ಬೆಳೆಯುತ್ತಿರುವ ವಿಜಯಪುರ ಮಹಾನಗರಕ್ಕೆ ಬೇಕಿದೆ ನಗರ ಸಾರಿಗೆ ಬಸ್‌ ನಿಲ್ದಾಣ!

By Kannadaprabha NewsFirst Published Jan 24, 2020, 11:30 AM IST
Highlights

ನಗರ ಸಾರಿಗೆ ಬಸ್‌ ನಿಲ್ದಾಣ ನೆನೆಗುದಿಗೆ| ಸದ್ಯ ಬೀದಿ ಬದಿಯ ಜಾಗವೇ ಬಸ್‌ ನಿಲ್ದಾಣ| ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ| ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಸ್ಥಳ ಪಡೆಯುವಲ್ಲಿ ಸಂಪೂರ್ಣ ವಿಫಲರಾದ ಅಧಿಕಾರಿಗಳು|

ರುದ್ರಪ್ಪ ಆಸಂಗಿ 

ವಿಜಯಪುರ(ಜ.24): ಐತಿಹಾಸಿಕ ವಿಜಯಪುರದಲ್ಲಿ ನಗರ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣವಿಲ್ಲದೆ ಪ್ರಯಾಣಿಕರು ಬೀದಿ ಬದಿಯಲ್ಲೇ ನಿಂತುಕೊಂಡು ಹೈರಾಣಾಗ​ಬೇ​ಕಾದ ದಯನೀಯ ಸ್ಥಿತಿ ಇನ್ನೂ ಇದೆ.ಹೌದು.

ವಿಜಯಪುರ ನಗರ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣ ಸ್ಥಾಪನೆ ಮಾಡಬೇಕು ಎಂಬ ಕೂಗು ನಗರವಾಸಿಗಳಿಂದ ಹಲವು ದಶಕಗಳಿಂದ ಕೇಳಿ ಬರುತ್ತಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ವಿಜಯಪುರ ನಿವಾಸಿಗಳ ಕೂಗಿಗೆ ಧ್ವನಿಯಾಗಿಲ್ಲ. ವಿಜಯಪುರದ ಜನರ ಹಲವು ದಶಕಗಳ ಬೇಡಿಕೆಯನ್ನು ಈಡೇರಿಸುವಲ್ಲಿ ಕಿಂಚಿತ್ತೂ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ವಿಜಯಪುರ ನಿವಾಸಿಗಳ ಕೂಗು ಅರಣ್ಯರೋದನವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿಜಯಪುರ ನಗರ ಐತಿಹಾಸಿಕವಷ್ಟೇಯಲ್ಲ. ಇದು ಮಹಾನಗರ ಪಾಲಿಕೆಯನ್ನು ಹೊಂದಿದೆ. ದಿನೇ ದಿನೆ ಮಹಾನಗರದ ಜನಸಂಖ್ಯೆ ಹಾಗೂ ನಗರವೂ ಬೆಳೆಯುತ್ತಿದೆ. ವಿಜಯಪುರ ನಗರವು ಈಗ ಸುಮಾರು ನಾಲ್ಕೈದು ಕಿಮೀಗಳವರೆಗೆ ಸುತ್ತಮುತ್ತಲೂ ಬೆಳವಣಿಗೆ ಹೊಂದಿದೆ. ಇಂತಹ ಬೃಹತ್‌ ನಗರದಲ್ಲಿ ನಗರ ಸಾರಿಗೆ ಬಸ್‌ಗಳ ಸಂಚಾರ ಎಷ್ಟುಮುಖ್ಯವೋ ಅಷ್ಟೇ ವಿಜಯಪುರದಲ್ಲಿ ನಗರ ಸಾರಿಗೆ ಬಸ್‌ ನಿಲ್ದಾಣವೂ ಅಷ್ಟೇ ಮಹತ್ವ ಪಡೆದಿದೆ. ಏಕೆಂದರೆ ಸದ್ಯಕ್ಕೆ ನಗರದ ವಿವಿಧ ಬಡಾವಣೆಗಳಿಗೆ ಸಂಚರಿಸುವ ನಗರ ಸಾರಿಗೆ ಬಸ್‌ಗಳು ನಗರದ ಗಾಂಧಿ ವೃತ್ತದಲ್ಲಿಯೇ ಬೀದಿ ಬದಿ ನಿಂತು ಪ್ರಯಾಣಿಕರು ನಗರ ಸಾರಿಗೆ ಬಸ್‌ ಹಿಡಿಯಬೇಕು.

ರಸ್ತೆ ಬದಿಯೇ ಬಸ್‌ ಇಳಿಯಬೇಕು. ವಿಜಯಪುರದ ಜನತೆಗೆ ಬೀದಿ ಪಕ್ಕದ ಜಾಗವೇ ನಗರ ಸಾರಿಗೆ ಬಸ್‌ ನಿಲ್ದಾಣ ಆಗಿ ಬಿಟ್ಟಿದೆ. ಚಳಿಗಾಲದಲ್ಲಿ ವಿಜಯಪುರದ ಜನತೆ ಸುಧಾರಿಸಿಕೊಂಡು ಇರುತ್ತಾರೆ. ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ವಿಜಯಪುರದ ಜನತೆ ನಗರ ಸಾರಿಗೆ ಬಸ್‌ ನಿಲ್ದಾಣವಿಲ್ಲದೆ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿಯೇ ಪ್ರಯಾಣಿಕರು ನಗರ ಸಾರಿಗೆ ಬಸ್‌ಗಾಗಿ ಕಾಯುವುದರಿಂದ ಮಳೆಯಲ್ಲಿ ನೆನೆದುಕೊಂಡು ನಿಲ್ಲಬೇಕಾಗುತ್ತದೆ. ಬೇಸಿಗೆಯಲ್ಲಿ ಉರಿ ಬಿಸಿಲಿನಲ್ಲಿಯೇ ಪ್ರಯಾಸ ಪಡಬೇಕಾಗಿದೆ.

ಸುಸಜ್ಜಿತವಾದ ನಗರ ಸಾರಿಗೆ ಬಸ್‌ ನಿಲ್ದಾಣ ನಿರ್ಮಾಣವಾದರೆ ಎಲ್ಲ ಕಡೆಗೆ ಓಡಾಡುವ ನಗರ ಸಾರಿಗೆ ಬಸ್‌ಗಳು ಬಸ್‌ ನಿಲ್ದಾಣದಲ್ಲೇ ಲಭ್ಯವಾಗುವುದರಿಂದ ವಿಜಯಪುರದ ಜನತೆಗೆ ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯಲು ಹೆಚ್ಚು ಅನುಕೂಲವಾಗುತ್ತದೆ. ಹೀಗಾಗಿ ಈ ಬಗ್ಗೆ ನಗರದ ನಿವಾಸಿಗಳು ಕಳೆದ ಹಲವಾರು ವರ್ಷಗಳಿಂದ ನಗರ ಸಾರಿಗೆ ಬಸ್‌ ನಿಲ್ದಾಣದ ಬೇಡಿಕೆಯನ್ನು ಸರ್ಕಾರದ ಮುಂದೆ ಪ್ರಬಲವಾಗಿ ಮಂಡಿಸುತ್ತ ಬಂದಿದ್ದಾರೆ. ಆದರೆ ವಿಜಯಪುರದ ಜನರ ಬೇಡಿಕೆ ಇನ್ನೂ ಈಡೇರದ ಅದು ಬೇಡಿಕೆಯಾಗಿಯೇ ಉಳಿದಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ.

ಹಿಂದಿನ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆಗ ಎಂ.ಬಿ. ಪಾಟೀಲರು ನಗರದ ವಿವಿಧ ಪ್ರದೇಶಗಳಲ್ಲಿ ನಗರ ಪ್ರದಕ್ಷಿಣೆ ನಡೆಸಿ ನಗರ ಸಾರಿಗೆ ಬಸ್‌ ನಿಲ್ದಾಣ ಸ್ಥಾಪನೆಗೆ ಸ್ಥಳಗಳನ್ನು ಪರಿಶೀಲಿಸಿದ್ದರು. ಆದರೆ ನಗರ ಸಾರಿಗೆ ಬಸ್‌ ನಿಲ್ದಾಣಕ್ಕೆ ಸ್ಥಳ ನಿಗದಿಪಡಿಸುವುದಕ್ಕಿಂತ ಮೊದಲೇ ಕಾಂಗ್ರೆಸ್‌ ಸರ್ಕಾರ ಅವಧಿ ಮುಗಿದು ಮತ್ತೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಇದಾದ ಬಳಿಕ ಈಗ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಬಂದಿದೆ. ಹೀಗಾಗಿ ವಿಜಯಪುರ ನಗರ ಸಾರಿಗೆ ಬಸ್‌ ನಿಲ್ದಾಣ ನಿರ್ಮಾಣ ನನೆಗುದಿಗೆ ಬಿದ್ದಿದೆ.

ವಿಜಯಪುರ ಜಿಲ್ಲೆಗೆ ಈ ಸಲ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆತಿಲ್ಲ. ಹೀಗಾಗಿ ಗದಗ ಜಿಲ್ಲೆಯ ಸಿ.ಸಿ.ಪಾಟೀಲ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರ ವಹಿಸಿಕೊಂಡ ನಂತರ ವಿಜಯಪುರಕ್ಕೆ ಒಂದೆರಡು ಸಲ ಬಂದಿದ್ದು ಬಿಟ್ಟರೆ ವಿಜಯಪುರದ ಜನತೆಯ ಪಾಲಿಗೆ ಅಪರೂಪವಾಗಿದ್ದಾರೆ. ಹೀಗಾಗಿ ನಗರದ ಜನತೆಯ ಬೇಡಿಕೆಗಳು ನನೆಗುದಿಗೆ ಬೀಳುವಂತಾಗಿವೆ.
ವಿಜಯಪುರ ನಗರ ಪ್ರದೇಶದಲ್ಲಿಯೇ 80ಕ್ಕೂ ಹೆಚ್ಚು ಐತಿಹಾಸಿಕ ಸಂರಕ್ಷಿತ ಸ್ಮಾರಕಗಳು ಇವೆ. ಅವುಗಳ ವೀಕ್ಷಣೆಗೆ ಸಕಾಲಕ್ಕೆ ನಗರ ಸಾರಿಗೆ ಬಸ್‌ಗಳ ಓಡಾಟ ವ್ಯವಸ್ಥಿತವಾಗಿ ನಡೆಯಬೇಕಾದರೆ ನಗರ ಸಾರಿಗೆ ಬಸ್‌ ನಿಲ್ದಾಣ ಸ್ಥಾಪನೆ ಅಗತ್ಯವಿದೆ.

ಜನಪ್ರತಿನಿಧಿಗಳು, ಅಧಿಕಾರಿಗಳು ವಿಜಯಪುರದಲ್ಲಿ ನಗರ ಸಾರಿಗೆ ಬಸ್‌ ನಿಲ್ದಾಣ ಸ್ಥಾಪನೆ ಕುರಿತು ಹಲವಾರು ಸಭೆಗಳನ್ನು ನಡೆಸಿದ್ದಾರೆ. ಆದರೆ ಇದುವರೆಗೆ ಈ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಸ್ಥಳ ಪಡೆಯುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ. ನಗರ ಸಾರಿಗೆ ಬಸ್‌ ನಿಲ್ದಾಣ ಸ್ಥಾಪನೆಗೆ ಭೂ ಸ್ವಾಧೀನ ಮಾಡಿಯಾದರೂ ಜಾಗ ಪಡೆದು ನಗರ ಸಾರಿಗೆ ಬಸ್‌ ನಿಲ್ದಾಣವನ್ನು ಸೂಕ್ತ ಸ್ಥಳದಲ್ಲಿ ಸ್ಥಾಪಿಸಬೇಕು ಎಂಬುವುದು ವಿಜಯಪುರ ಜನರ ಅಭಿಪ್ರಾಯವಾಗಿದೆ.

ರಾಜ್ಯದ ಬೃಹತ್‌ ನಗರಗಳಲ್ಲಿ ನಗರ ಸಾರಿಗೆ ಬಸ್‌ ನಿಲ್ದಾಣ ಪ್ರತ್ಯೇಕವಾಗಿದೆ. ಅಲ್ಲಿ ವ್ಯವಸ್ಥಿತವಾಗಿ ನಗರ ಸಾರಿಗೆ ಬಸ್‌ಗಳನ್ನು ಓಡಿಸಲಾಗುತ್ತದೆ. ಅದೇ ರೀತಿ ವಿಜಯಪುರದಲ್ಲೂ ನಗರ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೂಡಲೇ ನಗರ ಸಾರಿಗೆ ಬಸ್‌ ನಿಲ್ದಾಣ ಸ್ಥಾಪಿಸಬೇಕು ಎಂಬ ಬೇಡಿಕೆ ನಾನು ಸಣ್ಣವನಿದ್ದಾಗಲೇ ಕೇಳಿ ಬರುತ್ತಿದೆ. ನಾನು ಈಗ ವಯೋವೃದ್ಧನಾಗಿದ್ದೇನೆ. ಇನ್ನೂ ನಗರ ಸಾರಿಗೆ ಬಸ್‌ ನಿಲ್ದಾಣ ಸ್ಥಾಪನೆಯಾಗುತ್ತಿಲ್ಲ. ಅಭಿವೃದ್ಧಿ ವಿಷಯದಲ್ಲಿ ಇಂತಹ ನಿರ್ಲಕ್ಷ್ಯ ಅಧಿಕಾರಿಗಳು, ಜನಪ್ರತಿನಿಧಿಗಳು ಯಾರಿಂದಲೂ ಆಗಬಾರದು. ತ್ವರಿತವಾಗಿ ನಗರ ಸಾರಿಗೆ ಬಸ್‌ ನಿಲ್ದಾಣಕ್ಕೆ ಸರ್ಕಾರ ಮುಂದಾಗಬೇಕು ಎಂದು ವಿಜಯಪುರ ನಿವಾಸಿ ಬಸಪ್ಪ ಅಂಕಲಿ ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ವಿಜಯಪುರ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌. ಗಂಗಾಧರ ಅವರು, ವಿಜಯಪುರ ನಗರ ಸಾರಿಗೆ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಹಲವು ಜಾಗಗಳನ್ನು ಪರಿಶೀಲಿಸಲಾಗಿದೆ. ಆದರೆ ಇನ್ನೂ ಜಾಗ ನಿರ್ಧಾರವಾಗಿಲ್ಲ. ಜಾಗ ನಿರ್ಧಾರದ ಬಳಿಕವೇ ನಗರ ಸಾರಿಗೆ ಬಸ್‌ ನಿಲ್ದಾಣ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. 
 

click me!