
ವಿಜಯಪುರ (ಸೆ.03): ಭೀಮಾತೀರದ ರಕ್ತಚರಿತ್ರೆಯಲ್ಲಿ ಮತ್ತೊಂದು ಅಧ್ಯಾಯ ಆರಂಭವಾಗಿದೆಯೇ ಎಂಬ ಆತಂಕವನ್ನು ಮೂಡಿಸಿದ ಘಟನೆಯಲ್ಲಿ, ದೇವರ ನಿಂಬರಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮನಗೌಡ ಬಿರಾದಾರ್ ಅವರನ್ನು ಗುಂಡಿಕ್ಕಿ ಮತ್ತು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ಮಂಗಳವಾರ ಬೆಳಗ್ಗೆ 8:30 ರಿಂದ 8:45ರ ಸುಮಾರಿಗೆ ನಡೆದಿದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಹತ್ಯೆಯನ್ನು ಖಚಿತಪಡಿಸಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಜನ ಆರೋಪಿಗಳಾದ ರಜೀವುಲ್ಲಾ ಮಕಾನದಾರ್, ವಸೀಂ ಮಣಿಯಾರ್, ಫಿರೋಜ್ ಅವರಾದ್ ಮತ್ತು ಮೌಲಾಲಿ ಲಾಡೇಸಾಬ್ ಚೋರಗಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಆರೋಪಿಗಳ ಪ್ರಾಥಮಿಕ ವಿಚಾರಣೆಯಲ್ಲಿ ಹತ್ಯೆಯ ಹಿಂದಿನ ಕಾರಣಗಳು ಬೆಳಕಿಗೆ ಬಂದಿವೆ. ಆರೋಪಿಗಳ ಪ್ರಕಾರ, ಭೀಮನಗೌಡ ಅವರಿಂದ ತಮಗೆ ಅನ್ಯಾಯವಾಗಿದೆ ಎಂದು ಬಾಯಿಬಿಟ್ಟಿದ್ದಾರೆ. ಈ ಪ್ರಕರಣದ ಹಿಂದೆ ರಾಜಕೀಯ, ಆರ್ಥಿಕ ಹಾಗೂ ವೈಯಕ್ತಿಕ ದ್ವೇಷಗಳಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದೇ ಕಾರಣಗಳಿಗಾಗಿ, ಭೀಮನಗೌಡ ಬಿರಾದಾರ್ ಹತ್ಯೆಗೆ ಒಂದು ವರ್ಷದ ಹಿಂದೆಯೇ ಸಂಚು ರೂಪಿಸಲಾಗಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.
ಗಾರೆ ಕೆಲಸದ ಹುಡುಗ ಸಿಮೆಂಟ್ ಕಲಸುತ್ತಲೇ, 'ಅಪ್ಪಾ ನಾನೀಗ ಡಾಕ್ಟರ್ ಆಗ್ತಿದ್ದೇನೆ' ಎಂದ ಯಶಸ್ಸಿನ ಕಥೆ!
ಭೀಮನಗೌಡ ಅವರಿಗೆ ಜೀವ ಬೆದರಿಕೆ ಇದ್ದ ಕಾರಣ, ಅವರಿಗೆ ಪರವಾನಿಗೆ ಪಡೆದ ಪಿಸ್ತೂಲ್ ನೀಡಲಾಗಿತ್ತು. ಆದರೆ, ದುರ್ದೈವವಶಾತ್ ಘಟನೆ ನಡೆಯುವ ದಿನ ಅವರು ತಮ್ಮ ಪಿಸ್ತೂಲನ್ನು ಮನೆಯಲ್ಲೇ ಬಿಟ್ಟು ಕಟಿಂಗ್ ಶಾಪ್‌ಗೆ ಬಂದಿದ್ದರು. ಜೊತೆಗಿದ್ದವರು ಪಿಸ್ತೂಲ್ ತರಲು ಹೇಳಿದರೂ, ಭೀಮನಗೌಡ ಬೇಡ ಎಂದಿದ್ದರು ಎಂದು ತಿಳಿದುಬಂದಿದೆ. ಇದೇ ಸಮಯವನ್ನು ಹಂತಕರು ಬಳಸಿಕೊಂಡು ಹತ್ಯೆ ನಡೆಸಿದ್ದಾರೆ.
ಭೀಮನಗೌಡ ಹತ್ಯೆ ಖಂಡಿಸಿ ಅವರ ಸ್ವಗ್ರಾಮ ದೇವರ ನಿಂಬರಗಿಯಲ್ಲಿ ಸಾವಿರಾರು ಮಹಿಳೆಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ಪ್ರಕಾರ, ಭೀಮನಗೌಡ ಅವರು ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದರು. ಅವರನ್ನು ರಾಜಕೀಯ ದ್ವೇಷಕ್ಕಾಗಿ ಕೊಂದಿದ್ದಾರೆ ಎಂದು ಜನರು ದುಃಖದಿಂದ ಕಣ್ಣೀರಿಟ್ಟಿದ್ದಾರೆ. ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕೊಲೆಯಾದ ಭೀಮನಗೌಡ ಕೂಡ ಹಿಂದೆ ಒಂದು ಕೊಲೆ ಪ್ರಕರಣದ ಆರೋಪಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದು, ಈ ಹತ್ಯೆಗೆ ಭೀಮಾತೀರದ ರಕ್ತಚರಿತ್ರೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಪೊಲೀಸರು ಮುಂದಿನ ತನಿಖೆಗಾಗಿ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.