ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿದ್ದು ಸರಿಯಲ್ಲ| ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್| ರಾಜ್ಯ ಸರ್ಕಾರ ಟಿಪ್ಪು ಜಯಂತಿ ರದ್ದುಗೊಳಿಸಿದ್ದು ಸರಿಯಲ್ಲ| ಚರಿತ್ರೆಯನ್ನು ತಿರುಚುವ ಕೆಲಸ ಯಾರೂ ಮಾಡಬಾರದು| ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಜಯಂತಿ ಆಚರಿಸಬೇಕು| ಈ ಮೂಲಕ ಅವರಿಗೆ ಗೌರವ ಸಲ್ಲಿಸುವ ಔದಾರ್ಯ ಬೆಳಸಿಕೊಳ್ಳಬೇಕು|
ಬಳ್ಳಾರಿ(ನ.27): ಟಿಪ್ಪು ಸುಲ್ತಾನ್ ಅವರ ಹೆಸರನ್ನು ಪಠ್ಯದಿಂದ ತೆಗೆದು ಹಾಕಿದರೆ ರಾಜ್ಯ ಸರ್ಕಾರ ಪತನವಾಗುವುದು ಖಚಿತ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಮುಖಂಡ ಹಾಗೂ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಎಚ್ಚರಿಸಿದ್ದಾರೆ.
ನಗರದ ಬಿಡಿಎಎ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಯುವಶಕ್ತಿ) ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಟಿಪ್ಪು ಜಯಂತಿ ರದ್ದುಗೊಳಿಸಿದೆ, ಇದು ಸರಿಯಲ್ಲ. ಚರಿತ್ರೆಯನ್ನು ತಿರುಚುವ ಕೆಲಸ ಯಾರೂ ಮಾಡಬಾರದು. ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಜಯಂತಿ ಆಚರಿಸಬೇಕು. ಈ ಮೂಲಕ ಅವರಿಗೆ ಗೌರವ ಸಲ್ಲಿಸುವ ಔದಾರ್ಯ ಬೆಳಸಿಕೊಳ್ಳಬೇಕು ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ ಸಚಿವರು, ಶಾಸಕರಿಗೆ ಗಡಿನಾಡು, ಹೊರನಾಡು, ಒಳನಾಡು ಇದ್ಯಾವುದರ ಬಗ್ಗೆ ಅರಿವಿಲ್ಲ. ಗಡಿನಾಡು ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಯಾವ ಕಾಳಜಿಯೂ ಇಲ್ಲ. ಹೊರ ನಾಡ ಕನ್ನಡಿಗರ ಸಂಕಷ್ಟಗಳನ್ನು ಕೇಳುವ ದೊಡ್ಡತನ ಸಚಿವ, ಶಾಸಕರಿಗಳಿಗಿಲ್ಲ. ಇವರಿಗೆ ಬರೀ ಅಧಿಕಾರ ಮಾತ್ರ ಬೇಕಾಗಿದೆಯೇ ವಿನಾ, ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಯಾವ ಜವಾಬ್ದಾರಿ ಇವರಿಗಿಲ್ಲ ಎಂದು ಟೀಕಿಸಿದರು.
ನಾಡಿನ ಜನರು ಒಪ್ಪಿರುವ ಕನ್ನಡ ಬಾವುಟವನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು ಎಂಬುದು ಕನ್ನಡಪರ ಸಂಘಟನೆಗಳ ಆಗ್ರಹವಾಗಿದೆ. ಇದು ನಾಡಿನ ಜನರ ಒತ್ತಾಯವೂ ಹೌದು. ಒಂದು ವೇಳೆ ಸರ್ಕಾರ ಕನ್ನಡ ವಿರೋಧಿ ಧೋರಣೆ ತಳೆದರೆ ಎಲ್ಲ ಕನ್ನಡಿಗರು ಹೋರಾಟಕ್ಕೆ ಸಜ್ಜಾಗಬೇಕು. ಕನ್ನಡಕ್ಕೆ ಧಕ್ಕೆಯಾದರೆ ಯಾರೂ ಸುಮ್ಮನಿರಬಾರದು. ಚಳುವಳಿಯ ಮೂಲಕ ಸರ್ಕಾರಗಳಿಗೆ ಚಾಟಿ ಬೀಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ಏಕೀಕರಣಕ್ಕೆ ಬಳ್ಳಾರಿ ಜಿಲ್ಲೆ ಬಹುದೊಡ್ಡ ಕೊಡುಗೆ ನೀಡಿದೆ. ಇಲ್ಲಿನ ಸಾವಿರಾರು ಜನರು ನಿರಂತರ ಚಳುವಳಿಯಲ್ಲಿ ತೊಡಗಿಸಿಕೊಂಡು ಕನ್ನಡಪ್ರೇಮ ಮೆರೆದಿದ್ದಾರೆ. ಏಕೀಕರಣದಲ್ಲಿ ಹುತಾತ್ಮರಾದ ನಾಡಿನ ಏಕೈಕ ಕನ್ನಡಿಗರ ಪೈಲ್ವಾನ್ ರಂಜಾನ್‌ಸಾಬ್ ಬಳ್ಳಾರಿಯವರಾಗಿದ್ದಾರೆ. ಇಂತಹ ಅನನ್ಯ ಪರಂಪರೆ ಬಳ್ಳಾರಿ ಜಿಲ್ಲೆಗಿದೆ ಎಂದರು.
ಹರಗಿನಡೋಣಿ ಸಿದ್ಧಲಿಂಗ ಶಿವಾಚಾರ್ಯ ಸಾಮಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಉಳಿವಿಗೆ ಕನ್ನಡಿಗರು ಶ್ರಮಿಸಬೇಕು. ಕನ್ನಡಕ್ಕೆ ಕುತ್ತು ಬಂದರೆ ಹೋರಾಟ ನಡೆಸುವ ಗಟ್ಟಿತನ ಬೆಳಸಿಕೊಳ್ಳಬೇಕು ಎಂದರು.
ವಿಧಾನಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಅವರು ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿಯೇ ವ್ಯವಹಾರ ನಡೆಯುವಂತಾಗಬೇಕು. ಕನ್ನಡ ಪರ ಸಂಘಟನೆಗಳು ಭಾಷಾ ಉಳಿವಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಕನ್ನಡಪರ ಹೋರಾಟ ಮಾಡುವವರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳಿಸುವ ಕಾಳಜಿ ತೋರಿಸಬೇಕು. ಎಲ್ಲರೂ ಆಂಗ್ಲ ಭಾಷೆಯ ಮೊರೆ ಹೋಗುತ್ತಿರುವುದರಿಂದಾಗಿಯೇ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ಬಂದಿದೆ. ಇದಕ್ಕೆ ಆಸ್ಪದ ನೀಡಬಾರದು. ದೊಡ್ಡ ದೊಡ್ಡ ಅಧಿಕಾರಿಗಳಾದವರು, ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ಕನ್ನಡ ಶಾಲೆಯಲ್ಲಿಯೇ ಓದಿದವರು ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಸಂಘಟನೆಯ ಅಧ್ಯಕ್ಷ ಆರ್. ವಿಜಯಕುಮಾರ್, ಜಿಲಾನಿ, ಮೋಹನ್‌ಬಾಬು, ಎರ್ರಿಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಟಿ. ಶಿವಕುಮಾರ್, ಯುವ ಘಟಕದ ಅಧ್ಯಕ್ಷ ಕೆ. ವೆಂಕಯ್ಯ, ಬೆಸ್ಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ್, ಸಂತೋಷ್‌ಕುಮಾರ್, ಗುರುಬಸವರಾಜ್, ಶಿವಪ್ಪ, ಗುಜ್ಜಲ ರಾಜು, ಮಣಿಕಂಠಾಚಾರ್ಯ, ಪಂಪಾಪತಿ, ರಾಜೇಶ್ ಅಂಗಡಿ ಮತ್ತಿತರರಿದ್ದರು.
ಕಾರ್ಯಕ್ರಮ ಮುನ್ನ ಸಂಘಟನೆಯ ಕಾರ್ಯಕರ್ತರು 500 ಮೀಟರ್ ಉದ್ದದ ಕನ್ನಡ ಬಾವುಟವನ್ನು ನಗರದಲ್ಲಿ ಮೆರವಣಿಗೆ ಮಾಡಿದರು. ಗವಿಯಪ್ಪ ವೃತ್ತದಿಂದ ಶುರುವಾದ ಮೆರವಣಿಗೆ ಬಿಡಿಎಎ ಸಭಾಂಗಣ ತಲುಪಿತು. ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.