
ಮೇಲುಕೋಟೆ (ಮಾ.24): ಇತಿಹಾಸ ಪ್ರಸಿದ್ಧ ಮೇಲುಕೋಟೆಯ ಚೆಲುವ ನಾರಾಯಣಸ್ವಾಮಿಯ ವೈರಮುಡಿ ಉತ್ಸವ ಇಂದು ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆಗಳ ಮಾಡಿಕೊಂಡಿದೆ.
ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೈರಮುಡಿ ಉತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ಮೇಲುಕೋಟೆಯ ಸ್ಥಳೀಯ ನಿವಾಸಿಗಳು, ಕೆಲ ಗಣ್ಯರು ಮತ್ತು ಮಾಧ್ಯಮದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
ವೈರಮುಡಿ ಉತ್ಸವ ಸಂಪನ್ನಗೊಂಡ ಬಳಿಕ ರಾಜಮುಡಿ ಉತ್ಸವ ನೆರವೇರಲಿದೆ. ವೈರಮುಡಿ ಉತ್ಸವದ ಅಂಗವಾಗಿ ಕಳೆದ 9 ದಿನಗಳಿಂದ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಗಿದ್ದು, ಇಂದು ಮುಂಜಾನೆಯಿಂದಲೇ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ನೇರವೇರಿಸಲಾಗುವುದು. ಇನ್ನುಚೆಲುವನಾರಾಯಣಸ್ವಾಮಿ ದೇವಾಲಯ ಹಾಗೂ ಉತ್ಸವ ಸಾಗುವ ರಾಜಬೀದಿ, ಪಂಚಕಲ್ಯಾಣಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಕಂಗೊಳಿಸುತ್ತಿವೆ.
ಮೇಲುಕೋಟೆಯಲ್ಲಿ ರಥ ಸಪ್ತಮಿ ಸಂಭ್ರಮ, ಮೇಳೈಸಿತ್ತು ಜಾನಪದ ಕಲಾಮೇಳದ ಮೆರಗು ..
ಮಂಡ್ಯ ಜಿಲ್ಲಾ ಖಜಾನೆಯಿಂದ ವೈರಮುಡಿ, ರಾಜಮುಡಿ ಕಿರೀಟಗಳನ್ನು ತಂದು ಸ್ಥಾನಿಕರು, ಅರ್ಚಕರು, ಪರಿಚಾರಕರ ಸಮಕ್ಷಮ ಪರಿಶೀಲಿಸಿದ ನಂತರ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಕಿರೀಟಧಾರಣೆ ನಡೆಯಲಿದೆ.
ಹೊರಗಿನ ಭಕ್ತರು ವಾಪಸ್: ಮೇಲುಕೋಟೆ ಯಾತ್ರಾ ಸ್ಥಳಕ್ಕೆ ಆಗಮಿಸುತ್ತಿರುವ ಹೊರ ರಾಜ್ಯ ಮತ್ತು ತಾಲೂಕಿನ ಭಕ್ತರನ್ನು ಮಹಾ ಧ್ವಾರದಲ್ಲೇ ತಡೆದು ತಹಸೀಲ್ದಾರ್ ವಾಪಸ್ ಕಳುಹಿಸುತ್ತಿದ್ದಾರೆ.
ಪಾಂಡವಪುರ ತಾಲೂಕಿನ ಭಕ್ತರು ಕ್ಷೇತ್ರಕ್ಕೆ ಆಗಮಿಸಿದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಆಧಾರ್ ಹಾಗೂ ಇತರೆ ದಾಖಲೆ ಪರಿಶೀಲನೆ ನಡೆಸಿ, ಬಳಿಕ ಕಡ್ಡಾಯವಾಗಿ ಕೋವಿಡ್ ತಪಾಸಣೆ ಕೈಗೊಂಡು ನಂತರ ಮೇಲುಕೋಟೆಗೆ ಪ್ರವೇಶ ಅವಕಾಶ ಕಲ್ಪಿಸುತ್ತಿದ್ದಾರೆ. ಮಹೋತ್ಸವ ಮುಗಿಯುವ ವರೆಗೂ ಲಾಡ್ಜ್, ಹೋಟೆಲ್, ಸಾಮೂಹಿಕ ಭೋಜನ ಬಂದ್ ಮಾಡಲು ಜಿಲ್ಲಾಡಳಿತ ಸೂಚಿಸಿದೆ.