ವಿಜಯನಗರದ ಉದ್ಯಮಿ ಕಿಡ್ನಾಪ್: ₹5 ಕೋಟಿ ಹಣಕ್ಕೆ ಬೇಡಿಕೆ ಇಟ್ಟ ಅಪಹರಣಕಾರರು! ಆಡಿಯೋ ವೈರಲ್

Published : Oct 10, 2025, 07:31 PM IST
Vijayanagara Businessman Manjunath Kidnap

ಸಾರಾಂಶ

ವಿಜಯನಗರದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ಉದ್ಯಮಿ ಮಂಜುನಾಥ ಶೇಜವಾಡ್ಕರ್ ಅವರನ್ನು ಅಪಹರಿಸಲಾಗಿದೆ. ಅಪಹರಣಕಾರರು 5 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ.

ವಿಜಯನಗರ (ಅ.10): ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ವಾಯು ವಿಹಾರಕ್ಕೆ ಹೋಗಿದ್ದ ಸ್ಥಳೀಯ ಉದ್ಯಮಿ ಹಾಗೂ ವರ್ತಕರೊಬ್ಬರನ್ನು ಅಪಹರಣ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಅಪಹರಣಕಾರರು ಕಿಡ್ನಾಪ್ ಮಾಡಿರುವ ವ್ಯಕ್ತಿಯ ಬಿಡುಗಡೆಗೆ ಪ್ರತಿಯಾಗಿ ಬರೋಬ್ಬರಿ 5 ಕೋಟಿ ರೂಪಾಯಿಗಳಷ್ಟು ಭಾರಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಇವರ ಮನೆಯವರು, ನಾವು ಕೇಳಿದಷ್ಟು ಹಣ ನೀಡದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಅಪಹರಣಕಾರರು ಮತ್ತು ಉದ್ಯಮಿಯ ಸಹೋದರಿಯ ನಡುವೆ ನಡೆದ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ವಾಯು ವಿಹಾರಕ್ಕೆ ಹೋಗಿದ್ದಾಗಲೇ ಅಪಹರಣ:

ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಹೊಳಲು ಗ್ರಾಮದ ವ್ಯಾಪಾರಿ ಮಂಜುನಾಥ ಶೇಜವಾಡ್ಕರ್ (58) ಎಂದು ಗುರುತಿಸಲಾಗಿದೆ. ಮಂಜುನಾಥ ಅವರು ಎಂದಿನಂತೆ ಶುಕ್ರವಾರ ಬೆಳಿಗ್ಗೆ 5.30ರ ಸುಮಾರಿಗೆ ಗ್ರಾಮದಿಂದ ಮೈಲಾರ ರಸ್ತೆಯಲ್ಲಿ ವಾಯು ವಿಹಾರಕ್ಕೆ ತೆರಳಿದ್ದರು. ಆದರೆ, ಮನೆಗೆ ಮರಳುವ ಸಮಯ ವಿಳಂಬವಾದ ಕಾರಣ ಮನೆಯವರು ಆತಂಕಗೊಂಡು ಹುಡುಕಾಟ ಆರಂಭಿಸಿದ್ದರು. ಸಂಜೆ ವೇಳೆಗೆ, ಅಪಹರಣಕಾರರು ಮಂಜುನಾಥ ಅವರ ಮೊಬೈಲ್‌ನಿಂದ ಕರೆ ಮಾಡಿದ್ದಾರೆ. ದಾವಣಗೆರೆಯಲ್ಲಿ ವೈದ್ಯೆಯಾಗಿರುವ ಮಂಜುನಾಥ ಅವರ ಹಿರಿಯ ಸಹೋದರಿ ಡಾ. ಮಂಜುಳಾ ಅವರಿಗೆ ವಾಟ್ಸಾಪ್ ಕರೆ ಮಾಡಿ ಮಾತನಾಡಿದ್ದಾರೆ.

ಅಪಹರಣಕಾರರ ಸರಣಿ ಬೆದರಿಕೆ

ಕರೆ ಸ್ವೀಕರಿಸಿದ ಡಾ. ಮಂಜುಳಾ ಅವರೊಂದಿಗೆ ಮೊದಲು ಮಾತನಾಡಿದ ಮಂಜುನಾಥ ಅವರು, ತನ್ನನ್ನು ಕಾರಿನಲ್ಲಿ ಅಪಹರಣ ಮಾಡಿ ಕಟ್ಟಿಹಾಕಿದ್ದಾರೆ. 5 ಕೋಟಿ ರೂಪಾಯಿ ಹಣ ಕೊಡಬೇಕೆಂದು ಅವರು ಹೇಳುತ್ತಿದ್ದಾರೆ ಎಂದು ತಡವರಿಸುತ್ತಾ ತಿಳಿಸಿದ್ದಾರೆ. ನಂತರ ಮಾತು ಮುಂದುವರಿಸಿದ ಅಪಹರಣಕಾರರು, ಹಣ ನೀಡುವಂತೆ ನೇರವಾಗಿ ಬೆದರಿಕೆ ಹಾಕಿದ್ದಾರೆ. 'ನಮಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ, ನಮಗೆ ಹಣ ಬೇಕು ಅಷ್ಟೆ' ಎಂದು ಹೇಳಿದ್ದಾರೆ. ಆದರೆ, ಡಾ. ಮಂಜುಳಾ ಅವರು ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ನೀಡಲು ಸಾಧ್ಯವಿಲ್ಲ, ಕೇವಲ 1 ಲಕ್ಷ ರೂಪಾಯಿ ಮಾತ್ರ ನೀಡಲು ಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಆಕ್ರೋಶಗೊಂಡ ಅಪಹರಣಕಾರರು, 'ಕೇಳಿದಷ್ಟು ಹಣ ನೀಡದಿದ್ದರೆ, ನಿಮ್ಮ ತಮ್ಮನ ಬಾಡಿ ಕೂಡಾ ಸಿಗುವುದಿಲ್ಲ ಎಂದು ತೀವ್ರ ಸ್ವರದಲ್ಲಿ ಬೆದರಿಕೆ ಹಾಕಿದ್ದಾರೆ. ಈ ಸಂಪೂರ್ಣ ಸಂಭಾಷಣೆಯ ಧ್ವನಿಮುದ್ರಿಕೆ (ಆಡಿಯೋ) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ತನಿಖೆಗೆ ವಿಶೇಷ ತಂಡ ರಚನೆ:

ಮಾಹಿತಿ ತಿಳಿದ ತಕ್ಷಣ ಎಚ್ಚೆತ್ತ ಹಿರೇಹಡಗಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಮಂಜುನಾಥ ಶೇಜವಾಡ್ಕರ್ ಅವರ ಪತ್ತೆಗಾಗಿ ಮತ್ತು ಅಪಹರಣಕಾರರನ್ನು ಹಿಡಿಯಲು ತಕ್ಷಣವೇ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು, ವ್ಯಾಪಕ ಜಾಲ ಬೀಸಿದ್ದಾರೆ. ಪೊಲೀಸರು ಮೊಬೈಲ್ ಕರೆಗಳ ಜಾಡು ಹಿಡಿದು ತನಿಖೆ ಮುಂದುವರೆಸಿದ್ದಾರೆ. ಈ ಕೃತ್ಯದ ಹಿಂದೆ ಹಣದ ಆಸೆಯೇ ಪ್ರಮುಖ ಕಾರಣವೋ ಅಥವಾ ಬೇರೆ ಯಾವುದೇ ದ್ವೇಷವಿದೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯ ವರ್ತಕರು ಮತ್ತು ಗ್ರಾಮಸ್ಥರು ಈ ಘಟನೆಯಿಂದ ಭಯಭೀತರಾಗಿದ್ದು, ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್