ಕಾಡಿ ಕೂಡಿದ್ದೇವೆ, ಮುಂದೆ ಕೂಡಿ ಕಾಡುವುದು ಬೇಡ| ಪಾದಯಾತ್ರೆ ಜನಜಾಗೃತಿ ಸಮಾರಂಭದಲ್ಲಿ ವಚನಾನಂದ ಶ್ರೀ| ತಾತ್ವಿಕವಾಗಿ ಭಿನ್ನಾಭಿಪ್ರಾಯವಿದ್ದರೂ ಸಾಮಾಜಿಕವಾಗಿ ಭಿನ್ನಾಭಿಪ್ರಾಯ ಬರಬಾರದು| ಪಂಚಮಸಾಲಿ ಸಮಾಜದ ಎರಡು ಕಣ್ಣುಗಳು ಕೂಡಲ ಸಂಗಮ ಹಾಗೂ ಹರಿಹರದ ಪೀಠಗಳು: ವಚನಾನಂದ ಶ್ರೀಗಳು|
ಹರಪನಹಳ್ಳಿ(ಜ.26): ಎರಡೂ ಪೀಠಗಳು ಒಂದಾಗಿವೆ. ಕಾಡಿ ಕೂಡಿದ್ದೇವೆ, ಮುಂದೆ ಕೂಡಿ ಕಾಡುವುದು ಬೇಡ.. ನಮ್ಮದರಲ್ಲಿ ಕೆಲವರು ಬೇಳೆ ಬೇಯಿಸಿಕೊಳ್ಳುವುದು ಬೇಡ... ನಮ್ಮ ಇಬ್ಬರ ಉದ್ದೇಶ ಒಂದೇ ಆಗಿದೆ. ಅದು 2ಎ ಮೀಸಲಾತಿ ಪಡೆಯುವುದು. ಕೂಡಲ ಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ಬೃಹತ್ ಪಾದಯಾತ್ರೆಯ ಅಂಗವಾಗಿ ಹರಪನಹಳ್ಳಿಯಲ್ಲಿ ನಡೆದ ಜನಜಾಗೃತಿ ಸಮಾರಂಭದಲ್ಲಿ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿಯವರ ಆಡಿದ ಖಡಕ್ ಮಾತಿದು.
ಪಂಚಮಸಾಲಿ ಸಮಾಜದ ಎರಡು ಕಣ್ಣುಗಳು ಕೂಡಲ ಸಂಗಮ ಹಾಗೂ ಹರಿಹರದ ಪೀಠಗಳು ಎಂದು ವ್ಯಾಖ್ಯಾನಿಸಿದ ವಚನಾನಂದ ಶ್ರೀಗಳು, ನಮ್ಮ ದಾರಿ ಬೇರೆ ಆಗಿರಬಹುದು, ವಿರುದ್ಧ ದಿಕ್ಕಿನಲ್ಲಿ ಹರಿದರೂ ನದಿಗಳು ಸಂಗಮವಾದ ಹಾಗೆ ಒಂದಾಗುತ್ತೇವೆ ಎಂದರು.
ಇಂದು ಕಾಡಿ ಕೂಡಿದ್ದೇವೆ, ಮುಂದೆ ಕೂಡಿ ಕಾಡುವುದು ಬೇಡ, ಪೀಠಗಳು ಬೇರೆ ಇದ್ದರೂ ನಾವಿಬ್ಬರು 25 ವರ್ಷಗಳಿಂದ ಸ್ನೇಹಿತರು, ಈಗ ಪೀಠಗಳು ಒಂದಾಗಿವೆ. ನಮ್ಮಿಬ್ಬರ ಉದ್ದೇಶ ಒಂದೇ ಆಗಿದೆ, ಅದು 2ಎ ಮೀಸಲಾತಿ ಬೇಕು ಎಂಬುದು ಎಂದು ನುಡಿದರು.
ಹುಬ್ಬಳ್ಳಿ: ಪಂಚಮಸಾಲಿ ಪೀಠದ ಸ್ವಾಮೀಜಿಗಳ ನಡುವಿನ ಭಿನ್ನಾಭಿಪ್ರಾಯ ಜಗಜ್ಜಾಹೀರು..!
ತಾತ್ವಿಕವಾಗಿ ಭಿನ್ನಾಭಿಪ್ರಾಯವಿದ್ದರೂ ಸಾಮಾಜಿಕವಾಗಿ ಭಿನ್ನಾಭಿಪ್ರಾಯ ಬರಬಾರದು, ಇವತ್ತಿನ ದಿನ ಕಿತ್ತೂರು ರಾಣಿ ಚೆನ್ನಮ್ಮನ ವಿಜಯೋತ್ಸವ ಎಂದು ಬಣ್ಣಿಸಿದ ಅವರು 2ಎ ಮೀಸಲಾತಿ ಸಿಕ್ಕೇ ಸಿಗುತ್ತದೆ ಎಂದರು.
ಪಾದಯಾತ್ರೆಗೆ ಈ ವರೆಗೂ ನಾವು ಬಂದಿಲ್ಲ ಎಂದು ಹರಿಹರ ಪೀಠ ಸುಮ್ಮನೆ ಕುಳಿತಿಲ್ಲ. ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದೇವೆ, ನೀವು ಹಾರ್ಡವೇರ್ ಆದರೆ ನಾವು ಸಾಫ್ಟವೇರ್ ಎಂದು ಹರಿಹರ ಶೀಗಳು ಕೂಡಲ ಸಂಗಮ ಶ್ರೀಗಳಿಗೆ ಹೇಳಿದರು.
ಹರಿಹರ ಪೀಠಕ್ಕೆ ಆಹ್ವಾನ
ಹರಿಹರ ಪೀಠ ನಿಮ್ಮದು, ಕೂಡಲ ಸಂಗಮ ಪೀಠ ನಮ್ಮದು ಎಂದ ವಚನಾನಂದ ಶ್ರೀಗಳು ಹರಿಹರ ಪೀಠಕ್ಕೆ ಬನ್ನಿ ಪ್ರಸಾದ ಸ್ವೀಕರಿಸಿ ನಮಗೆ ಸಂತೋಷವಾಗುತ್ತದೆ ಎಂದು ಹೇಳಿದರು. ಪೀಠಾಧ್ಯಕ್ಷರು ಯಾವಾಗಲೂ ಒಂದಾಗಿ ಇರುತ್ತೇವೆ, ಆದರೆ ನೀವು ಒಂದಾಗಿ ಎಂದು ಸಮಾಜದ ಮುಖಂಡರಿಗೆ ಹೇಳಿದರು.
ಇದಕ್ಕೂ ಪೂರ್ವದಲ್ಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸಮಾಜದ ಶಾಸಕರು, ಸಂಸದರು, ಮಂತ್ರಿಗಳನ್ನು ಮಾಡಲು ನಮ್ಮ ಪೀಠಗಳಾಗಿಲ್ಲ, ನಿಮಗೆ ಮೀಸಲಾತಿ ಕಲ್ಪಿಸಿಕೊಟ್ಟಾಗ ಮಾತ್ರ ಪೀಠದ ಗುರುಗಳಾಗಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ಯಡಿಯೂರಪ್ಪನವರು ಸಿಎಂ ಆಗಲು ಅತಿ ಹೆಚ್ಚು ಆಶೀರ್ವಾದ ಮಾಡಿದವರು ಪಂಚಮಸಾಲಿ ಸಮಾಜದವರು ಎಂದ ಅವರು, ನಮ್ಮ ಸಮಾಜದ ಋುಣ ನಿಮ್ಮ ಮೇಲಿದೆ, ನಮ್ಮ ಬೇಡಿಕೆ ಈಡೇರಿಸಿ ಎಂದು ಮುಖ್ಯಮಂತ್ರಿಗಳನ್ನು ಕೋರಿದರು.
ನಮಗೆ ಹೈಟೆಕ್, ರಂಗೀಲಾ ಸ್ವಾಮೀಜಿ ಬೇಡ, ವಚನಾನಂದ ಶ್ರೀ ವಿರುದ್ಧ ಹರಿಹಾಯ್ದ ಮಾಜಿ ಶಾಸಕ
ಮೀಸಲಾತಿ ಸಿಗುವವರೆಗೂ ಪೀಠಕ್ಕೆ ಹೋಗಲ್ಲ, ಆಮರಾಣಾಂತ ಉಪವಾಸ ಸತ್ಯಾಗ್ರಹ ಸಹ ಕೈಗೊಳ್ಳುತ್ತೇವೆ. ನಮ್ಮ ಎರಡೂ ಪೀಠಗಳು ಭಿನ್ನಾಭಿಪ್ರಾಯ ಹೊಂದಿದ್ದರೂ ಮೀಸಲಾತಿ ವಿಚಾರದಲ್ಲಿ ಒಂದೇ ಆಗಿವೆ ಎಂದರು.
ನಮಗೆ 2ಎ ಮೀಸಲಾತಿ ಕಲ್ಪಿಸಲು ಕುಲಶಾಸ್ತ್ರ ಅಧ್ಯಯನ ಬೇಕಾಗಿಲ್ಲ, ನಾವು ಕೇಳುತ್ತಿರುವುದು ರಾಜಕೀಯ ಮೀಸಲಾತಿ ಅಲ್ಲ, ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಎಂದು ಅವರು ಹೇಳಿದರು.
ಶಾಸಕ ಕರುಣಾಕರರೆಡ್ಡಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ಬೆಂಬಲ ನಿಮ್ಮ ಹೋರಾಟಕ್ಕಿದೆ. ಗಟ್ಟಿಯಾಗಿ ಈ ವಿಚಾರವನ್ನು ಸಿಎಂ ಗಮನಕ್ಕೆ ತರುತ್ತೇವೆ ಎಂದರು. ಬಳ್ಳಾರಿ ಸಂಸದ ದೇವೇಂದ್ರಪ್ಪ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ನಂದಿಹಳ್ಳಿ ಹಾಲಪ್ಪ, ಎಚ್.ಎಸ್ .ಶಿವಶಂಕರ, ವೀಣಾ ಕಾಶಪ್ಪನವರ, ಎಂ.ಟಿ. ಸುಭಾಶ್ಚಂದ್ರ, ಎಂ.ಪಿ. ವೀಣಾ ಮಹಾಂತೇಶ, ಚಂದ್ರಶೇಖರ ಪೂಜಾರ, ಬೆಟ್ಟನಗೌಡ, ಅರಸಿಕೇರಿ ಕೊಟ್ರೇಶ, ಕುಂಚೂರು ಈರಣ್ಣ, ಶಶಿಧರ ಪೂಜಾರ ಹಾಜರಿದ್ದರು.