ವಂದೇ ಭಾರತ್‌ ಸ್ಲೀಪರ್‌ ಬೋಗಿ ಬೆಂಗ್ಳೂರು ಬೆಮೆಲ್‌ನಲ್ಲಿ ಅಭಿವೃದ್ಧಿ: ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌

By Kannadaprabha News  |  First Published Mar 10, 2024, 6:30 AM IST

ಜಾಗತಿಕ ಮಟ್ಟದಲ್ಲಿ ಹೋಲಿಸಿದರೆ ಈ ರೈಲು ಕಡಿಮೆ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ನಮ್ಮಲ್ಲೇ ಮೆಟ್ರೋ ರೈಲಿನ ಒಂದು ಬೋಗಿ ₹ 9 - ₹ 10 ಕೋಟಿ ವೆಚ್ಚವಾಗುತ್ತಿದೆ. ವಂದೇ ಭಾರತ್‌ ಸ್ಲೀಪರ್‌ ಬೋಗಿಗೆ ಅಂದಾಜು ₹ 8 - ₹ 9 ಕೋಟಿ ತಗಲುತ್ತಿದೆ. ವಿನ್ಯಾಸ, ದೇಸಿಯ ಮಟ್ಟದಲ್ಲೇ ನಿರ್ಮಾಣ ಆಗುತ್ತಿರುವ ಕಾರಣ ಕಡಿಮೆ ವೆಚ್ಚದಾಯಕವಾಗಿದೆ ಎಂದು ಹೇಳಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ 


ಬೆಂಗಳೂರು(ಮಾ.10):  ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ (ಬಿಇಎಂಎಲ್‌) ನಿರ್ಮಿಸುತ್ತಿರುವ ಅತ್ಯಾಧುನಿಕ ಸೌಲಭ್ಯದ ‘ವಂದೇ ಭಾರತ್‌ ಸ್ಲೀಪರ್‌’ ರೈಲು ಮುಂದಿನ ಆರು ತಿಂಗಳಲ್ಲಿ ಸಂಚಾರಕ್ಕೆ ಸಿದ್ಧವಾಗಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು. ಶನಿವಾರ ಬಿಇಎಂಎಲ್‌ಗೆ ಭೇಟಿ ನೀಡಿದ ಅವರು ವಂದೇ ಭಾರತ್‌ ಸ್ಲೀಪರ್‌ ರೈಲು ಬೋಗಿ (ಒಳವಿನ್ಯಾಸ ನಿರ್ಮಾಣ ಹಂತ)ಯ ಅನಾವರಣಗೊಳಿಸಿ ಮಾತನಾಡಿದರು.

ಬೆಮೆಲ್‌ 10 ರೈಲುಗಳನ್ನು (160 ಬೋಗಿ) ನಿರ್ಮಿಸಿ ಕೊಡಲಿದೆ. ಈಗಿನ ವಂದೇ ಭಾರತ್‌ಗಿಂತಲೂ ವಿಶೇಷ ಸೌಲಭ್ಯಗಳನ್ನು ಸ್ಲೀಪರ್‌ ರೈಲು ಹೊಂದಿರಲಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಸನಗಳ ಎತ್ತರ ವಿನ್ಯಾಸ ಮಾಡಲಾಗಿದೆ. ಕೇಂದ್ರ ಹವಾನಿಯಂತ್ರಣ ವ್ಯವಸ್ಥೆ, ಶೇ.99ರಷ್ಟು ವೈರಸ್‌ ನಿಯಂತ್ರಣ ವ್ಯವಸ್ಥೆ ಇರಲಿದೆ. ರೈಲನ್ನು ತೀರಾ ಅಲುಗಾಟ ಹಾಗೂ ಕಂಪನ ರಹಿತವಾಗಿಸಲಾಗುತ್ತಿದೆ. ವಂದೇ ಭಾರತ್‌ ಸರಣಿಯ ಇತರೆ ರೈಲುಗಳ ಪ್ರಯಾಣಿಕರಿಂದ ಬಂದ ಎಲ್ಲ ಅಭಿಪ್ರಾಯ ಆಧರಿಸಿ ಈ ರೈಲಿನಲ್ಲಿ ಸಮಸ್ಯೆ ನಿವಾರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

Tap to resize

Latest Videos

ವಂದೇ ಭಾರತ್ ಸ್ಲೀಪರ್ ಕೋಚ್ ಹೇಗಿದೆ ನೋಡಿ... ಫೋಟೋ ಹಂಚಿಕೊಂಡ ರೈಲ್ವೆ ಸಚಿವರು

ಅಗ್ನಿ ಅವಘಡ ನಿಯಂತ್ರಣ ಸೇರಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಳಬಾಗಿಲುಗಳಿಗೆ ಸೆನ್ಸಾರ್‌ ಅಳವಡಿಕೆ, ವಾಸನೆ ಮುಕ್ತ ಶೌಚಾಲಯ, ಚಾಲನಾ ವಿಭಾಗದಲ್ಲಿ ಶೌಚಾಲಯ, ಮೊದಲ ದರ್ಜೆ ಎಸಿ ಕಾರ್‌ನಲ್ಲಿ ಬಿಸಿ ನೀರಿನ ಶವರ್‌ , ಯುಎಸ್‌ಬಿ ಚಾರ್ಜಿಂಗ್‌, ದೃಶ್ಯ ಮಾಹಿತಿ ಸೌಲಭ್ಯ ಇರಲಿದೆ ಎಂದು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಹೋಲಿಸಿದರೆ ಈ ರೈಲು ಕಡಿಮೆ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ನಮ್ಮಲ್ಲೇ ಮೆಟ್ರೋ ರೈಲಿನ ಒಂದು ಬೋಗಿ ₹ 9 - ₹ 10 ಕೋಟಿ ವೆಚ್ಚವಾಗುತ್ತಿದೆ. ವಂದೇ ಭಾರತ್‌ ಸ್ಲೀಪರ್‌ ಬೋಗಿಗೆ ಅಂದಾಜು ₹ 8 - ₹ 9 ಕೋಟಿ ತಗಲುತ್ತಿದೆ. ವಿನ್ಯಾಸ, ದೇಸಿಯ ಮಟ್ಟದಲ್ಲೇ ನಿರ್ಮಾಣ ಆಗುತ್ತಿರುವ ಕಾರಣ ಕಡಿಮೆ ವೆಚ್ಚದಾಯಕವಾಗಿದೆ ಎಂದು ಹೇಳಿದರು.

ಹೇಗಿರುತ್ತೆ ವಂದೇ ಭಾರತ್‌ ಸ್ಲೀಪರ್‌?

ವಂದೇ ಭಾರತ್‌ ಸ್ಲೀಪರ್‌ ಬೆಂಗಳೂರಿನ ಬೆಮೆಲ್‌ನಲ್ಲಿ ನಿರ್ಮಾಣವಾಗುತ್ತಿದೆ. 16 ಬೋಗಿಯ ರೈಲಿದು. ಒಂದು ಬೋಗಿಯಲ್ಲಿ ಕನಿಷ್ಠ 67 ಜನ ಪ್ರಯಾಣಿಸಬಹುದು. ಎಸಿ 3 ಟೈರ್‌ ಬರ್ತ್‌ 11 ಬೋಗಿ, 611 ಆಸನ ಇರಲಿದೆ. ಎಸಿ 2 ಟೈರ್‌ ಬರ್ತ್‌ 4 ಬೋಗಿ, 188 ಆಸನ, ಮೊದಲ ದರ್ಜೆ ಎಸಿ ಬರ್ತ್‌ 1 ಬೋಗಿ 24 ಆಸನ ಇರಲಿದೆ. ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ಗೆ (ಬಿಇಎಂಎಲ್‌) ಭೇಟಿ ನೀಡಿದ ಕೇಂದ್ರ ರೈಲ್ವೇ ಸಚಿವ ಅಶ್ಚಿನಿ ವೈಷ್ಣವ್‌ ಅವರು ನಿರ್ಮಾಣ ಹಂತದ ‘ವಂದೇ ಭಾರತ್‌ ಸ್ಲೀಪರ್‌ ರೈಲಿನ’ ಬೋಗಿಯನ್ನು (ಒಳವಿನ್ಯಾಸ ನಿರ್ಮಾಣ ಹಂತ ) ಅನಾವರಣಗೊಳಿಸಿದರು.

ಮಾ.12 ರಿಂದ ಕಲಬುರಗಿ-ಬೆಂಗಳೂರು ವಂದೇ ಭಾರತ ರೈಲು

‘ವಂದೇ ಭಾರತ್‌ (ಚೇರ್‌ಕಾರ್), ನಮೋ ಭಾರತ್‌ (ರ್‍ಯಾಪಿಡ್‌ ರೈಲ್‌ ಟ್ರಾನ್ಸಿಟ್‌ ಸಿಸ್ಟಂ) ಹಾಗೂ ಅಮೃತ್‌ ಭಾರತ್‌ ( ಪುಶ್‌ಪುಲ್‌ ಟೆಕ್ನಾಲಜಿ) ರೈಲುಗಳ ಯಶಸ್ಸಿನ ಬಳಿಕ ಇದೀಗ ವಂದೇ ಭಾರತ್‌ ಸರಣಿಯ ಸ್ಲೀಪರ್‌ ರೈಲು ಶೀಘ್ರವೇ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಸಂಪೂರ್ಣ ಹೊಸ ವಿನ್ಯಾಸದಲ್ಲಿನ ಈ ರೈಲು ನಿರ್ಮಾಣ ಶೀಘ್ರವೇ ಪೂರ್ಣಗೊಳ್ಳಲಿದ್ದು, ನಾಲ್ಕರಿಂದ ಆರು ತಿಂಗಳ ಕಾಲ ವಿವಿಧ ರೀತಿಯ ತಪಾಸಣೆಗೆ ಒಳಪಡಲಿದೆ ಎಂದರು.

ಬೆಂಗಳೂರು ಮಾಲ್ಡಾ ನಡುವೆ ಸಂಚರಿಸುತ್ತಿರುವ ಅಮೃತ್‌ ಭಾರತ್‌ ರೈಲು ಶೇ. 100 ಭರ್ತಿಯಾಗುತ್ತಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೆಲ ಬದಲಾವಣೆ ಜೊತೆಗೆ ಇನ್ನೂ 100 ಅಮೃತ್‌ ಭಾರತ್‌ ರೈಲು ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

click me!