ಜೆಡಿಎಸ್‌ ಜತೆಗೆ ಮೈತ್ರಿ ಅವಕಾಶ ಮುಕ್ತ: ವೇಣುಗೋಪಾಲ್‌

By Web DeskFirst Published Dec 2, 2019, 8:15 AM IST
Highlights

ಉಪ ಚುನಾವಣೆ ಬಳಿಕ ಬಿಎಸ್‌ವೈ ಸರ್ಕಾರಕ್ಕೆ ಸಂಕಷ್ಟ| ಪ್ರಜಾಪ್ರಭುತ್ವದ ರಕ್ಷಣೆಗೆ ಮೈತ್ರಿ ಅವಕಾಶಗಳಿಗೆ ‘ಕೈ’ ಮುಕ್ತ| ಅಗತ್ಯಬಿದ್ದರೆ ಮೈತ್ರಿ ಕುರಿತು ಗೌಡರ ಜತೆಗೂ ಮಾತನಾಡ್ತೇನೆ ಎಂದ ವೇಣುಗೋಪಾಲ್| ಬರಗಾಲ ಹಾಗೂ ಪ್ರವಾಹದ ಕುರಿತಾಗಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತಲೆಕೆಡಿಸಿಕೊಂಡಿಲ್ಲ|

ಹುಬ್ಬಳ್ಳಿ(ಡಿ.02): ಉಪಚುನಾವಣೆ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ತೊಂದರೆಗೆ ಸಿಲುಕಲಿದ್ದು, ಮತ್ತೆ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಅವಕಾಶ ಕಾಂಗ್ರೆಸ್‌ ಎದುರು ಮುಕ್ತವಾಗಿರಲಿದೆ. ಸಂದರ್ಭ ಬಂದರೆ ಈ ಕುರಿತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜತೆಗೂ ಮಾತನಾಡುತ್ತೇನೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಅವರು ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕಾಂಗ್ರೆಸ್‌ ಬದ್ಧವಾಗಿದ್ದು, ಮೈತ್ರಿ ಅವಕಾಶಗಳಿಗೆ ಪಕ್ಷ ಮುಕ್ತವಾಗಿದೆ. ಪ್ರಜಾಪ್ರಭುತ್ವದ ತತ್ವಗಳನ್ನು ಗಾಳಿಗೆ ತೂರಿದವರಿಗೆ ಕರ್ನಾಟಕದ ಜನತೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಎಲ್ಲರಿಗೂ ಈ ಉಪಚುನಾವಣೆ ಯಾಕಾಗಿ ಬಂದಿದೆ ಎಂದು ತಿಳಿದಿದೆ. ಜನ ಹಿಂದಿನ ಚುನಾವಣೆಯಲ್ಲಿ ವಿಶ್ವಾಸವಿಟ್ಟು 17 ಶಾಸಕರನ್ನು ಪಕ್ಷದ ಆಧಾರದ ಮೇಲೆ ಆಯ್ಕೆ ಮಾಡಿದ್ದರು. ಆದರೆ, ಆ ಶಾಸಕರು ಗೆದ್ದು ಬಂದ ಪಕ್ಷಕ್ಕೇ ಮೋಸ ಮಾಡಿ ಸರ್ಕಾರ ಉರುಳುವಂತೆ ಮಾಡಿ ಈಗ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದ ಮರುದಿನದಿಂದಲೇ ಆಪರೇಷನ್‌ ಕಮಲ ಆರಂಭವಾಗಿತ್ತು. ಹಣದ ಆಮಿಷ ಹಾಗೂ ಮಂತ್ರಿ ಆಸೆ ತೋರಿಸುವುದೇ ಆಪರೇಷನ್‌ ಕಮಲ. ಇದು ಪ್ರಜಾಪ್ರಭುತ್ವ ಹಾಗೂ ಅದರ ಸಿದ್ಧಾಂತದ ಪಾಲಿಗೆ ಕಗ್ಗೊಲೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬರಗಾಲ ಹಾಗೂ ಪ್ರವಾಹದ ಕುರಿತಾಗಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಆದರೆ ಮಂತ್ರಿಗಿರಿ, ಸರ್ಕಾರ ಉಳಿಸಿಕೊಳ್ಳಲು ಚುನಾವಣೆಯಲ್ಲಿ ನೀರಿನಂತೆ ಹಣ ಖರ್ಚು ಮಾಡಲಾಗುತ್ತಿದೆ. ಇದಕ್ಕೆಲ್ಲ ಡಿ.5ರಂದು ತಕ್ಕ ಉತ್ತರವನ್ನು ಜನತೆ ನೀಡಲಿದ್ದಾರೆ ಎಂದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!