
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಸೇರಿದ ಸುಮಾರು 42 ವರ್ಷದ ‘ಲಕ್ಷ್ಮಿ’ ಹೆಸರಿನ ಆನೆಯನ್ನು ಅನಾರೋಗ್ಯದ ನೆಪ ಹೇಳಿ ಕೋಲಾರಕ್ಕೆ ಸ್ಥಳಾಂತರ ಮಾಡುವುದನ್ನು ವಿರೋಧಿಸಿ ಸ್ಥಳೀಯರು, ಭಕ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆಯವರು 3 ತಿಂಗಳ ಕಾಲ ಚಿಕಿತ್ಸೆಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಹೇಳುತ್ತಿರುವುದು ನೆಪಮಾತ್ರ. ಇಲ್ಲಿಂದ ಆನೆಯನ್ನು ಸ್ಥಳಾಂತರಿಸಿದರೆ ಅದು ವಾಪಸಾಗಲ್ಲ. ಯಾವುದೇ ಕಾರಣಕ್ಕೂ ಆನೆಯನ್ನು ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದು ಹಂಪಿ, ಕಮಲಾಪುರ, ಕಡ್ಡಿರಾಂಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಆನೆಗೆ ಅನಾರೋಗ್ಯದವಿದ್ದರೆ ಹಂಪಿಯಲ್ಲಿಯೇ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು. ಚಿಕಿತ್ಸೆ ಬಳಿಕ ಆನೆಯನ್ನು ವಾಪಸ್ ಕರೆತರಲಾಗುವುದು ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ತಿಳಿಸಿದ್ದಾರೆ.
ಆನೆಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಸೂಕ್ತ ಚಿಕಿತ್ಸೆಗೆ ಕೋಲಾರದಲ್ಲಿರುವ ಆನೆ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ಗುಣಮುಖವಾದ ನಂತರ ಪುನಃ ಹಂಪಿಗೆ ಕರೆ ತರಲಾಗವುದು. ಯಾರು ಕೂಡ ಈ ಬಗ್ಗೆ ಗಾಬರಿಯಾಗುವುದು ಬೇಡ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ತಿಳಿಸಿದ್ದಾರೆ.
ವಿಶ್ವವಿಖ್ಯಾತ ಹಂಪಿಯ ಪ್ರದೇಶದ ಹೊಸ ಹಂಪಿಯ ಮನೆಗಳ ಮುಂದೆ ಚಿರತೆ ಪ್ರತ್ಯಕ್ಷವಾಗಿ ಓಡಾಟದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೋಮವಾರ ರಾತ್ರಿ 12 ಗಂಟೆಗೆ ಸೆರೆಯಾದ ಬಗ್ಗೆ ವರದಿಯಾಗಿದೆ.ಹಂಪಿಯ ಜನತಾ ಪ್ಲಾಟ್‌ನಲ್ಲಿ ಈ ಹಿಂದೆಯೂ ಚಿರತೆ ಕಾಣಿಸಿಕೊಂಡಿತ್ತು. ಕಳೆದ ಮೂರು ತಿಂಗಳ ಹಿಂದೆ ನಡೆದ ಹಂಪಿ ಉತ್ಸವದಲ್ಲೂ ವಿರೂಪಾಕ್ಷೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು.
ಹಂಪಿ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟವಾದ ಕಾಡು ಇಲ್ಲದ ಕಾರಣ ಮತ್ತು ಕೆಲವೊಂದು ಬೆಟ್ಟ ಗುಡ್ಡಗಳಲ್ಲಿ ಸಹ ಚಿರತೆ ಆಹಾರ ಹುಡುಕುಲು ಆಗದೇ ಸುತ್ತಮುತ್ತಲಿನ ಗ್ರಾಮಗಳತ್ತ ಆಹಾರಕ್ಕಾಗಿ ಬರುತ್ತವೆ. ಆದರೂ ಕಮಲಾಪುರ, ಹಂಪಿ ಪ್ರದೇಶದಲ್ಲಿ ಚಿರತೆಯನ್ನು ಬಂಧಿಸಿಲು ಬೋನುಗಳನ್ನು ಇಡಲಾಗಿದೆ ಎಂದು ಅರಣ್ಯಇಲಾಖೆಯ ಅಧಿಕಾರಿಗಳು ತಿಳಿಸಿದರು.