
ಕೊಪ್ಪಳ/ ಹಾವೇರಿ (ಅ.24): ಇಡೀ ದೇಶವೇ ವಿಜಯದಶಮಿ ಹಬ್ಬದ ಸಂಭ್ರಮದಲ್ಲಿದೆ. ಆದರೆ, ಕೊಪ್ಪಳ ಜಿಲ್ಲೆಯ ಕಾರಟಗಿಯ ಬಳಿ ಮನೆಯ ಮುಂದೆ ಇದ್ದ ನೀರು ಕಾಲುವೆಗೆ ಬಿದ್ದು 14 ತಿಂಗಳ ಮಗು ಸಾವನ್ನಪ್ಪಿದರೆ, ಮತ್ತೊಂದೆಡೆ ಹಾವೇರಿ ಜಿಲ್ಲೆ ಸವಣೂರಿನಲ್ಲಿ ವರದಾ ನದಿಯಲ್ಲಿ ಈಜಲು ತೆರಳಿದ್ದ 17 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಮನೆಯ ಮುಂದೆ ಆಟವಾಡಲು ಬಿಟ್ಟಾಗ ಆಟವಾಡುತ್ತಾ ಅಂಬೆಗಾಲಿನಲ್ಲಿ ತೆರಳಿದ ಮಗು ಪಕ್ಕದಲ್ಲಿಯೇ ಹರಿಯುತ್ತಿದ್ದ ನೀರಿನ ಕಾಲುವೆಗೆ ಬಿದ್ದು ಸಾವನ್ನಪ್ಪಿದೆ. ಮೃತ ಮಗು ವಿಜಯೇಂದ್ರ (14 ತಿಂಗಳು) ಆಗಿದೆ. ಈ ಘಟನೆಯು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್‌ನಲ್ಲಿ ನಡೆದಿದೆ. ಶಿಲ್ಪಾ ಮತ್ತು ಶಿವಾನಂದ್ ಎಂಬ ದಂಪತಿಯ ಪುತ್ರ ವಿಜಯೇಂದ್ರ ಆಗಿದ್ದನು. ಮನೆ ಮುಂದೆ ಆಟವಾಡುತ್ತಿದ್ದಾಗ ಕಾಲುವೆಗೆ ಬಿದ್ದಿದ್ದು, ಕ್ಷಣಾರ್ಧದಲ್ಲಿಯೇ ಸಾವನ್ನಪ್ಪಿದೆ.
ಕಟ್ಟಡದ ಮೇಲಿಂದ ಬಿದ್ದು ಇಬ್ಬರ ಸಾವು: ಬೆಂಗಳೂರಲ್ಲಿ ಮಾನಸಿಕ ಅಸ್ವಸ್ಥ, ಹುಬ್ಬಳ್ಳಿಯಲ್ಲಿ ಅಪರಿಚಿತ ಮೃತ
ತಾಯಿ ಮನೆಯೊಳಗಿಂದ ಮಗುವನ್ನು ಕೂಗುತ್ತಾ ಬಂದು ನೋಡಿದಾಗ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಕಾಲುವೆಯಲ್ಲಿ ಬಗ್ಗಿ ನೋಡಿದಾಗ ಮಗು ನೀರು ಕುಡಿದು ಉಸಿರಾಡಲಾಗದೇ ಸಾವನ್ನಪ್ಪಿರುವುದು ಕಂಡುಬಂದಿದೆ. ಕೂಡಲೇ, ಮಗುವನ್ನು ನೀರಿನಿಂದ ಮೇಲೆತ್ತಿ ಬದುಕಿಸಲು ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯತ್ನ ಫಲಿಸಲಿಲ್ಲ. ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮನೆಯ ಮುಂದಿನ ಕಾಲುವೆಯ ಮೇಲ್ಭಾಗದಲ್ಲಿ ಸಿಮೆಂಟ್ ಸ್ಲ್ಯಾಬ್ ನಿರ್ಮಾಣ ಮಾಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಸವಣೂರು ತಾಲೂಕು ಕಳಸೂರು ಗ್ರಾಮದ ಬಾಲಕ ವಿಜಯದಶಮಿ ಅಂಗವಾಗಿ ವರದಾ ನದಿಯಲ್ಲಿ ಸ್ನಾನ ಮಾಡಿಕೊಂಡು ಬರುವುದಾಗಿ ಹೇಳಿ ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಬೆಳಗ್ಗೆ ನದಿಯಲ್ಲಿ ಸ್ನಾನ ಮಾಡಲು ಹೋಗುವುದಾಗಿ ತಿಳಿಸಿದ್ದ ಬಾಲಕ ಮರಳಿ ಮನೆಗೆ ಬಾರದಿರುವುದನ್ನು ಕಂಡು ನದಿಯತ್ತ ತೆರಳಿದವರಿಗೆ ಆತನ ಸಹಚರರು ನೀರಿನಲ್ಲಿ ನಿಮ್ಮ ಮಗ ಮುಳುಗಿದ್ದಾನೆ ಎಂಬ ವಿಚಾರ ತಿಳಿಸಿದ್ದಾರೆ. ಇದರಿಂದ ಹೆತ್ತವ್ವನ ರೋಧನ ಮುಗಿಲು ಮುಟ್ಟಿತ್ತು. ಮೃತ ಬಾಲಕ ಅಮೋಘ ಸುಧೀರ್ ಹೊಸಮನಿ( 17) ಆಗಿದ್ದಾನೆ. ವಿಜಯದಶಮಿ ಹಬ್ಬದ ಕುಟುಂಬ ಸದಸ್ಯರಿಗೆ ಶಾಪವಾಗಿ ಪರಿಣಮಿಸಿದೆ.
ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಅಧಿಕೃತ ಚಾಲನೆ ಕೊಟ್ಟ ರಾಜವಂಶಸ್ಥ ಯದುವೀರ್: ಸಿಎಂ, ಡಿಸಿಎಂ ಪುಷ್ಪಾರ್ಚನೆ
ಇನ್ನು ಬಾಲಕನಿಗೆ ನದಿಯಲ್ಲಿ ಈಜಾಡಿ ಅನುಭವವಿತ್ತು. ಆದರೆ, ಇಂದು ತನ್ನ ಸಹಚರರೊಂದಿಗೆ ಸೇರಿ ಈಜಾಡಲು ಹೋದಾಗ ಬಾಜಿಗೆ ಬಿದ್ದು ದೂರ ಈಜಲು ಹೋಗಿದ್ದಾರೆ. ಆದರೆ, ಬಾಲಕ ಅಮೋಘನಿಗೆ ಸುಸ್ತಾಗಿ ನೀರಿನಲ್ಲಿ ಈಜಲಾಗದೇ ಮುಳುಗಿದ್ದಾನೆ ಎಂದು ಹೇಳಿದ್ದಾರೆ. ಹಬ್ಬದ ದಿನವೇ ಪುತ್ರನನ್ನು ಕಳೆದುಕೊಂಡು ಪಾಲಕರ ರೋಧನವನ್ನು ಕಂಡ ಗ್ರಾಮಸ್ಥರು ಮರುಗಿದ್ದಾರೆ. ಹುಬ್ಬಳ್ಳಿಯಲ್ಲಿ ಕಾಲೇಜು ಓದುತ್ತಿದ್ದ ಬಾಲಕ ಅಮೋಘ ಹಬ್ಬದ ನಿಮಿತ್ತ ಸ್ವಂತ ಗ್ರಾಮ ಕಳಸೂರಿಗೆ ಬಂದಿದ್ದನು. ಈಗ ಸ್ನೇಹಿತರ ಜೊತೆ ಈಜಲು ತೆರಳಿ ಇಹಲೋಕವನ್ನೇ ತ್ಯಜಿಸಿದ್ದಾನೆ.
ಹೆಂಡತಿ ತವರು ಮನೆಗೆ ಹೋದ ಗಂಡ ನಾಪತ್ತೆ:
ಗದಗನ ರಾಜೀವಗಾಂಧಿ ನಗರದ ನಿವಾಸಿ ಆಂಜನೇಯ ಕೊಪ್ಪಳ ತಾಲೂಕಿನ ಬಸಾಪೂರ ಗ್ರಾಮದ ಗೌರಮ್ಮಳನ್ನು ವಿವಾಹವಾಗಿದ್ದ. ದಾಂಪತ್ಯದಲ್ಲಿ ಗಲಾಟೆ ನಡೆದು ಗೌರಮ್ಮ ತವರು ಮನೆ ಸೇರಿದ್ಲು. 7 ತಿಂಗಳ ಹಿಂದೆ ತನ್ನ ಹೆಂಡತಿ ನೋಡೋಕೆ ಅಂತಾ ಆಂಜನೇಯ ಕೂಡ ಅಲ್ಲಿಗೆ ಹೋಗಿದ್ದಾನೆ. ಆದ್ರೆ ಈಗ ಮಗನೇ ಕಾಣಿಸುತ್ತಿಲ್ಲ. ಮಗನನ್ನ ಕೊಲೆ ಮಾಡಿದ್ದಾರೆ ಅಂತ ಆಂಜನೇಯನ ಅಪ್ಪ ಅಮ್ಮ ಕಣ್ಣೀರಿಡ್ತಿದ್ದಾರೆ.
ತವರಿಗೆ ಹೋಗಿದ್ದ ಪತ್ನಿ ಜತೆ ಆಂಜನೇಯ ವಾಸವಿದ್ನಂತೆ. ಒಮ್ಮೆ ಅವನ ತಂದೆ ಹೋಗಿ ಮಗನನ್ನ ವಾಪಸ್ ಕರೆದಿದ್ದಾರೆ. ಆದರೆ ನಾನು ಬರಲ್ಲ ಎಂದು ಹೇಳಿ ಕಳುಹಿಸಿದ್ದನಂತೆ. ಜೊತೆಯಲ್ಲಿ ಇಲ್ಲದಿದ್ದರೂ ಅಪ್ಪ, ಅಮ್ಮನನ್ನ ಅವನೇ ನೋಡಿಕೊಳ್ತಿದ್ನಂತೆ. ಆದರೆ ಕಳೆದ 7 ತಿಂಗಳಿಂದ ಮಗ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಸೊಸೆ ಇದ್ದಲ್ಲಿಗೇ ಹೋಗಿ ಕೇಳಿದ್ರೆ ನಮಗೇನು ಗೊತ್ತಿಲ್ಲ ಎನ್ನುತ್ತಿದ್ದಾರಂತೆ. ಹೀಗಾಗಿ ಮಗನನ್ನು ಹುಡುಕಿ ಕೊಡಿ ಎಂದು ಹೆತ್ತವರು ಪೊಲೀಸರ ಮೊರೆ ಹೋಗಿದ್ದಾರೆ.
ಸೊಸೆ ಗೌರಮ್ಮ ನಮ್ಮ ಮಗನ ಕೊಲೆ ಮಾಡಿದ್ದಾಳೆ ಎಂದು ಆರೋಪಿಸುತ್ತಿರುವ ಆಂಜನೇಯನ ಪಾಲಕರು, ಮುನಿರಾಬಾದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ, ಮಿನಿರಾಬಾದ್ ಪೊಲೀಸರು ನಿರ್ಲಕ್ಷ್ಯ ವಹಿಸಿದ್ರಿಂದ ಈಗ ಎಸ್ಪಿಗೆ ದೂರು ನೀಡಿದ್ದಾರೆ. ನಮ್ಮ ಮಗ ಸಿಗದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ತೇವೆ, ದಯವಿಟ್ಟು ಮಗನನ್ನ ಹುಡುಕಿಕೊಡಿ ಎಂದು ಕಣ್ಣೀರಿಡ್ತಿದ್ದಾರೆ.