Vijayanagara| Padma Shri ಪುರಸ್ಕೃತೆ ಮಂಜಮ್ಮ ಜೋಗತಿಗೆ ಜಿಲ್ಲಾಡಳಿತದಿಂದ ಸನ್ಮಾನ

By Kannadaprabha NewsFirst Published Nov 15, 2021, 12:51 PM IST
Highlights

*   ಮಂಜಮ್ಮ ಜೋಗತಿಗೆ ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನ
*   ಗಮನ ಸೆಳೆದಿದ್ದ ಕನ್ನಡಪ್ರಭ
*   ಮನ್ನಣೆ ಇದ್ದರೂ ತಪ್ಪಲಿಲ್ಲ ಮಂಜಮ್ಮ ಜೋಗತಿ ಕಣ್ಣೀರು

ಮರಿಯಮ್ಮನಹಳ್ಳಿ(ನ.15):  ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪದ್ಮಶ್ರೀ(Padma Shri) ಪ್ರಶಸ್ತಿ ಸ್ವೀಕರಿಸಿ ಮರಿಯಮ್ಮನಹಳ್ಳಿಗೆ ಆಗಮಿಸಿದ ಮಂಜಮ್ಮ ಜೋಗತಿ(Manjamma Jogathi) ಅವರನ್ನು ಅವರ ನಿವಾಸದಲ್ಲಿ ಜಿಲ್ಲಾಡಳಿತದಿಂದ ಹೊಸಪೇಟೆ ತಹಸೀಲ್ದಾರ್‌ ಎಚ್‌. ವಿಶ್ವನಾಥ ಮತ್ತು ಅವರ ಸಿಬ್ಬಂದಿ ವರ್ಗವು ಭಾನುವಾರ ಬೆಳಗ್ಗೆ ಆತ್ಮೀಯವಾಗಿ ಸನ್ಮಾನಿಸಿದರು.

ತಹಸೀಲ್ದಾರ್‌ ಎಚ್‌. ವಿಶ್ವನಾಥ ಮಾತನಾಡಿ, ವಿಜಯನಗರ(Vijayanagara) ಮತ್ತು ಬಳ್ಳಾರಿ(Ballari) ಜಿಲ್ಲೆಯಿಂದ ಪದ್ಮಶ್ರೀ ಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿ ತಂದ ಮಂಜಮ್ಮ ಜೋಗತಿ ಅವರನ್ನು ಜಿಲ್ಲಾಡಳಿತದಿಂದ(District Administration) ಗೌರವಪೂರ್ವಕವಾಗಿ ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿ ಗೌರವಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕಲಾವಿದೆ ಡಾ. ಕೆ. ನಾಗರತ್ನಮ್ಮ, ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಕಲಾ ರಂಗದ ಅಧ್ಯಕ್ಷ ಎಂ.ಎಸ್‌. ಶಿವನಗುತ್ತಿ, ಸದಸ್ಯರಾದ ಸುರೇಶ್‌ ದೇವರಮನಿ, ಅಂಚೆ ಕೊಟ್ರೇಶ್‌, ಬಿ.ಎಂ. ಗಿರೀಶ್‌, ಕೆ.ಎಂ. ಪ್ರಭುವೀರಸ್ವಾಮಿ, ಮರಿಯಮ್ಮನಹಳ್ಳಿಯ ಕಲಾವಿದ ಸರದಾರ ನೀನಾಸಂ, ಗೌರಿ ಜೋಗತಿ, ಅಂಜಿನಮ್ಮ ಜೋಗತಿ, ಹರಪನಹಳ್ಳಿಯ ಹಗಲುವೇಷ ಕಲಾವಿದ ಮೋತಿ ಮಾರುತಿ ತಂಡ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಜನರು ಬಂದು ಮಂಜಮ್ಮ ಜೋಗತಿ ಅವರನ್ನು ಗೌರವಿಸಿದರು.

Padma Awards 2021| ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ: ಹರೇಕಳ ಹಾಜಬ್ಬ, ಕಂಬಾರ, ತುಳಸಿ ಗೌಡಗೆ ಗೌರವ!

ಗಮನ ಸೆಳೆದಿದ್ದ ಕನ್ನಡಪ್ರಭ

ಮಂಜಮ್ಮ ಜೋಗತಿ ಅವರು ದೆಹಲಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಶನಿವಾರವೇ ಸ್ವಗ್ರಾಮ ಮರಿಯಮ್ಮನಹಳ್ಳಿಗೆ ಆಗಮಿಸಿದ್ದರು. ಆದರೆ ಅವರನ್ನು ಜಿಲ್ಲಾಡಳಿತದಿಂದ ಸ್ವಾಗತಿಸದೇ ನಿರ್ಲಕ್ಷ್ಯ ತೋರಲಾಗಿತ್ತು. ಈ ಕುರಿತು ‘ಕನ್ನಡಪ್ರಭ’ (Kannada Prabha) ನ. 14ರಂದು ‘ಪದ್ಮಶ್ರೀ ಪಡೆದು ಸ್ವಗ್ರಾಮಕ್ಕೆ ಬಂದರೂ ಸ್ವಾಗತಿಸದ ಜಿಲ್ಲಾಡಳಿತ’ ಎಂಬ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಭಾನುವಾರ ತಹಸೀಲ್ದಾರ್‌ ಎಚ್‌. ವಿಶ್ವನಾಥ ಅವರು ಮಂಜಮ್ಮ ಅವರ ಮನೆಗೆ ಆಗಮಿಸಿ ಸನ್ಮಾನಿಸಿದರು.

ಮನ್ನಣೆ ಇದ್ದರೂ ತಪ್ಪಲಿಲ್ಲ ಮಂಜಮ್ಮ ಜೋಗತಿ ಕಣ್ಣೀರು

ತನಗೊಲಿದಿರುವ ಜಾನಪದ ಕಲೆಗೆ(Folk Art)ಜಾಗತಿಕ ಮನ್ನಣೆ ಸಿಕ್ಕರೂ ಜಾನಪದ ಅಕಾಡೆಮಿ ಅಧ್ಯಕ್ಷರಾದರೂ ಕರ್ನಾಟಕ ರಾಜ್ಯೋತ್ಸವ ಪದ್ಮಶ್ರಿಗಳಂತಹ ಅತ್ಯುನ್ನತ ಪ್ರಶಸ್ತಿಗಳಿಗೆ ಭಾಜನಳಾಗಿದ್ದರೂ ಮಂಜಮ್ಮ ಜೋಗತಿ ಒಂದು ಸೂರು ಕಟ್ಟಿಕೊಳ್ಳಲು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಸರ್ಕಾರದಿಂದ(Government of Karnataka) ಮಂಜೂರಾದ 17*10ಅಡಿ ಆಶ್ರಯ ಮನೆ ನಿರ್ಮಾಣಕ್ಕೆ ಕಳೆದ ಮೂರ್ನಾಲ್ಕು ವರ್ಷದಿಂದ ಅಲೆದಾಟ ತಪ್ಪುತ್ತಿಲ್ಲ.

ಕಡುಬಡತನವ ಕಂಡವರು, ಗಂಡುಮಗುವಾಗಿ ಮನೆ ಮಂದಿಯ ಪ್ರೀತಿ ಗಳಿಸಿ ಎಸ್‌ಎಸ್‌ಎಲ್‌ಸಿಗೆ ಬರುತ್ತಲೇ ತೃತೀಯ ಲಿಂಗಿಯಾಗಿ(Third Gender) ಸಮಾಜದಿಂದಷ್ಟೇ ಅಲ್ಲ ಮನೆಯರಿಂದಲೇ ಅಪಮಾನಿತಳಾದವರ. ಛೀಮಾರಿಯನ್ನೇ ಹೇರಳವಾಗಿ ಕಂಡರೂ ಧೈರ್ಯಗುಂದದೆ ಕಲಾವಿದಳಾಗಿ ಗುರುತಿಸಿಕೊಂಡು ಹೆಸರು ಮಾಡಿರುವ ಮಂಜಮ್ಮ ಜೋಗತಿ ಕಳೆದ ಸಾಲಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ(Karnataka Folk Academy) ಸದಸ್ಯರಾಗಿದ್ದವರು ಇದೀಗ ಅಧ್ಯಕ್ಷೆಯಾಗಿ ಪದ್ಮಶ್ರೀ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಬೆಳೆದರೂ ಸರ್ಕಾರದ 17*10 ಅಡಿಯ ಮನೆಯ ನಿರ್ಮಾಣಕ್ಕೂ ಹೆಣಗಾಡ್ತಿದ್ದಾರೆ.

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಮಂಜಮ್ಮ ಜೋಗತಿಗೆ ಸನ್ಮಾನಿಸಿದ ಜನಾರ್ದನ ರೆಡ್ಡಿ

ಈ ಕುರಿತಂತೆ ‘ಕನ್ನಡಪ್ರಭ’ಕ್ಕೆ ಮಾತನಾಡಿದ ಮಂಜಮ್ಮ ಜೋಗತಿ ಅವರು, ಸರ್ಕಾರದಿಂದ 2017-18ರಲ್ಲಿ ವಾಜಪೇಯಿ ವಸತಿ ಯೋಜನೆಯಡಿ ಕೇವಲ 17*10 ಸುತ್ತಳತೆಯ ಮನೆ ಮಂಜೂರಿ ಅಂತ, ಮರಿಯಮ್ಮನಹಳ್ಳಿಯಲ್ಲಿನ ಇದ್ದ ಕಚ್ಚಾ ಮನೆಯನ್ನು ಬೀಳಿಸಿ ಮನೆ ಕಟ್ಟಿಸಿಕೊಳ್ಳಲಾರಂಬಿಸಿದೆ. ಸರ್ಕಾರದಿಂದ ಅನುದಾನ ನಿಂತು ಮನೆ ಅಲ್ಲೇ ಕುಂತಿತು, ಬಾಡಿಗೆ ಮನೆಯಲ್ಲಿದ್ದೇನೆ, ಒಬ್ಬ ಅಜ್ಜಿಯನ್ನು ಇಬ್ಬರು ಹುಡುಗರನ್ನು ಸಾಕುತ್ತಿದ್ದೇನೆ, ಜೀವನೋಪಾಯ ಭಾರಿ ಸಂಕಷ್ಟಕ್ಕೆ ನೂಕಲ್ಪಟ್ಟಿದೆ ಎಂದು ಕಣ್ಣೀರಿಟ್ಟರು.

ಸರ್ಕಾರ ನನಗೆ ಅಕಾಡೆಮಿಯ ಅಧ್ಯಕ್ಷೆಯ ಸ್ಥಾನ ಕಲ್ಪಿಸಿಕೊಟ್ಟಿದೆ, ಪದ್ಮಶ್ರೀ ಪ್ರಶಸ್ತಿ ನೀಡಿದೆ. ಅದಕ್ಕೆ ನಾನು ಆಭಾರಿ. ಇದೆಲ್ಲದರ ಮಧ್ಯ ಬದುಕು ಕಷ್ಟಕರವಾಗಿದೆ. ಆರೋಗ್ಯಕ್ಕೇನಾದರೂ ಆದರೆ ಆಸ್ಪತ್ರೆ ಚಿಕಿತ್ಸೆಗೂ ದುಡ್ಡಿಲ್ಲ ಸಾಲ ಮಾಡಿಯೇ ಚಿಕಿತ್ಸೆ ಪಡೆಯೋ ದುಸ್ಥಿತಿ ಇದೆ ಎಂದು ಗೋಳು ತೋಡಿಕೊಂಡಿದ್ದಾರೆ.

ಮಾಜಿ ಸಚಿವ ಅರವಿಂದ ಲಿಂಬಾವಳಿ(Aravind Limbavali) ಹಾಗೂ ಮಾಜಿ ಸಚಿವ ಜನಾರ್ಧನ ರೆಡ್ಡಿ(Janardhana Reddy) ಅವರು ಭೂಮಿ ಕೊಡಿಸುವ ಭರವಸೆ ನೀಡಿದ್ದು ಮಂಜಮ್ಮ ಜೋಗುತಿ ಕನ್ನಡ ಭವನ ಮಾಡೋಣ ಎಂದು ಹೇಳಿದ್ದಾರೆ, ಮನವೀನೂ ಕೊಟ್ಟಿದ್ದೇನೆ ಏನಾಗುತ್ತೆ ಗೊತ್ತಿಲ್ಲ ಎಂದಿರುವ ಅವರ ಈ ಸಂಕಷ್ಟವನ್ನು ಸರ್ಕಾರ ಪರಿಹರಿಸಬೇಕಿದೆ, ದೇಶದ ಉನ್ನತ ಪ್ರಶಸ್ತಿ ಪಡೆದಿರುವ ಅವರಿಗೆ ಸೂರು ದೊರಕಿಸಿಕೊಡಬೇಕಿದೆ.
 

click me!