* ಮಂಗಳೂರು ಮಸೀದಿ ವಿವಾದ
* ಮೇ.25ಕ್ಕೆ ವಿಎಚ್ ಪಿ ತಾಂಬೂಲ ಪ್ರಶ್ನೆ
* ಅಷ್ಟಮಂಗಳ ಪ್ರಶ್ನೆಯ ಬದಲಿಗೆ ತಾಂಬೂಲ ಪ್ರಶ್ನೆ ಇಡಲು ನಿರ್ಧಾರ
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು, (ಮೇ.22): ಮಂಗಳೂರಿನ ಮಳಲಿ ಬಳಿ ಮಸೀದಿ ನವೀಕರಣ ವೇಳೆ ದೇವಸ್ಥಾನದ ಗುಡಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮೇ.25ಕ್ಕೆ ತಾಂಬೂಲ ಪ್ರಶ್ನೆಗೆ ವಿಶ್ವ ಹಿಂದೂ ಪರಿಷತ್ ನಿಂದ ದಿನಾಂಕ ನಿಗದಿ ಮಾಡಲಾಗಿದೆ.
ಅಷ್ಟಮಂಗಳ ಪ್ರಶ್ನೆಯ ಬದಲಿಗೆ ತಾಂಬೂಲ ಪ್ರಶ್ನೆ ಇಡಲು ನಿರ್ಧಾರಿಸಲಾಗಿದ್ದು, ಮಂಗಳೂರಿನ ಮಸೀದಿ ರಹಸ್ಯ ಪತ್ತೆಗೆ ಮುಂದಾಗಿದೆ. ತಾಂಬೂಲ ಪ್ರಶ್ನೆ ಹಾಗೂ ಮುಂದಿನ ಹೋರಾಟದ ಬಗ್ಗೆ ಇಂದು (ಭಾನುವಾರ) ಸಭೆ ನಡೆಸಿದೆ. ಮಂಗಳೂರು ಹೊರವಲಯದ ಮಳಲಿಯಲ್ಲಿ ಸಭೆ ನಡೆದಿದ್ದು, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಸೇರಿ ಹಿಂದೂ ಪ್ರಮುಖರು ಭಾಗಿಯಾಗಿದ್ರು.
ಮಳಲಿಯಲ್ಲಿ ತಾಂಬೂಲ ಪ್ರಶ್ನೆ ಇಟ್ಟು ದೈವ ಸಾನಿಧ್ಯ ಪತ್ತೆಗೆ ಹಿಂದೂ ಪ್ರಮುಖರು ಮುಂದಾಗಿದ್ದಾರೆ. ಮಂಗಳೂರಿನ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ವಿವಾದದ ಕುರಿತ ಹೋರಾಟದ ರೂಪುರೇಷೆಗಳನ್ನು ಹಿಂದೂ ಸಂಘಟನೆಗಳು ಸಿದ್ದ ಪಡಿಸಿದೆ. ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನ ಮಾದರಿಯ ಗುಡಿ ಪತ್ತೆಯಾಗಿತ್ತು. ದರ್ಗಾದ ಹಿಂಭಾಗ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿತ್ತು. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿ ನವೀಕರಣ ಕಾಮಗಾರಿಗೆ ಕೋರ್ಟ್ ತಡೆಯಾಜ್ಞೆ ತಂದಿರೋ ವಿಎಚ್ ಪಿ, ಇದೀಗ ಕಾನೂನು ಹೋರಾಟದ ಮಧ್ಯೆಯೇ ದೇವರ ಅಸ್ತಿತ್ವ ಪತ್ತೆಗೆ ತಾಂಬೂಲ ಪ್ರಶ್ನೆ ಇಡಲು ಮುಂದಾಗಿದೆ.
ಮಸೀದಿ ಕೆಡವಿದಾಗ ದೇವಸ್ಥಾನ ಪತ್ತೆ; ಮಸೀದಿ ಕಾಮಗಾರಿಗೆ ತಡೆಯಾಜ್ಞೆ ತಂದ ಭಜರಂಗದಳ!
ಮಸೀದಿ ಜಾಗದಲ್ಲಿ ಶಿವ ದೇವಾಲಯ ಇದ್ದ ಬಗ್ಗೆ ಹಿಂದೂ ಸಂಘಟನೆಗಳು ಹೊಸ ವಿಚಾರ ಎತ್ತಿದ್ದು, ಹೀಗಾಗಿ ತಾಂಬೂಲ ಪ್ರಶ್ನೆ ಚಿಂತನೆ ಮೂಲಕ ರಹಸ್ಯ ಪತ್ತೆಗಿಳಿದಿದೆ. ಧಾರ್ಮಿಕ ಸಾಕ್ಷ್ಯ ಪತ್ತೆ ಬಳಿಕ ಐತಿಹಾಸಿಕ ಪುರಾವೆ ಸಂಗ್ರಹಿಸಲು ಪ್ಲಾನ್ ಮಾಡಲಾಗಿದೆ. ತಾಂಬೂಲ ಪ್ರಶ್ನೆ ಬಳಿಕ ದಾಖಲೆ ಸಹಿತ ಕಾನೂನು ಹೋರಾಟಕ್ಕೆ ಯೋಜನೆ ರೂಪಿಸಲಾಗಿದೆ. ತಾಂಬೂಲದ (ವೀಳ್ಯದೆಲೆ) ಸಹಾಯದಿಂದ ತನ್ವಾದಿ ದ್ವಾದಶ ಭಾವಗಳ ಸಮಸ್ತ ಶುಭಾ ಶುಭ ಫಲಗಳನ್ನು ಪತ್ತೆ ಹಚ್ಚುವುದು, ಪ್ರಶ್ನೆ ಶಾಸ್ತ್ರದಲ್ಲಿ ಚಕ್ರಗಳು, ಕವಡೆಗಳು, ತಾಂಬೂಲಗಳ ಸಂಖ್ಯೆ, ಸ್ವರೂಪ ಇತ್ಯಾದಿಗಳ ಆಧಾರದಿಂದ ಪ್ರಶ್ನೆಫಲ ಹೇಳಲಾಗುತ್ತದೆ.
ರಹಸ್ಯ ಪತ್ತೆಗೆ ತಾಂಬೂಲ ಪ್ರಶ್ನೆ
ಮಸೀದಿ ರಹಸ್ಯದ ಪತ್ತೆಗೆ ಹಿಂದೂ ಸಂಘಟನೆಗಳು ತಾಂಬೂಲ ಪ್ರಶ್ನೆಗೆ ಮುಂದಾಗಿದೆ. ಮಸೀದಿ ಇರೋ ಜಾಗದ ಸಮೀಪದ ಯಾವುದಾದರೊಂದು ಜಾಗದಲ್ಲಿ ಪ್ರಶ್ನೆಯಿಟ್ಟು ಆ ಜಾಗದ ಸ್ಥಳ ಪುರಾಣ, ಧಾರ್ಮಿಕ ಇತಿಹಾಸಗಳ ಬಗ್ಗೆ ಮಾಹಿತಿ ಸಂಗ್ರಹಿಸೋದು ಇದರ ಉದ್ದೇಶ. ಮಸೀದಿ ಭಾಗದಲ್ಲಿ ಅಥವಾ ಸಮೀಪದಲ್ಲಿ ಯಾವುದಾದರೂ ಹಿಂದೂ ಧಾರ್ಮಿಕ ಸ್ಥಳಗಳು ಈ ಹಿಂದೆ ಇದ್ದು, ಸದ್ಯ ಅದು ನಾಶವಾಗಿದ್ದರೆ ಅದು ತಾಂಬೂಲ ಪ್ರಶ್ನೆ ವೇಳೆ ಬೆಳಕಿಗೆ ಬರೋ ಸಾಧ್ಯತೆ ಇದೆ.
ಒಂದು ಸಣ್ಣ ಎಳೆ ಸಿಕ್ಕರೂ ಆ ಮೂಲಕ ಸ್ಥಳದ ಇತಿಹಾಸದ ಉತ್ಖನನ ನಡೆಸೋದು ಹಿಂದೂ ಸಂಘಟನೆಗಳು ರೂಪಿಸಿರೋ ಪ್ಲಾನ್. ಆದ್ರೆ ಸದ್ಯ ಈ ವಿಚಾರ ಕಾನೂನು ಹೋರಾಟದಲ್ಲಷ್ಟೇ ಬಗೆ ಹರಿಯಬೇಕಿದೆ. ಮಸೀದಿ ಆಡಳಿತ ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಪೂರಕ ದಾಖಲೆ ಸಲ್ಲಿಸಲು ಎಲ್ಲಾ ತಯಾರಿ ನಡೆಸಿದೆ.