Mysuru : ಸೆಸ್ಕ್‌ನ ವಿವಿಧ ಕಟ್ಟಡ ಕಾಮಗಾರಿಗೆ 20ರಂದು ಶಂಕು

By Kannadaprabha NewsFirst Published Jan 19, 2023, 5:33 AM IST
Highlights

ಸೆಸ್ಕ್ ವ್ಯಾಪ್ತಿಯ ಐದು ಜಿಲ್ಲೆಗಳಲ್ಲಿ ನಿರ್ಮಿಸಿರುವ ವಿವಿಧ ಕಟ್ಟಡ ಉದ್ಘಾಟನೆ, ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯ ಜ. 20 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ.

  ಮೈಸೂರು :  ಸೆಸ್ಕ್ ವ್ಯಾಪ್ತಿಯ ಐದು ಜಿಲ್ಲೆಗಳಲ್ಲಿ ನಿರ್ಮಿಸಿರುವ ವಿವಿಧ ಕಟ್ಟಡ ಉದ್ಘಾಟನೆ, ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯ ಜ. 20 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ.ಸೆಸ್ಕ್ ಐದು ಜಿಲ್ಲೆಗಳಲ್ಲಿ ಸುಮಾರು   116.77 ಕೋಟಿ ವೆಚ್ಚದ ಕಾಮಗಾರಿಗಳನ್ನು ಅಂದು ಬೆಳಗ್ಗೆ 11.30ಕ್ಕೆ ಇಂಧನ ಸಚಿವ ಸುನಿಲ್‌ಕುಮಾರ್‌ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ನೂತನ ಕಾಮಗಾರಿಗೆ ಚಾಲನೆ ನೀಡುವರು ಎಂದು ಸೆಸ್ಕ್ ಎಂಡಿ ಜಯವಿಭವ ಸ್ವಾಮಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಪಾಲ್ಗೊಳ್ಳಲಿದ್ದು, ಶಾಸಕ ಎಲ್‌. ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಸೆಸ್ಕ್ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆ, ಕಾರ್ಯಕ್ರಮಗಳ ವಿವರ ಪ್ರದರ್ಶಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಜ. 1 ರಿಂದ ವಿದ್ಯುತ್‌ ಬಿಲ್‌ನಲ್ಲಿಯೇ ಕ್ಯೂ ಆರ್‌ ಕೋಡ್‌ ನಮೂದಿಸಿದ್ದು, ಯಾವುದೇ ಯುಪಿಐ ಆಪ್‌ ಬಳಸಿ ಹಣ ಪಾವತಿಸಿ, ಕೂಡಲೇ ಇ ಪಡೆಯಬಹುದು. ಸೆಸ್ಕ್ ವ್ಯಾಪ್ತಿಯಲ್ಲಿ ಇ ಕಚೇರಿ ಆರಂಭಿಸಿದ್ದು, ಸಿಬ್ಬಂದಿ ಎಲ್ಲಿಂದ ಬೇಕಾದರೂ ಕೆಲಸ ನಿರ್ವಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಲೋಡ್‌ ಶೆಡ್ಡಿಂಗ್‌ ಮಾಡುತ್ತಿಲ್ಲ:

ರೈತರು ಬೆಳಗಿನ ವೇಳೆ 7 ಗಂಟೆ ವಿದ್ಯುತ್‌ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ನಾವು ಸೆಸ್ಕ್ ವ್ಯಾಪ್ತಿಯಲ್ಲಿ ಲೋಡ್‌ ಶೆಡ್ಡಿಂಗ್‌ ಮಾಡುತ್ತಿಲ್ಲ. ಬದಲಿಗೆ ಲೋಡ್‌ ಮ್ಯಾನೇಜ್‌ಮೆಂಟ್‌ ಮಾಡುತ್ತಿದ್ದೇವೆ. ಕೆಲವೆಡೆ ಮಾತ್ರ ಬೆಳಗಿನ ವೇಳೆ ವಿದ್ಯುತ್‌ ಕಡಿತಗೊಳಿಸಲಾಗಿತ್ತು. ಕಳೆದ ತಿಂಗಳು ವಿದ್ಯುತ್‌ ಬೇಡಿಕೆ ಹೆಚ್ಚಿದ್ದ ಕಾರಣ ಪಂಪ್‌ಸೆಟ್‌ಗೆ ವಿದ್ಯುತ್‌ ನೀಡುವ ಸಮಯದಲ್ಲಿ ಬದಲಾವಣೆ ಮಾಡಿದ್ದೆವು. ರಾಯಚೂರಿನಲ್ಲಿ ಕೆಲವು ವಿದ್ಯುತ್‌ ಉತ್ಪಾದನಾ ಘಟಕಗಳು ಸ್ಥಗಿತವಾದ್ದರಿಂದ ಪೂರೈಕೆಯಲ್ಲಿ ವ್ಯತ್ಯಸವಾಗಿದೆ. ಎರಡು, ಮೂರು ವಾರದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ಹೇಳಿದರು.

75 ಯೂನಿಟ್‌ ಉಚಿತ ವಿದ್ಯುತ್‌

ಬೆಳಕು ಯೋಜನೆಯಡಿ ಬಡವರ ಮನೆಗಳಿಗೆ ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುತ್ತಿದೆ. ಅಮೃತ್‌ ಯೋಜನೆಯಡಿ ಪರಿಶಿಷ್ಟಸಮುದಾಯದ ಬಿಪಿಎಲ್‌ ಕಾರ್ಡುದಾರರಿಗೆ 75 ಯೂನಿಟ್‌ ಉಚಿತವಾಗಿ ವಿದ್ಯುತ್‌ ನೀಡಲಾಗುತ್ತಿದೆ. 250 ಯೂನಿಟ್‌ಗಿಂತ ಕಡಿಮೆ ಉಪಯೋಗಿಸುವವರೂ ಈ ಸೌಲಭ್ಯ ಪಡೆಯಬಹುದು. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಜತೆಗೆ ಅಮೃತ್‌ ಯೋಜನೆಯಡಿ . 2 ಲಕ್ಷ ಕುಟುಂಬಕ್ಕೆ ವಿದ್ಯುತ್‌ ಸೌಲಭ್ಯ ನೀಡಲಾಗುತ್ತಿದೆ. 250 ಯೂನಿಟ್‌ ಒಳಗೆ ಬಳಕೆ ಇರಬೇಕು. ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದು. ಯಾವುದೇ ಸಮಸ್ಯೆ ಇದ್ದರೂ 1912ಕ್ಕೆ ಕರೆ ಮಾಡಬಹುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೆಸ್ಕ್ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಎಲ್‌. ಲೋಕೇಶ್‌, (ಯೋಜನೆ) ಆರ್‌. ರಾಮಸ್ವಾಮಿ, ಮುನಿಗೋಪಾಲ ರಾಜು, ಕೆಪಿಟಿಸಿಎಲ್‌ ಮುಖ್ಯ ಎಂಜಿನಿಯರ್‌ ಎಸ್‌. ರಂಗರಾಜು, ಅಧೀಕ್ಷಕ ಎಂಜಿನಿಯರ್‌ ಟಿ.ಎಸ್‌. ರಮೇಶ್‌, ನಿರ್ದೇಶಕ ಉಮೇಶ್‌, ರವಿಕುಮಾರ್‌ ಇದ್ದರು.

ಉದ್ಘಾಟನೆಯಾಗಲಿರುವ ಕಟ್ಟಡಗಳು

ಕೆ.ಆರ್‌. ನಗರ ವಿಭಾಗ ಕಚೇರಿ, ಮದ್ದೂರು ವಿಭಾಗ ಕಚೇರಿ, ಮಡಿಕೇರಿ ವಿಭಾಗ ಕಚೇರಿ, ಮೈಸೂರಿನ ರಾಮಕೃಷ್ಣ ನಗರದ ಉಪ ವಿಭಾಗ ಕಚೇರಿ, ಮಂಡ್ಯ ಕೆರೆಗೋಡು ಉಪ ವಿಭಾಗ ಕಚೇರಿ, ಮಂಡ್ಯ ಉಪ ವಿಭಾಗ ಕಚೇರಿ, ಜಯಪುರ ಶಾಖಾ ಕಚೇರಿ, ಗದ್ದಿಗೆ ಶಾಖಾ ಕಚೇರಿ, ಬಿ. ಮಟಕೆರೆ ಶಾಖಾ ಕಚೇರಿ, ಹನಗೋಡು ಶಾಖಾ ಕಚೇರಿ, ಆಲನಹಳ್ಳಿ ಶಾಖಾ ಕಚೇರಿ, ಬಸರಾಳು ಶಾಖಾ ಕಚೇರಿ, ಮಳವಳ್ಳಿ ಶಾಖಾ ಕಚೇರಿ, ಕೆಪಿಟಿಸಿಎಲ್‌ನ ಚಾಮಲಪುರ (ಬಿ.ಸಿ. ಹಳ್ಳಿ) ಉಪ ಕೇಂದ್ರ.

ಶಂಕು ಸ್ಥಾಪನೆಯಾಗಲಿರುವ ಕಾಮಗಾರಿ

ಸೆಸ್‌್ಕನ ಕೆ.ಆರ್‌. ಪೇಟೆ ವಿಭಾಗ ಕಚೇರಿ, ಎಚ್‌.ಡಿ. ಕೋಟೆ ಉಪ ವಿಭಾಗ ಕಚೇರಿ, ಪಿರಿಯಾಪಟ್ಟಣ ಉಪ ವಿಭಾಗ ಕಚೇರಿ, ಗುಂಡ್ಲುಪೇಟೆ ಉಪ ವಿಭಾಗ ಕಚೇರಿ, ಎಚ್‌.ಡಿ. ಕೋಟೆ ಶಾಖಾ ಕಚೇರಿ, ಕಣಕಟ್ಟೆಶಾಖಾ ಕಚೇರಿ, ಕೆಪಿಟಿಸಿಎಲ್‌ನ ವರಕೋಡು ವಿದ್ಯುತ್‌ ಉಪ ಕೇಂದ್ರ, ಉದ್ಬೂರು ವಿದ್ಯುತ್‌ ಉಪ ಕೇಂದ್ರ, ರತ್ನಪುರಿ ವಿದ್ಯುತ್‌ ಉಪ ಕೇಂದ್ರ, ಮಾರಗೌಡನಹಳ್ಳಿ ವಿದ್ಯುತ್‌ ಉಪ ಕೇಂದ್ರ, ಸುಂಕಾತೊಣ್ಣೂರು ವಿದ್ಯುತ್‌ ಉಪ ಕೇಂದ್ರ, ಈಚಲು ಗುಡ್ಡ ಕಾವಲ್‌ವಿದ್ಯುತ್‌ ಉಪ ಕೇಂದ್ರ, ಬೀರುವಳ್ಳಿ ವಿದ್ಯುತ್‌ ಉಪ ಕೇಂದ್ರ, ಧನಗೂರು ವಿದ್ಯುತ್‌ ಉಪ ಕೇಂದ್ರ.

click me!