
ವಿಜಯನಗರ: ಕೊಟ್ಟೂರು ತಾಲೂಕಿನ ಹರಾಳು ಗ್ರಾಮವಾಸಿ ಗ್ರಾಮ ಆಡಳಿತಾಧಿಕಾರಿ ತಮ್ಮ ನೂತನ ಮನೆಗೆ "ಜನ ಗಣ ಮನ ನಿವಾಸ" ಎಂದು ನಾಮಕರಣ ಮಾಡಿ ಗಮನ ಸೆಳೆದಿದ್ದಾರೆ. ಅಲ್ಲದೇ ಮನೆ ಮುಂಭಾಗದ ಗೋಡೆಗೆ ಸಂಪೂರ್ಣ ರಾಷ್ಟ್ರ ಗೀತೆಯನ್ನು ಉಕ್ಕಿನ ಫಲಕದಲ್ಲಿ ಕೆತ್ತಿಸಿ ಅಭಿಮಾನ ಮೆರೆದಿದ್ದಾರೆ.
ತಾಲೂಕಿನ ಹರಾಳು ಗ್ರಾಮದ ಮದ್ದಾನಪ್ಪ ದುಮ್ಮಾಡಿ ಎನ್ನುವ ಯುವಕ ಇದೀಗ ಸಂಡೂರು ತಾಲೂಕಿನ ನಿಡುಗುರ್ತಿ ಗ್ರಾಪಂನಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶುಕ್ರವಾರ ತಮ್ಮ ನೂತನ ಮನೆ ಪ್ರವೇಶದ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಮನೆಯ ಗೋಡೆಗೆ ಜನ ಗಣ ಮನ ನಿವಾಸ ಎಂದು ಹೆಸರು ಬರೆಯಿಸಿದ್ದಾರೆ. ಇಷ್ಟೇ ಅಲ್ಲದೇ ಒಳ ಆವರಣದ ಮುಂಭಾಗದ ಟೈಲ್ಸ್ ಗೋಡೆಗೆ ಉಕ್ಕಿನ ಫಲಕ ಕೆತ್ತಿಸಿ ರಾಷ್ಟ್ರಗೀತೆ ಜನ ಗಣ ಮನದ ಸಂಪೂರ್ಣ ಗೀತೆ ಬರೆಯಿಸಿ ಕೆತ್ತಿಸಿ ಅಳವಡಿಸಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ಮನೆ ಮೇಲ್ಭಾಗದಲ್ಲಿ ರಾಷ್ಟ್ರಧ್ವಜ ಇರಿಸಿ 365 ದಿನವೂ ಭಾವುಟ ಹರಾಡುವಂತೆ ಮಾಡಿದ್ದಾರೆ.
ನೂತನ ಗೃಹ ಜನ ಗಣ ಮನ ನಿವಾಸದ ಆರಂಭೋತ್ಸವದ ಕಾರ್ಯಕ್ರಮಕ್ಕೆ ಶಾಸಕ ಕೆ.ನೇಮಿರಾಜ್ ನಾಯ್ಕ, ಎಂ.ಎಂ.ಜೆ. ಶೋಭಿತ್ ಮತ್ತಿತರ ಗಣ್ಯರು ಆಗಮಿಸಿ ಮದ್ದಾನಪ್ಪ ದುಮ್ಮಾಡಿಯವರ ವಿಶಿಷ್ಠ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ತಾನೊಬ್ಬ ಗ್ರಾಮಾಡಳಿತಾಧಿಕಾರಿಯಾಗಿ ತಾನು ಸೇವೆ ಸಲ್ಲಿಸುತ್ತಿರುವ ರಾಷ್ಟ್ರದ ಹೆಮ್ಮೆಯ ಪುತ್ರನಾಗಿರುವುದಕ್ಕೆ ಜನ ಗಣ ಮನ ನಿವಾಸ ನಿರ್ಮಿಸಿರುವುದು ಸಾರ್ವಜನಿಕರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಶೈಕ್ಷಣಿಕ ಕಲಿಕೆಯಿಂದಲೇ ರಾಷ್ಟ್ರ ಪ್ರೇಮ ಬಗ್ಗೆ ಒಲವು ಮೂಡಿಸಿಕೊಂಡು ಬಂದಿರುವ ಕಾರಣಕ್ಕಾಗಿ ತನ್ನ ಸ್ವಂತ ಮನೆಗೆ ಜನ ಗಣ ಮನ ಎಂದು ಹೆಸರು ಇಡಬೇಕೆಂದು ಹಂಬಲಿಸುತ್ತಿದ್ದೆ. ಇದೀಗ ಉದ್ಯೋಗ ದೊರಕಿ ಕುಟುಂಬ ಸಮೇತರಾಗಿ ನೆಮ್ಮದಿಯಾಗಿರಲು ಸೂರು ಕಟ್ಟಿಕೊಂಡ ಮೇಲೆ ದೇಶ ಪ್ರೇಮದ ಸಂಕೇತವಾಗಿ ನೂತನ ಮನೆಗೆ ರಾಷ್ಟ್ರ ಗೀತೆ ಅಳವಡಿಸಿರುವೆ ಈ ಮೂಲಕ ರಾಷ್ಟ್ರ ಗೀತೆಗೆ ಗೌರವ ಸಲ್ಲಿಸುವ ಸಣ್ಣ ಕೆಲಸ ಮಾಡಿರುವೆ ಎಂದು ಮದ್ದಾನಪ್ಪ ದುಮ್ಮಾಡಿ (ವಿಎಓ ಹರಾಳು ಕೊಟ್ಟೂರು ತಾಲೂಕು) ಹೇಳುತ್ತಾರೆ.