'ಹುಬ್ಬಳ್ಳಿ- ಧಾರವಾಡ ಸುಂದರವಾಗಲು BRTS ವರದಾನ'

Kannadaprabha News   | Asianet News
Published : Feb 03, 2020, 07:13 AM IST
'ಹುಬ್ಬಳ್ಳಿ- ಧಾರವಾಡ ಸುಂದರವಾಗಲು BRTS ವರದಾನ'

ಸಾರಾಂಶ

ರಸ್ತೆಯಲ್ಲಿ ಓಡುವ ‘ಮೆಟ್ರೋ‘ ಬಿಆರ್‌ಟಿಎಸ್‌| ಬಿಆರ್‌ಟಿಎಸ್‌ಗೆ ಚಾಲನೆ ನೀಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವ್ಯಾಖ್ಯಾನ| ಹುಬ್ಬಳ್ಳಿ- ಧಾರವಾಡ ಮಧ್ಯದಲ್ಲಿನ ಬಿಆರ್‌ಟಿಎಸ್‌ ಅತ್ಯಂತ ಉಪಯುಕ್ತ ಸಾಮೂಹಿಕ ಸಾರಿಗೆ|

ಹುಬ್ಬಳ್ಳಿ[ಫೆ.03]: ಒಂದೂವರೆ ವರ್ಷದಿಂದ ಹುಬ್ಬಳ್ಳಿ- ಧಾರವಾಡ ಮಹಾನಗರ ನಡುವೆ ಪ್ರಾಯೋಗಿಕ ಸಂಚಾರ ನಡೆಸುತ್ತಿದ್ದ ಬಿಆರ್‌ಟಿಎಸ್‌ನ ಚಿಗರಿ ಬಸ್ಸಿಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಭಾನುವಾರ ಅಧಿಕೃತ ಹಸಿರು ನಿಶಾನೆ ತೋರಿಸಿದ್ದಾರೆ.

ಈ ವೇಳೆ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದೊಂದು ‘ಮೆಟ್ರೋ ಆನ್‌ ದಿ ರೋಡ್‌’ನಂತೆ ಕಾರ್ಯನಿರ್ವಹಿಸುತ್ತಿದೆ. ನಗರಗಳ ಸುಸ್ಥಿರ ಅಭಿವೃದ್ಧಿಗೆ ಇಂತಹ ಯೋಜನೆಗಳು ಪೂರಕ. ಹುಬ್ಬಳ್ಳಿ- ಧಾರವಾಡ ಮಹಾನಗರ ಸುಂದರವಾಗಲು ಇದು ವರದಾನವಾಗಲಿದೆ. ಮೆಟ್ರೋ ಮಾದರಿಯಲ್ಲೇ ಇದು ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಂತಸಕರ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಿಆರ್‌ಟಿಎಸ್‌ ಅತ್ಯಂತ ಉಪಯುಕ್ತ ಯೋಜನೆಯಾಗಿದೆ. ಹುಬ್ಬಳ್ಳಿ- ಧಾರವಾಡ ಮಹಾನಗರದ ಮಧ್ಯೆ 22.5 ಕಿ.ಮೀ ಉದ್ದದ ಬಿಆರ್‌ಟಿಎಸ್‌ ಯೋಜನೆಯನ್ನು ಔಪಚಾರಿಕವಾಗಿ ಉದ್ಘಾಟಿಸಿರುವುದು ಸಂತಸ ತಂದಿದೆ. ಸುಸ್ಥಿರ ಮತ್ತು ಪರಿಸರ ಸ್ನೇಹಿ, ಕಡಿಮೆ ವೆಚ್ವದ ಸಾರಿಗೆ ವ್ಯವಸ್ಥೆ ಇದಾಗಿದೆ. ಎರಡನೇ ಹಂತದ ನಗರಗಳ ಸಮಗ್ರ ಅಭಿವೃದ್ಧಿಗೆ ಈ ಯೋಜನೆ ಪೂರಕವಾಗಿದೆ. ಅಭಿವೃದ್ಧಿಯಲ್ಲಿ ಯಾವುದೇ ಒಬ್ಬ ವ್ಯಕ್ತಿ ಹಿಂದೆ ಬೀಳಬಾರದು ಎಂಬುದು ಸರ್ಕಾರದ ಆಶಯ ಎಂದರು.

ವೈಯಕ್ತಿಕ ವಾಹನಗಳ ಬಳಕೆಯಿಂದ ಪರಿಸರ ಮಾಲಿನ್ಯವೂ ಹೆಚ್ಚಾಗುತ್ತೆ. ಪರಿಸರ ಮಾಲಿನ್ಯ ಹೆಚ್ಚಾದರೆ ಆರೋಗ್ಯ ಹದಗೆಡುತ್ತೆ. ಇದರಿಂದ ಒತ್ತಡದ ಬದುಕು ಸಾಗಿಸಬೇಕಾಗುತ್ತೆ. ಇದಕ್ಕಾಗಿ ಒತ್ತಡ ಮುಕ್ತ ನೆಮ್ಮದಿ ಬದುಕಿಗೆ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಬೇಕು ಎಂದು ಅವರು ಕರೆನೀಡಿದರು.

ಇದೀಗ ಹುಬ್ಬಳ್ಳಿ- ಧಾರವಾಡ ಮಧ್ಯದಲ್ಲಿನ ಬಿಆರ್‌ಟಿಎಸ್‌ ಅತ್ಯಂತ ಉಪಯುಕ್ತ ಸಾಮೂಹಿಕ ಸಾರಿಗೆಯಾಗಿದೆ. ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿನಿತ್ಯ 95 ಸಾವಿರಕ್ಕೂ ಹೆಚ್ಚು ಜನರು ಇದರಲ್ಲಿ ಸಂಚರಿಸುತ್ತಾರೆ ಎಂದರೆ ಸಂತಸಕರ ಸಂಗತಿ. ಸಣ್ಣ ಮತ್ತು ಮಧ್ಯಮ ನಗರಗಳಿಗೆ ಇದೊಂದು ಮಾದರಿ ಯೋಜನೆಯಾಗಿದೆ. ರಾಜ್ಯದ ಎಲ್ಲ ನಗರಗಳಲ್ಲೂ ಇಂತಹ ಯೋಜನೆ ಜಾರಿಗೊಳಿಸಬೇಕು. ಅಂದರೆ ಪರಿಸರವೂ ಸುರಕ್ಷಿತವಾಗಿರುತ್ತದೆ. ಸಾರ್ವಜನಿಕರ ಆರೋಗ್ಯವೂ ಸುಧಾರಣೆಯಾಗುತ್ತೆ ಎಂದು ಅಭಿಪ್ರಾಯ ಪಟ್ಟರು.

ವಿದ್ಯುತ್‌ ಬಸ್‌ಗಳು ಬರಲಿ:

ದೇಶದಲ್ಲಿ ಪ್ರತಿ ವರ್ಷ ವಾಹನಗಳ ಸಂಖ್ಯೆಯು ತೀವ್ರವಾಗಿ ಹೆಚ್ಚಾಗುತ್ತಿದ್ದು, ನಗರಗಳಲ್ಲಿ ಟ್ರಾಫಿಕ್‌ ಸಮಸ್ಯೆ ತಲೆದೂರಿದೆ. ಇದು ವಾಯು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಸಾಮೂಹಿಕ ಸಾರಿಗೆ ಸೌಲಭ್ಯಕ್ಕೆ ಆದ್ಯತೆ ನೀಡಿ ಮಾಲಿನ್ಯರಹಿತ ವಿದ್ಯುತ್‌ ವಾಹನಗಳಿಗೆ ಆದ್ಯತೆ ನೀಡಬೇಕಿದೆ. ಇದಕ್ಕೆ ಸರ್ಕಾರಗಳು ವಿದ್ಯುತ್‌ ಚಾಲಿತ ವಾಹನಗಳನ್ನು ಪ್ರೋತ್ಸಾಹಿಸಬೇಕು ಎಂದರು.

ವಿದ್ಯುತ್‌ ಸಮಸ್ಯೆಯೂ ತೀವ್ರವಾಗಿ ಬೆಳೆಯುತ್ತಿದೆ. ಆದಕಾರಣ ವಿದ್ಯುತ್‌ ಸಮಸ್ಯೆ ನಿವಾರಣೆಗೆ ಸೋಲಾರ್‌ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಪ್ರತಿಯೊಬ್ಬರ ಮನೆ, ಕಚೇರಿ, ಕಟ್ಟಡಗಳಲ್ಲಿ ಸೋಲಾರ್‌ ಪ್ಯಾನಲ್‌ ಅಳವಡಿಸಿ ಸೋಲಾರ್‌ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಮಳೆ ಕೊಯ್ಲುಗಳಂತಹ ಪ್ರಕೃತಿ ರಕ್ಷಣೆಯತ್ತ ಕಾರ್ಯ ನಿರ್ವಹಿಸಬೇಕು ಎಂದು ನುಡಿದರು.

ಇಲ್ಲಿನ ಹೊಸೂರು ಬಳಿ ಬಿಆರ್‌ಟಿಎಸ್‌ ಕಾರಿಡಾರ್‌, ಬಸ್‌ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ಉಪರಾಷ್ಟ್ರಪತಿಗಳು, ನವನಗರದ ವರೆಗೂ ಬಿಆರ್‌ಟಿಎಸ್‌ ಬಸ್‌ನಲ್ಲೇ ಸಂಚರಿಸಿದರು. ಅಲ್ಲಿ ಬಿಆರ್‌ಟಿಎಸ್‌ ಬಸ್‌ ನಿಲ್ದಾಣವನ್ನು ಉದ್ಘಾಟಿಸಿ ನಂತರ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದಕ್ಕೂ ಮುನ್ನ ಬಿಆರ್‌ಟಿಎಸ್‌ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು. ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಸಿ.ಎಂ. ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್‌.ವಿ. ಸಂಕನೂರ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ವಾಕರಸಾಸಂ ಅಧ್ಯಕ್ಷ ವಿ.ಎಸ್‌. ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ ವಿ. ಪೊನ್ನುರಾಜ ಸ್ವಾಗತಿಸಿದರು. ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ವಂದಿಸಿದರು.
 

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ