* ರಾಜ್ಯದ ಕರ್ನಾಟಕ ನೀರಾವರಿ ನಿಗಮದಲ್ಲಿ 3ರಿಂದ 4 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ
* ನಾವು ಭ್ರಷ್ಟಾಚಾರ ನಡೆದ ಎಲ್ಲ ದಾಖಲೆಗಳ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದ್ದೇವೆ
* ಭ್ರಷ್ಟಾಚಾರವನ್ನು ಸಿಬಿಐಗೆ ವಹಿಸಬೇಕೆಂದು ಮನವಿ ಮಾಡಿಕೊಂಡಿದ್ದೇವೆ
ನರಗುಂದ(ಜೂ.15): ಮಹದಾಯಿ ಯೋಜನೆ ಜಾರಿಗೆ ಸರ್ಕಾರ ವಿಳಂಬ ನೀತಿ ಖಂಡಿಸಿ ಶೀಘ್ರದಲ್ಲಿ ಮಹದಾಯಿ ಹೋರಾಟಗಾರರು ಬೆಂಗಳೂರು ಚಲೋ ಹಮ್ಮಿಕೊಳ್ಳುತ್ತೇವೆಂದು ರೈತ ಸೇನಾ ಸಂಘಟನೆÜಯ ರಾಜ್ಯ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ಅವರು 2525ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ಹೋರಾಟ ವೇದಿಕೆಯಲ್ಲಿ ಮಾತನಾಡಿ, ರಾಜ್ಯದ ಉತ್ತರ ಕರ್ನಾಟಕ ಭಾಗದ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಜನ್ಮ ತಾಳುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳನ್ನು ಮಲಪ್ರಭೆ ಜಲಾಶಯಕ್ಕೆ ತಂದು ಜೋಡಣೆ ಮಾಡಿದರೆ ಈ ಭಾಗದ ನಾಲ್ಕು ಜಿಲ್ಲೆ ಹನ್ನೊಂದು ತಾಲೂಕಿನ ರೈತರಿಗೆ ಕುಡಿಯುವ ನೀರಿಗೆ ಮತ್ತು ಕೃಷಿಗೆ ಅನುಕೂಲವಾಗುತ್ತದೆಂದು ಈ ಭಾಗದ ರೈತರು ಕಳೆದ ಇಪ್ಪತ್ತು ವರ್ಷದಿಂದ ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದರು.
Mahadayi Project: 'ಮಹದಾಯಿಗೆ ಮೀಸಲಿಟ್ಟ ಹಣ ಬಳಕೆ ಮಾಡಿ ನೀರಾವರಿ ಕಲ್ಪಿಸಿ'
2015ರಿಂದ ಬಂಡಾಯ ನೆಲದಲ್ಲಿ ರೈತ ಸೇನಾ ಸಂಘಟನೆಯಿಂದ 7 ವರ್ಷದಿಂದ ಹೋರಾಟ ಮಾಡಿದ ನಂತರ ಈ ಮಹದಾಯಿ ಜಲ ವಿವಾದಕ್ಕೆ ನೇಮಕವಾದ ನಾಯಾಧಿಕರಣದ ನ್ಯಾಯಾಧೀಶರು ಕರ್ನಾಟಕ ರಾಜ್ಯಕ್ಕೆ 7.5 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಪರವಾನಗಿ ನೀಡಿದೆ, ಮೇಲಾಗಿ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದರೂ ಸಹ ರಾಜ್ಯ ಸರ್ಕಾರ ಈ ನೀರು ಬಳಕೆ ಮಾಡಿಕೊಳ್ಳಲು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಜೂ.16ಕ್ಕೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನಾಲ್ಕು ಜಿಲ್ಲೆ ಹನ್ನೊಂದು ತಾಲೂಕಿನ ಮಹದಾಯಿ ಹೋರಾಟಗಾರರ ಸಭೆ ಕರೆದು ಮಹದಾಯಿ ಯೋಜನೆ ವಿಳಂಬದ ಬಗ್ಗೆ ಈ ಸಭೆಯಲ್ಲಿ ಚರ್ಚೆ ಮಾಡಿ ನಂತರ ಈ ಯೋಜನೆ ಜಾರಿ ಮಾಡಲು ಬೆಂಗಳೂರು ಚಲೋ ಹಮ್ಮಿಕೊಂಡ ಸರ್ಕಾರದ ವಿರುದ್ಧ ಹೋರಾಟ ಮಾಡಲು ಈ ಸಭೆಯಲ್ಲಿ ದಿನಾಂಕ ನಿಗದಿ ಮಾಡುತ್ತವೆಂದರು.
ರಾಜ್ಯದ ಕರ್ನಾಟಕ ನೀರಾವರಿ ನಿಗಮದಲ್ಲಿ 3ರಿಂದ 4 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ, ನಾವು ಭ್ರಷ್ಟಾಚಾರ ನಡೆದ ಎಲ್ಲ ದಾಖಲೆಗಳ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿ, ಈ ನೀರಾವರಿ ನಿಗಮದ ಭ್ರಷ್ಟಾಚಾರವನ್ನು ಸಿಬಿಐಗೆ ವಹಿಸಬೇಕೆಂದು ಮನವಿ ಮಾಡಿಕೊಂಡಿದ್ದೇವೆ.
ನೀರಾವರಿ ಇಲಾಖೆಯ ಭ್ರಷ್ಟಾಚಾರ ಸಿಬಿಐಗೆ ವಹಿಸಿ: ಸರ್ಕಾರಕ್ಕೆ ಡೆಡ್‌ಲೈನ್ ಕೊಟ್ಟ ಸೊಬರದಮಠ
ಅದೇ ರೀತಿ ನಮ್ಮ ಭಾಗದ ಬೆಣ್ಣೆ ಹಳ್ಳದಲ್ಲಿ ಚೆಕ್‌ಡ್ಯಾಂ ನಿರ್ಮಾಣ ಮಾಡಲು . 9.50 ಕೋಟಿ ಅನುದಾನ ನೀಡಿದರೂ ಸಹ ಬೆಣ್ಣೆ ಹಳ್ಳದಲ್ಲಿ ಚೆಕ್‌ಡ್ಯಾಂ ಕೆಲಸ ಆಗಿಲ್ಲ. ಈ ಎಲ್ಲಾ ಭ್ರಷ್ಟಾಚಾರದ ತನಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರ ವಿರುದ್ಧ ಉಗ್ರ ಹೋರಾಟ ಮಾಡುತ್ತವೆಂದು ಎಚ್ಚರಿಕೆ ನೀಡಿದರು.
ಎ.ಪಿ. ಪಾಟೀಲ, ವೀರಬಸಪ್ಪ ಹೂಗಾರ, ಎಸ್.ಬಿ. ಜೋಗಣ್ಣವರ, ಪರಶರಾಮ ಜಂಬಗಿ, ಹನಮಂತ ಸರನಾಯ್ಕರ, ಸುಭಾಸ ಗಿರಿಯಣ್ಣವರ, ವಾಸು ಚವಾಣ, ಅರ್ಜುನ ಮಾನೆ, ವಿಜಯಕುಮಾರ ಹೂಗಾರ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ಬಸವ್ವ ಪೂಜಾರ, ವೆಂಕಪ್ಪ ಹುಜರತ್ತಿ, ರಾಮಚಂದ್ರ ಸಾಬಳೆ, ಈರಣ್ಣ ಗಡಗಿ ಉಪಸ್ಥಿತರಿದ್ದರು.