರ 10 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನದ ಬೇಡಿಕೆ ಇಟ್ಟಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರೂ ಅರ್ಹರಿಗೆ ಗುರುತಿಸಿ ಸಚಿವ ಸ್ಥಾನ ನೀಡುವುದಾದರೆ ನನ್ನನ್ನು ಪರಿಗಣಿಸುತ್ತಾರೆ ಎಂಬ ನಂಬಿಕೆಯ ಮಾತುಗಳನ್ನು ಬಹಿರಂಗವಾಗಿ ಹೇಳುತ್ತಿದ್ದರು. ಆದರೆ ಸಚಿವ ಸ್ಥಾನ ಸಿಗದ್ದಕ್ಕೆ ಯತ್ನಾಳ ಬೆಂಬಲಿಗರಲ್ಲಿ ನಿರಾಸೆ ಮೂಡಿದೆ.
ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸಚಿವ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಲಾಬಿ ಮಾಡಿದ್ದರು. ಸಿಎಂ ಸೇರಿ ಪಕ್ಷದ ವರಿಷ್ಠರಿಗೆ ಸಚಿವ ಸ್ಥಾನದ ಬಗ್ಗೆ ಒತ್ತಡವನ್ನೂ ಹಾಕಿದ್ದರು. ಆದರೆ ಸಚಿವ ಸ್ಥಾನ ದಕ್ಕದಿರುವುದು ನಡಹಳ್ಳಿ ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿದೆ. ಈ ಅಸಮಾಧಾನ ಬರುವ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುವುದು ನಿಗೂಢವಾಗಿದೆ.
ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಅವರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ ಸಚಿವ ಸ್ಥಾನಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಲಾಬಿ ಮಾಡಿರಲಿಲ್ಲ. ಹೀಗಾಗಿ ಸೋಮನಗೌಡ ಅವರ ಬೆಂಬಲಿಗರಲ್ಲಿ ಅಂತಹ ನಿರಾಸೆ ಕಂಡು ಬರುತ್ತಿಲ್ಲ. ಅಸಮಾಧಾನವಿದ್ದರೂ ಅದನ್ನು ಹೊರಗೆ ಹಾಕುತ್ತಿಲ್ಲ.
ಈ ಬಗ್ಗೆ ಮಾತನಾಡಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ನಾನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮುಂದೆ ಸಚಿವ ಸ್ಥಾನದ ಬೇಡಿಕೆ ಇಟ್ಟಿರಲಿಲ್ಲ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನವೇ ನನಗಿಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು . 500 ಕೋಟಿಗೂ ಹೆಚ್ಚು ಅನುದಾನ ಮಂಜೂರು ಮಾಡಿದ್ದಾರೆ. ಸಚಿವನಾಗಿ ರಾಜ್ಯದ ತುಂಬೆಲ್ಲ ಸಂಚರಿಸುವುದಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮಾಡುವುದು ನನಗೆ ಹೆಚ್ಚು ಖುಷಿ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಮೂಲ ಬಿಜೆಪಿಯ ಒಬ್ಬ ಶಾಸಕರಿಗೂ ಸಚಿವ ಸ್ಥಾನ ನೀಡಿಲ್ಲ. ಸಚಿವ ಸ್ಥಾನ ಸಿಗದಿರುವುದಕ್ಕೆ ಯಾವುದೇ ಅಸಮಾಧಾನವಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣೀಭೂತರಾದ 10 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕಿತ್ತು. ಮುಖ್ಯಮಂತ್ರಿಗಳು ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಿಂದ ನನಗೆ ಸಂತಸವಾಗಿದೆ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದ್ದಾರೆ.