'ಉತ್ತರ ಕರ್ನಾಟಕಕ್ಕೆ ತಾರತಮ್ಯ ಮಾಡಿದ್ರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ'

By Kannadaprabha NewsFirst Published Jul 17, 2020, 3:24 PM IST
Highlights

ಆ. 15ರೊಳಗೆ ಮಹದಾಯಿ ಕಾಮಗಾರಿ ಪ್ರಾರಂಭಿಸಿ| ರೈತ ಸೇನಾದ ಅಧ್ಯಕ್ಷ ವೀರೇಶ ಸೊಬರದಮಠ ಆಗ್ರಹ| ರೈತಸೇನಾ ಹೋರಾಟಕ್ಕೀಗ ಭರ್ತಿ 5 ವರ್ಷ| ಆ. 15ರೊಳಗೆ ಇಲಾಖೆಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡದಿದ್ದರೆ ಈ ಭಾಗದ ಜನತೆ ಅನಿವಾರ್ಯವಾಗಿ ಪ್ರತ್ಯೇಕ ರಾಜ್ಯ ಕೇಳಲು ಮುಂದಾಗಬೇಕಾಗುತ್ತದೆ|

ನರಗುಂದ(ಜು.17): ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಗಳಿಗಿದ್ದ ಎಲ್ಲ ಸಮಸ್ಯೆಗಳು ಬಗೆಹರಿದವು. ಆದರೆ, ಸರ್ಕಾರ ಈ ಕಾಮಗಾರಿ ಆರಂಭಿಸಿಲ್ಲ. ಆ. 15ರೊಳಗೆ ಪ್ರಾರಂಭ ಮಾಡದಿದ್ದರೆ ಮಹದಾಯಿ ಹೋರಾಟಗಾರರು ಬೀದಿಗಿಳಿದು ಉಗ್ರ ಹೋರಾಟ ಮಾಡಲಿದ್ದಾರೆ ಎಂದು ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅವರು ಗುರುವಾರ ಮಹದಾಯಿ ಹೋರಾಟ 5 ವರ್ಷ ಪೂರೈಸಿ 6ನೇ ವರ್ಷಕ್ಕೆ ಕಾಲಿಟ್ಟ ನಿಮಿತ್ತ ಪಾದಯಾತ್ರೆ ಮೂಲಕ ವೇದಿಕೆಯಿಂದ ಪಟ್ಟಣದ ವೀರ ಬಾಬಾಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ, ನಗರದ ಪ್ರಮುಖ ಬೀದಿಗಳಲ್ಲಿ ಸರ್ಕಾರ ವಿರುದ್ಧ ಕಾಮಗಾರಿ ಪ್ರಾರಂಭ ಮಾಡದೇ ಇರುವುದರಿಂದ ಘೋಷಣೆ ಹಾಕಿ, ಆನಂತರ 1827ನೇ ದಿನದ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿದರು.

2015ರ ಜು. 16ರಂದು ಬಂಡಾಯ ನೆಲದಲ್ಲಿ ಮಹದಾಯಿ ಹಾಗೂ ಕಳಸಾ -ಬಂಡೂರಿ ಹೋರಾಟ ಆರಂಭವಾಯಿತು. ನಮ್ಮ ಪಾಲಿನ ನೀರು ತಂದು ಮಲಪ್ರಭಾ ಜಲಾಶಯಕ್ಕೆ ಜೋಡಣೆ ಮಾಡಬೇಕೆಂದು ಬೇಡಿಕೆ ಇಟ್ಟರು. ಸರ್ಕಾರಗಳ ವಿರುದ್ಧ ನಿರಂತರ ಹೋರಾಟ ನಡೆಯಿತು. 12 ಮಹದಾಯಿ ಹೋರಾಟಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ರಾಜಕೀಯ ಪಕ್ಷದವರು ನಮ್ಮ ಹೋರಾಟ ಹತ್ತಿಕ್ಕಬೇಕೆಂದು ಪ್ರಯತ್ನ ನಡೆಸಿದರು. ನಮ್ಮ ಮೇಲೆ ಹಲ್ಲೆ ನಡೆಯಿತು, ಕೊಲೆ ಬೆದರಿಕೆ ಹಾಕಿದರು. ಆದರೆ ನಾವು ನಮ್ಮ ಪ್ರಾಣದ ಹಂಗು ತೊರೆದು ಈ ಹೋರಾಟ ನಡೆಸಿದ್ದೇವೆ. ಮಹದಾಯಿ ಜಲವಿವಾದಕ್ಕೆ ನೇಮಕವಾದ ನ್ಯಾಯಾಧಿಕರಣ ತೀರ್ಪು ಬಂದು ಎರಡು ವರ್ಷಗಳೇ ಗತಿಸಿವೆ. ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರಿನಲ್ಲಿ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ರಾಜ್ಯಕ್ಕೆ ಅನುಮತಿ ಸಿಕ್ಕಿದೆ. ಕೇಂದ್ರ ಸರ್ಕಾರ ಕೂಡ ಈ ನೀರು ಬಳಕೆಗೆ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದೆ. ಆದರೂ ರಾಜ್ಯ ಸರ್ಕಾರ ಈ ಕಾಮಗಾರಿ ಪ್ರಾರಂಭ ಮಾಡಲು ಮೀನಮೇಷ ಎಣಿಸುತ್ತಿರುವುದು ಖಂಡನೀಯ ಎಂದು ಹೇಳಿದರು.

ಕೇಂದ್ರ- ರಾಜ್ಯ ಸರ್ಕಾರದ ನಡೆಗೆ ಖಂಡನೆ: ಕಳಸಾ ಬಂಡೂರಿ ಹೋರಾಟಗಾರರ ಆಕ್ರೋಶ

ಸರ್ಕಾರಕ್ಕೆ ಈಗಲೂ ಕಾಲ ಮಿಂಚಿಲ್ಲ. 2020ರ ಆಗಸ್ಟ್‌ 15ರೊಳಗೆ ಈ ಕಾಮಗಾರಿ ಪ್ರಾರಂಭ ಮಾಡಬೇಕು. ಇಲ್ಲದಿದ್ದರೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 4 ಜಿಲ್ಲೆ 11 ತಾಲೂಕಿನಲ್ಲಿ ಮಹದಾಯಿ ಹೋರಾಟಗಾರರು ಕೋವಿಡ್‌ -19 ನಿಯಮಗಳನ್ನು ಪಾಲಿಸದೆ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಶಿವಪ್ಪ ಹೊರಕೇರಿ, ಹನುಮಂತ ಮಡಿವಾಳರ, ಗುರು ರಾಯನಗೌಡ್ರ, ಮಲ್ಲಣ್ಣ ಅಲೇಕಾರ, ಅಶೋಕ ಸಾತಣ್ಣವರ, ವೀರಬಸಪ್ಪ ಹೂಗಾರ, ಎಸ್‌.ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ, ವೆಂಕಪ್ಪ ಹುಜರತ್ತಿ, ರಾಘವೇಂದ್ರ ಗುಜಮಾಗಡಿ, ಹನುಮಂತ ಸರನಾಯ್ಕರ, ಸೋಮಲಿಂಗಪ್ಪ ಆಯಿಟ್ಟಿ, ಯಲ್ಲಪ್ಪ ಗುಡದೇರಿ, ಯಲ್ಲಪ್ಪ ಚಲವಣ್ಣವರ, ವಾಸು ಚವಾಣ, ಸಂಗಪ್ಪ ಶಾನವಾಡ, ಮಲ್ಲೇಶ ಅಣ್ಣಿಗೇರಿ, ಎಲ್‌.ಬಿ. ಮುನೇನಕೊಪ್ಪ, ಶ್ರೀಶೈಲ ಮೇಟಿ, ಅನಸವ್ವ ಶಿಂದೆ, ನಾಗರತ್ನಾ ಸವಳಬಾವಿ, ಬಸವ್ವ ಪೂಜಾರ, ಶಾಂತವ್ವ ಭೂಸರಡ್ಡಿ, ಮಲ್ಲವ್ವ ಭೋವಿ ಉಪಸ್ಥಿತರಿದ್ದರು.

ಉ.ಕ.ಕ್ಕೆ ತಾರತಮ್ಯ ಮಾಡಿದರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ

ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಕೆಲವು ಇಲಾಖೆಗಳನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡದಿದ್ದರೆ ಈ ಭಾಗದ ಜನತೆ ಪ್ರತ್ಯೇಕ ರಾಜ್ಯ ಕೇಳುವ ಕೂಗು ಹೆಚ್ಚಾಗಲಿದೆ ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳು ಹೇಳಿದರು.

ಅವರು ಗುರುವಾರ ಪಟ್ಟಣದ 1827ನೇ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ವೇದಿಕೆಯಲ್ಲಿ ಅವರು ಮಾತನಾಡಿದರು. ಈ ಹಿಂದೆ 2018ರಲ್ಲಿ ಅಂದಿನ ಸರ್ಕಾರ ದಕ್ಷಿಣ ಹಾಗೂ ಉತ್ತರ ಎನ್ನುವ ಭೇದ ಜನತೆಗೆ ಬರಬಾರದು ಎಂದು ಬೆಂಗಳೂರಲ್ಲಿರುವ ಕೆಲವು ಸರ್ಕಾರಿ ಇಲಾಖೆಗಳನ್ನು ಉತ್ತರ ಕರ್ನಾಟಕದ ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಲು ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು 2019ರೊಳಗೆ ಕೆಲವು ಸರ್ಕಾರಿ ಇಲಾಖೆಗಳನ್ನು ಸ್ಥಳಾಂತರ ಮಾಡುವುದಾಗಿ ಹೇಳಿತ್ತು. ಸರ್ಕಾರ ಈ ಮಾತು ಹೇಳಿ 2 ವರ್ಷ ಗತಿಸಿದರೂ ಉತ್ತರ ಕರ್ನಾಟಕ ಬೆಳಗಾವಿ ಸುವರ್ಣ ಸೌಧಕ್ಕೆ ಸರ್ಕಾರಿ ಇಲಾಖೆಗಳನ್ನು ಸ್ಥಳಾಂತರ ಮಾಡದೇ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತದೆ. ಆದ್ದರಿಂದ ಆಳುವ ಸರ್ಕಾರಕ್ಕೆ ಇನ್ನೂ ಕಾಲ ಮಿಂಚಿಲ್ಲ. ಆ. 15ರೊಳಗೆ ಇಲಾಖೆಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡದಿದ್ದರೆ ಈ ಭಾಗದ ಜನತೆ ಅನಿವಾರ್ಯವಾಗಿ ಪ್ರತ್ಯೇಕ ರಾಜ್ಯ ಕೇಳಲು ಮುಂದಾಗಬೇಕಾಗುತ್ತದೆ. ಸರ್ಕಾರ ನಾವು ಕೊಟ್ಟ ಸಮಯದೊಳಗೆ ಈ ಇಲಾಖೆಯನ್ನು ಸ್ಥಳಾಂತರ ಮಾಡದಿದ್ದರೆ ಸರ್ಕಾರದ ವಿರುದ್ಧ ಈ ಭಾಗದಲ್ಲಿ ಉಗ್ರ ಹೋರಾಟ ಪ್ರಾರಂಭ ಮಾಡುವುದಾಗಿ ಎಚ್ಚರಿಕೆ ನೀಡಿದರು.
 

click me!