ಸುದೀರ್ಘ ಹಗ್ಗ- ಜಗ್ಗಾಟದ ತರುವಾಯ ಕಾರವಾರದಲ್ಲಿ ಚತುಷ್ಪಥದಲ್ಲಿ ಫ್ಲೈ ಓವರ್ ನಿರ್ಮಾಣ ಖಚಿತವಾಗಿದೆ. ಲಂಡನ್ ಸೇತುವೆಯಿಂದ ಆರ್‌ಟಿಒ ಕಚೇರಿ ತನಕ ಫ್ಲೈಒವರ್ ಕಾಮಗಾರಿ ಸದ್ಯದಲ್ಲೆ ಆರಂಭವಾಗಲಿದೆ.
ಕಾರವಾರ(ಆ.28] ಕಾರವಾರ ನಗರ ಪ್ರವೇಶಕ್ಕೆ ಮುನ್ನ ಸಿಗುವ ಲಂಡನ್ ಬ್ರಿಡ್ಜ್‌ದಿಂದ ಪ್ರಾದೇಶಿಕ ಸಾರಿಗೆ ಕಚೇರಿ ತನಕ ಅಂದರೆ 1.04 ಕಿಮೀ ಉದ್ದದ ಫ್ಲೈಒವರ್ ನಿರ್ಮಾಣವಾಗಲಿದೆ. ಫ್ಲೈಒವರ್ ನಿರ್ಮಾಣಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ್ದು, ಸದ್ಯದಲ್ಲಿಯೆ ಕಾಮಗಾರಿ ಶುರುವಾಗಲಿದೆ. ಮೂಲ ಯೋಜನೆಯಲ್ಲಿ ಲಂಡನ್ ಸೇತುವೆಯಿಂದ ಆರ್‌ಟಿಒ ಕಚೇರಿ ತನಕ ಫ್ಲೈಒವರ್ ನಿರ್ಮಾಣ ಸೇರ್ಪಡೆಯಾಗಿತ್ತು. ಆದರೆ ನಂತರ ಫ್ಲೈಒವರ್ ನಿರ್ಮಾಣದ ಬಗ್ಗೆ ಉಂಟಾದ ಗೊಂದಲದಿಂದ ಅನಿಶ್ಚಿತತೆ ಉಂಟಾಗಿತ್ತು. ಈ ಬಗ್ಗೆ ಈಗ ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದು ಚತುಷ್ಪಥ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿ ಕಂಪನಿಗೆ ಸೂಚಿಸಲಾಗಿದೆ.
ಲಂಡನ್ ಸೇತುವೆಯಿಂದ ಕಾಳಿ ಸೇತುವೆ ತನಕ ಫ್ಲೈಒವರ್ ಮಾಡಬೇಕೆಂದು ಕೆಲವರು ಪಟ್ಟು ಹಿಡಿದಿದ್ದರು. ಇದರಿಂದ ಕಾರವಾರ ಕಡಲ ತೀರದ ಸೌಂದರ್ಯವನ್ನು ಪ್ರಯಾಣಿಕರು ಸವಿಯಬಹುದು. ನೇರವಾಗಿ ಹೋಗುವ ವಾಹನಗಳು ಮೇಲ್ಗಡೆ ಸಾಗುವುದರಿಂದ ನಗರದಲ್ಲಿ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ. ಹೀಗಾಗಿ ಕಾಳಿ ಸೇತುವೆ ತನಕ ಫ್ಲೈಒವರ್ ಮಾಡುವಂತೆ ಆಗ್ರಹ ಕೇಳಿಬಂದಿತ್ತು. ಇದಾದ ತರುವಾಯ ಫ್ಲೈಒವರ್ ನಿರ್ಮಾಣವೆ ಬೇಡ ಎಂಬ ವಾದವನ್ನೂ ಕೆಲವರು ಮಂಡಿಸಿದರು.
ಫ್ಲೈಒವರ್ ನಿರ್ಮಾಣದಿಂದ ಕಡಲತೀರದ ಸೌಂದರ್ಯ ನಾಶವಾಗಲಿದೆ. ಜತೆಗೆ ಕಾರವಾರ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಯುದ್ಧ ನೌಕಾ ವಸ್ತು ಸಂಗ್ರಹಾಲಯ, ಫುಡ್ ಕೋರ್ಟ್, ರಾಕ್ ಗಾರ್ಡನ್, ಜಲ ಸಾಹಸ ಕ್ರೀಡೆಗಳು, ಹೋಟೆಲ್‌ಗಳು ತಲೆ ಎತ್ತಿವೆ. ಪ್ರಯಾಣಿಕರು ನೇರವಾಗಿ ತೆರಳುವುದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿ ವ್ಯಾಪಾರ, ವಹಿವಾಟು ಕಡಿಮೆಯಾಗಲಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದರು.
ಈ ಬೇಕು, ಬೇಡಗಳ ನಡುವೆ ಸ್ಪಷ್ಟ ತೀರ್ಮಾನವನ್ನು ಕೈಗೊಳ್ಳಲಾಗದೆ ಜಿಲ್ಲಾಡಳಿತ ಸರ್ಕಾರದ ಮೇಲೆ ಜವಾಬ್ದಾರಿ ಹಾಕಿತ್ತು. ಆದರೆ ಸರ್ಕಾರದಿಂದಲೂ ಯಾವುದೆ ಸ್ಪಷ್ಟ ಆದೇಶ ಇದುವರೆಗೆ ಬಂದಿರಲಿಲ್ಲ. ಕೊನೆಗೂ ಜಿಲ್ಲಾಡಳಿತ ಸ್ಪಷ್ಟವಾದ ನಿರ್ಧಾರವನ್ನು ಕೈಗೊಂಡಿದೆ. ಫ್ಲೈಒವರ್ ನಿರ್ಮಾಣಕ್ಕೆ ಸಮ್ಮತಿ ಸೂಚಿಸಿದೆ. ಮಳೆಗಾಲದ ಹಿನ್ನೆಲೆ ಚತುಷ್ಪಥ ನಿರ್ಮಾಣ ಕಾಮಗಾರಿ ಹಲವೆಡೆ ಸ್ಥಗಿತಗೊಂಡಿತ್ತು.
ಕೆಲವೆಡೆ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಈಗ ಮಳೆಗಾಲ ಮುಗಿಯುತ್ತ ಬಂದಿರುವುದರಿಂದ ಹೆಚ್ಚು ಕಡಿಮೆ ಸೆಪ್ಟೆಂಬರ್ ತಿಂಗಳಿನಲ್ಲಿ ಕಾಮಗಾರಿ ಶುರುವಾಗಲಿದೆ. ಆಗ ಫ್ಲೈಒವರ್ ನಿರ್ಮಾಣವೂ
ಆರಂಭವಾಗಲಿದೆ.