ವಿಶ್ವವಿದ್ಯಾನಿಲಯದ ಮಾರ್ಗದರ್ಶನದಲ್ಲಿ ತಯಾರಾದ ರಾಸಾಯನಿಕ ಮುಕ್ತ ಬೆಲ್ಲವನ್ನು ಜಿಲ್ಲಾ ಹಾಲು ಒಕ್ಕೂಟದವರು ನಂದಿನಿ ಬೆಲ್ಲದ ಬರ್ಫಿಗೆ ಆಯ್ಕೆ ಮಾಡಿಕೊಂಡು ಮಂಡ್ಯ ಬೆಲ್ಲಕ್ಕೆ ಗತವೈಭವ ಸೃಷ್ಟಿಸಿದ್ದಾರೆ. ಕೇರಳದ ಕಲ್ಲಿಕೋಟೆ ಸಂಸ್ಥೆಗೆ ಗುತ್ತಿಗೆ ನೀಡಿ ಬೆಲ್ಲ ತಯಾರಿಕೆ ಮಾಡಲಾಗಿದೆ.
ಮಂಡ್ಯ (ಜ.9): ಜನಪ್ರಿಯ ಉತ್ಪನ್ನಗಳಲ್ಲಿ ಒಂದಾದ ನಂದಿನಿ ಬೆಲ್ಲದ ಬರ್ಫಿಗೆ ವಿ.ಸಿ.ಫಾರಂ ಬ್ರಾಂಡ್ ಬೆಲ್ಲವನ್ನು ಉಪಯೋಗಿಸುತ್ತಿರುವುದು ಹೆಗ್ಗಳಿಕೆಯ ಸಂಗತಿ. ವಿಶ್ವವಿದ್ಯಾನಿಲಯದ ಮಾರ್ಗದರ್ಶನದಲ್ಲಿ ತಯಾರಾದ ರಾಸಾಯನಿಕ ಮುಕ್ತ ಬೆಲ್ಲವನ್ನು ಜಿಲ್ಲಾ ಹಾಲು ಒಕ್ಕೂಟದವರು ನಂದಿನಿ ಬೆಲ್ಲದ ಬರ್ಫಿಗೆ ಆಯ್ಕೆ ಮಾಡಿಕೊಂಡು ಮಂಡ್ಯ ಬೆಲ್ಲಕ್ಕೆ ಗತವೈಭವ ಸೃಷ್ಟಿಸಿದ್ದಾರೆ.
2021-22ನೇ ಸಾಲಿನಿಂದ ಪಿಎಂಎಫ್‌ಎಂಇ ಯೋಜನೆಯಡಿ ಬೆಲ್ಲದ ಪಾರ್ಕ್ ಅನ್ನು ಇನ್‌ಕ್ಯೂಬೇಷನ್ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಕಾರ್ಯಾಚರಣೆ ಮತ್ತು ನಿರ್ವಹಣೆ ಮಾದರಿಯಲ್ಲಿ ಇ-ಟೆಂಡರ್ ಪ್ರಕ್ರಿಯೆ ನಡೆಸಿ ಕೇರಳದ ಕಲ್ಲಿಕೋಟೆಯ ವರ್ಷ ಮೆಡಿಪ್ಲೋರ ಹರ್ಬಲ್ ಸಲ್ಯೂಷನ್ಸ್ ಸಂಸ್ಥೆಗೆ ಗುತ್ತಿಗೆ ನೀಡಿ ರಾಸಾಯನಿಕ ಮುಕ್ತ ಬೆಲ್ಲ ತಯಾರಿಸಲಾಗುತ್ತಿದೆ.
ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಹೇಗೆ?: ವಿಸಿಎಫ್ 0517ತಳಿಯ ಕಬ್ಬಿನಿಂದ ಬೆಲ್ಲವನ್ನು ತಯಾರಿಸಲಾಗುತ್ತಿದೆ. ಬೆಲ್ಲಕ್ಕೆ ಸ್ವಲ್ಪವೂ ರಾಸಾಯನಿಕ ಬಳಸುವುದಿಲ್ಲ. ಸುಣ್ಣದ ಜೊತೆಗೆ ಗಂಡಿ ಕಡ್ಡಿ (ಬೆಂಡೆಕಾಯಿ ಕಾಂಡ), ದಾಸವಾಳ ಕಾಂಡ ಬಳಸಲಾಗುತ್ತದೆ. ಅಲ್ಲದೆ, ನೆಲಗಡಲೆ, ಸೋಯಾ, ಅವರೆ ಬೀಜವನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ರಾಸಾಯನಿಕ ಮುಕ್ತ ಬೆಲ್ಲವನ್ನು ಉತ್ಪಾದನೆ ಮಾಡಲಾಗುತ್ತಿದೆ.
ಬೆಲ್ಲದ ತಯಾರಿಕೆಯಲ್ಲಿ ಘನರೂಪದ ಬೆಲ್ಲ, ದ್ರವರೂಪದ ಬೆಲ್ಲ ಮತ್ತು ಪುಡಿ ಬೆಲ್ಲ ತಯಾರು ಮಾಡುವ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೌಲ್ಯವರ್ಧಿತ ಬೆಲ್ಲ ಉತ್ಪನ್ನಗಳಾದ ತುಳಸಿ, ಪುದೀನ, ಶುಂಠಿ ಉಪಯೋಗಿಸಿ ಬೆಲ್ಲ ತಯಾರು ಮಾಡುವ ಸಂಶೋಧನೆಯನ್ನೂ ಸಹ ಕೈಗೊಳ್ಳಲಾಗಿದೆ.
ಎಷ್ಟು ಬೆಲ್ಲ ಉತ್ಪಾದನೆ?: ಬೆಲ್ಲದ ಪಾರ್ಕ್‌ನಲ್ಲಿ ಸ್ಥಾಪಿಸಿರುವ ಬೆಲ್ಲ ತಯಾರಿಕಾ ಘಟಕದಲ್ಲಿ ಪ್ರತಿದಿನ 10 ರಿಂದ 12 ಟನ್ ಕಬ್ಬನ್ನು ನುರಿಸಿ 10 ರಿಂದ 12ಕ್ವಿಂಟಾಲ್ ಬೆಲ್ಲ ತಯಾರು ಮಾಡುವ ಸಾಮರ್ಥ್ಯವಿದೆ. ಗುಣಮಟ್ಟದ ಕಬ್ಬಿನ ಲಭ್ಯತೆಗೆ ಅನುಸಾರವಾಗಿ ಪ್ರಸ್ತುತ ಪ್ರತಿ ದಿನಕ್ಕೆ 6 ರಿಂದ 7 ಟನ್ ಕಬ್ಬನ್ನು ನುರಿಸಿ ಬೆಲ್ಲ ಉತ್ಪಾದನೆ ಮಾಡಲಾಗುತ್ತಿದೆ ಎಂದು ವಿ.ಸಿ.ಫಾರಂ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯಪುರದಲ್ಲಿದೆ ಕೆಮಿಕಲ್ ರಹಿತ ಅಪರೂಪದ ಆಲೆಮನೆ: ಆರೋಗ್ಯ ವೃದ್ಧಿಗೆ ಸಹಕಾರಿ
ಪ್ರಸ್ತುತ ಬೆಲ್ಲದ ಪಾರ್ಕ್‌ನಲ್ಲಿ ತಯಾರಾದ ಬೆಲ್ಲವನ್ನು ಕೃಷಿ ವಿಶ್ವವಿದ್ಯಾನಿಲಯದ ವಿ.ಸಿ.ಫಾರಂ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ತಯಾರಾದ ರಾಸಾಯನಿಕ ಮುಕ್ತ ಬೆಲ್ಲವನ್ನು ಉಪಯೋಗಿಸಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದವರು ಬೆಲ್ಲದ ಬರ್ಫಿ ತಯಾರಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಬೆಲ್ಲದ ಬರ್ಫಿ ರುಚಿಗೆ ಗ್ರಾಹಕರು ಫಿದಾ ಆಗಿರುವುದು ಮಂಡ್ಯ ಬೆಲ್ಲಕ್ಕೆ ಹೆಚ್ಚಿನ ಮಹತ್ವ ತಂದುಕೊಟ್ಟಿದೆ. ವಿ.ಸಿ.ಫಾರಂ ಬ್ರಾಂಡ್ ಬೆಲ್ಲಕ್ಕೆ ಬೆಂಗಳೂರು, ಮೈಸೂರು, ರಾಮನಗರ ಜಿಲ್ಲೆಗಳಿಂದಷ್ಟೇ ಅಲ್ಲದೆ ತಮಿಳುನಾಡು ರಾಜ್ಯದಿಂದಲೂ ಬೇಡಿಕೆ ಬರುತ್ತಿದೆ.
Makar Sankranti 2023: ರುಚಿರುಚಿಯಾದ ಎಳ್ಳುಬೆಲ್ಲ, ಎಳ್ಳುಂಡೆ ರೆಸಿಪಿ ಇಲ್ಲಿದೆ..
ತಿಂಗಳಿಗೆ 3 ಟನ್ ಬೆಲ್ಲ ಪೂರೈಕೆ: ಮನ್‌ಮುಲ್‌ನಲ್ಲಿ ತಯಾರಾಗುತ್ತಿರುವ ಬೆಲ್ಲದ ಬರ್ಫಿಗೆ ಪೈಲಟ್ ಪ್ರಾಜೆಕ್ಟ್‌ನಡಿ 3 ಟನ್ ಬೆಲ್ಲವನ್ನು ಪೂರೈಸಲಾಗಿದೆ. ಬೆಲ್ಲದ ಗುಣಮಟ್ಟ ಉತ್ತಮವಾಗಿರುವುದರಿಂದ ಮುಂದೆ ಪ್ರತಿ ತಿಂಗಳು 2ಟನ್ ಬೆಲ್ಲಕ್ಕೆ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ಬೆಲ್ಲದ ಪಾರ್ಕ್ ಅಧಿಕಾರಿಗಳು ಹೇಳಿದ್ದಾರೆ. ಮುಂದಿನ ಫೆಬ್ರವರಿ ತಿಂಗಳಿನಿಂದ ಬೆಲ್ಲದ ಪಾರ್ಕ್‌ನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಸ್ಟೀಮ್ ಬಾಯ್ಲಿಂಗ್ ಯೂನಿಟ್, ಪೌಡರ್, ಪ್ಯಾಕಿಂಗ್, ಶೇಖರಣೆ ಯೂನಿಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.