
ಬೆಂಗಳೂರು (ಮೇ.08): ಅಕಾಲಿಕ ಮಳೆ ಬಿಸಿಲಿನ ತಾಪದಿಂದ ಬೆಳೆಗಳು ಹಾನಿಗೀಡಾದ ಪರಿಣಾಮ ಕಳೆದ ವಾರಕ್ಕೆ ಹೋಲಿಸಿದಲ್ಲಿ ಪ್ರಸ್ತುತ ತರಕಾರಿಗಳ ದರ ಕೆ.ಜಿ.ಗೆ ₹40 ವರೆಗೂ ಏರಿಕೆಯಾಗಿದ್ದು, ಖರೀದಿಗೆ ಗ್ರಾಹಕರು ಹಿಂದೇಟು ಹಾಕುವಂತಾಗಿದೆ. ಬೀನ್ಸ್, ಬಟಾಣಿ, ನವಿಲುಕೋಲು, ಹೂಕೋಸು, ನಿಂಬೆ, ಸೌತೆಕಾಯಿ ಸೇರಿ ಇನ್ನಿತರ ತರಕಾರಿಗಳ ಬೆಲೆ ಹೆಚ್ಚಾಗಿದೆ. ಅವರೇಕಾಯಿ ಸೀಸನ್ ಮುಗಿದಿರುವುದರಿಂದ ಇದರ ಬೆಲೆಯೂ ಏರಿಕೆಯಾಗಿದೆ. ತೆಂಗಿನಕಾಯಿ ದರ ಹೆಚ್ಚಾಗಿರುವ ಹೊತ್ತಲ್ಲೇ ಈಗ ತರಕಾರಿ ಬೆಲೆಯೂ ಹೆಚ್ಚಾಗಿದ್ದು, ಬೆಂಗಳೂರಿನ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮೇಲಿಂದ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ.
ನಗರದ ಕಲಾಸಿಪಾಳ್ಯ, ದಾಸನಪುರ ಮಾರುಕಟ್ಟೆಗೆ ತರಕಾರಿ ಬರುವ ಪ್ರಮಾಣ ಕಡಿಮೆಯಾಗಿದೆ. ಬಿಸಿಲಿನ ತಾಪದ ಜತೆಗೆ ಕಳೆದ ವಾರದಿಂದ ಸುರಿದ ಅಕಾಲಿಕ ಮಳೆಗೆ ತರಕಾರಿ ಕೊಳೆತಿದೆ. ಕ್ವಿಂಟಲ್ ಲೆಕ್ಕದ ಹೊಲ್‌ಸೇಲ್ ದರವೂ ಹೆಚ್ಚಾಗಿದ್ದು, ಪರಿಣಾಮ ಕೆ.ಆರ್.ಮಾರುಕಟ್ಟೆ, ಗಾಂಧಿ ಬಜಾರ್, ಮಲ್ಲೇಶ್ವರ, ಯಶವಂತಪುರ ಸೇರಿ ಎಲ್ಲೆಡೆಯ ಚಿಲ್ಲರೆ ಮಾರುಕಟ್ಟೆಯಲ್ಲೂ ತರಕಾರಿಗಳು ದುಬಾರಿಯಾಗಿವೆ.
ವಾಹನಗಳಿಗೆ ಎಫ್‌ಸಿ ನೀಡಲು 32 ಕಡೆ ಎಟಿಎಸ್: ಕಾರಣವೇನು?
ಬಾಳೆ ಹಣ್ಣು ದಿಢೀರ್ ಹೆಚ್ಚಳ: ಮೋಡ ಕವಿದ ವಾತಾವರಣದೊಂದಿಗೆ ಮಳೆ ಬರುತ್ತಿದ್ದರೆ ಕೆಲವು ತರಕಾರಿಗಳು ಬೇಗ ಕೊಯ್ಲಿಗೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಹಸಿಮೆಣಸಿಕಾಯಿ, ಚಪ್ಪರದವರೆಕಾಯಿ, ಹಾಗಲಕಾಯಿ, ಗೋರಿಕಾಯಿ ಮತ್ತಿತರ ತರಕಾರಿಗಳ ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಗೆ ಅವರೆಕಾಯಿ ಬದಲು ಹಿತಕಿದ ಬೆಳೆ ಬರುತ್ತಿದ್ದು, ಕೇಜಿಗೆ ₹300 - ₹350 ಇತ್ತು. ಜೊತೆಗೆ ಮೆಂತ್ಯ ಸೊಪ್ಪು, ಸಬ್ಬಕ್ಕಿ ಸೊಪ್ಪು, ಹರಿವೆ ಸೊಪ್ಪು, ದಂಟಿನ ಸೊಪ್ಪು, ಪಾಲಕ್ ಸೊಪ್ಪುಗಳು ಕೂಡ ಮಳೆಯಿಂದ ಹಾಳಾಗಿದ್ದು, ದರಗಳು ದಿಢೀರ್ ಏರಿಕೆಯಾಗಿದೆ. ಇನ್ನು, ಬಾಳೆ ಹಣ್ಣಿನ ದರ ಕೂಡ ದಿಢೀರ್ ಹೆಚ್ಚಾಗಿದ್ದು, ಕೇಜಿಗೆ ₹80 ರಿಂದ ₹100 ಗೆ ಮಾರಾಟ ಮಾಡಲಾಗುತ್ತಿದೆ.
ಕ್ವಿಂಟಲ್ ಈರುಳ್ಳಿಗೆ ₹1400: ಮಳೆಯಿಂದಾಗಿ ಈರುಳ್ಳಿ ಕೊಳೆಯುತ್ತಿದೆ. ಹೀಗಾಗಿ ರೈತರು ಬಂದಷ್ಟು ಬೆಲೆಗೆ ತಂದು ಮಾರುತ್ತಿದ್ದಾರೆ. ಯಶವಂತಪುರ ಎಪಿಎಂಸಿಯಲ್ಲಿ ರಾಜ್ಯದ ಈರುಳ್ಳಿ ಕ್ವಿಂಟಲ್‌ಗೆ ಗರಿಷ್ಠ ₹1400 , ಮಹಾರಾಷ್ಟ್ರದ ಈರುಳ್ಳಿ ₹1800 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ₹ 35- ₹ 40 ಇದೆ. ಈ ನಡುವೆ ಸಾಧಾರಣ ಗುಣಮಟ್ಟದ ಈರುಳ್ಳಿ-ಟೊಮೆಟೊ 5 ಕೆಜಿಗೆ ₹ 100 ನಂತೆಯೂ ಮಾರಾಟವಾಗುತ್ತಿದೆ.
ತರಕಾರಿ ಪ್ರಸ್ತುತ ದರ (ಕೇಜಿ ₹)
ಬೀನ್ಸ್ 80-90
ಈರುಳ್ಳಿ 35-40
ಬಟಾಣಿ 140
ನವಿಲುಕೋಲು 60
ಡೊಳ್ಳುಮೆಣಸು 60
ನಿಂಬೆ 7 (1ಕ್ಕೆ)
ಬಿಳಿ ಬದನೆಕಾಯಿ 36
ಗುಂಡು ಬದನೆಕಾಯಿ 28
ದಪ್ಪ ಮೆಣಸಿನಕಾಯಿ 56
ಗೋರಿಕಾಯಿ 64
ಡಬ್ಬಲ್ ಬೀನ್ಸ್ 115
ಬೆಳ್ಳುಳ್ಳಿ 175
ಎಲೆಕೋಸು 22
ಟೊಮೇಟೊ 20
ಹೀರೇಕಾಯಿ 46
ಸಬ್ಬಕ್ಕಿ ಸೊಪ್ಪು 80
ಮೆಂತ್ಯ ಸೊಪ್ಪು 85
ಬೆಂಡೆಕಾಯಿ 44
ಹಿತಕಿದ ಅವರೆಬೆಳೆ 300-350
ಗ್ರಾಮೀಣ ಜನರ ಸೇವೆಗೆ ವೈದ್ಯರು ಸಮಯ ಮೀಸಲಿಡಿ: ಅಜೀಂ ಪ್ರೇಮ್‌ಜಿ
ಬಿಸಿಲು, ಮಳೆಗೆ ತರಕಾರಿ ಕೊಳೆಯುತ್ತಿದ್ದು, ಪೂರೈಕೆ ಕಡಿಮೆ ಆಗಿದೆ. ಇದರಿಂದ ತರಕಾರಿ ದರ ಕಳೆದ ವಾರಕ್ಕೆ ಹೋಲಿಸಿದರೆ ಹೆಚ್ಚಾಗಿದೆ.
- ನಂಜಪ್ಪ, ತರಕಾರಿ ವರ್ತಕರು ವಿಜಯನಗರ