ಮಗಳ 'ಸೇವ್ ಮೀ' ಮೆಸೇಜ್ ನೋಡಿ ರಕ್ಷಣೆಗೆ ಬಂದ ದೊಡ್ಡಪ್ಪನ ಎದೆಗೆ ಚಾಕು ಇರಿದ ಅಮ್ಮನ ಪ್ರಿಯಕರ!

Published : Feb 03, 2026, 01:17 PM IST
Uttara Kannada daughter Case

ಸಾರಾಂಶ

ಉತ್ತರ ಕನ್ನಡದ ಸಿದ್ದಾಪುರದಲ್ಲಿ ಕೌಟುಂಬಿಕ ಕಲಹ ಮತ್ತು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಭೀಕರ ಕೊಲೆಯೊಂದು ನಡೆದಿದೆ. ತಾಯಿಯ ಕಿರುಕುಳದಿಂದ ರಕ್ಷಣೆ ಕೋರಿದ ಮಗಳನ್ನು ಕಾಪಾಡಲು ಹೋದ ದೊಡ್ಡಪ್ಪ ವಸಂತ ನಾಯ್ಕ್ ಅವರನ್ನು, ಮಗಳ ತಾಯಿಯೇ ತನ್ನ ಸಹಚರರೊಂದಿಗೆ ಸೇರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ.

ಉತ್ತರ ಕನ್ನಡ (ಫೆ.03): ಕೌಟುಂಬಿಕ ಕಲಹ ಮತ್ತು ಅನೈತಿಕ ಸಂಬಂಧದ ದ್ವೇಷಕ್ಕೆ ಅಮಾಯಕ ಜೀವವೊಂದು ಬಲಿಯಾಗಿದೆ. ತಾಯಿಯ ಕಾಟ ತಾಳಲಾರದೆ ರಕ್ಷಣೆ ಕೋರಿದ ಮಗಳನ್ನು ಕಾಪಾಡಲು ಮುಂದಾದ ದೊಡ್ಡಪ್ಪನ ಎದೆಗೆ ಸ್ವತಃ ಆ ಮಗುವಿನ ತಾಯಿಯೇ ಗೂಂಡಾಗಳನ್ನು ಕರೆತಂದು ಚಾಕು ಇರಿದು ಕೊಲೆಗೈದಿರುವ ಭೀಕರ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರೆಕೊಪ್ಪ ಗ್ರಾಮದಲ್ಲಿ ನಡೆದಿದೆ.

ಈ ದುರ್ಘಟನೆಗೆ ವಸಂತ ಜಟ್ಯಾ ನಾಯ್ಕ್ (41) ಎಂಬವರು ಬಲಿಯಾಗಿದ್ದಾರೆ. ಮೃತ ವಸಂತ ಅವರ ಸಹೋದರ ಮಹೇಶ್ ಜಟ್ಯಾ ನಾಯ್ಕ್ (37) ಮತ್ತು ನೆರೆಮನೆಯ ಕುಮಾರ್ ನಾರಾಯಣ ನಾಯ್ಕ್ (35) ಅವರು ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಪ್ರಕರಣ?

ಗಾಯಾಳು ಮಹೇಶ್ ಜಟ್ಯಾ ನಾಯ್ಕ್ ಮತ್ತು ಆರೋಪಿ ಸುಚಿತ್ರಾ ಕಳೆದ 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಸುಮಶ್ರೀ ಹಾಗೂ ಅಮೃತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಹೇಶ್ ಅವರು ಜೀವನ ನಿರ್ವಹಣೆಗಾಗಿ ಬೆಂಗಳೂರಿನ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತ ಪತ್ನಿ ಸುಚಿತ್ರಾ, ಗಂಡನಿಗೆ ತಿಳಿಯದಂತೆ ತನ್ನಿಬ್ಬರು ಮಕ್ಕಳೊಂದಿಗೆ ಶಿವಮೊಗ್ಗದ ಸ್ವಾಮಿ (ಕಮಲಾಕರ) ಎಂಬುವವರ ಜೊತೆ ವಾಸವಾಗಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದು ದಂಪತಿ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು. ಕಳೆದ ಆರು ತಿಂಗಳಿಂದ ಮಹೇಶ್ ಪತ್ನಿಯಿಂದ ದೂರವಿದ್ದು, ಎರಡು ತಿಂಗಳಿಂದ ಅಣ್ಣ ವಸಂತ ನಾಯ್ಕ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರು.

ಮಗಳ 'ಸೇವ್ ಮೀ' ಮೆಸೇಜ್:

ಫೆಬ್ರವರಿ 1ರಂದು ಮಹೇಶ್ ಅವರ ಪುತ್ರಿ ಸುಮಶ್ರೀ, ತನ್ನ ತಂದೆಗೆ ಮೊಬೈಲ್ ಮೂಲಕ ಸಂದೇಶವೊಂದನ್ನು ಕಳುಹಿಸಿದ್ದಳು. 'ಅಪ್ಪ, ಅಮ್ಮ ನಮಗೆ ಟಾರ್ಚರ್ ಕೊಡುತ್ತಿದ್ದಾಳೆ, ದಯವಿಟ್ಟು ನಮ್ಮನ್ನು ರಕ್ಷಿಸು' ಎಂದು ಅಂಗಲಾಚಿದ್ದಳು. ತಕ್ಷಣ ಕಾರ್ಯಪ್ರವೃತ್ತರಾದ ಮಹೇಶ್, ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸಹಾಯದಿಂದ ಮಗಳನ್ನು ರಕ್ಷಿಸಿ, ತನ್ನ ಅಣ್ಣ ವಸಂತ ನಾಯ್ಕ್ ಅವರ ಮನೆಗೆ ಕರೆತಂದಿದ್ದರು.

ಊಟದ ವೇಳೆ ದಾಳಿ, ರಕ್ತಸಿಕ್ತವಾಯ್ತು ಮನೆ:

ಮಗಳನ್ನು ಕರೆತಂದ ಮರುದಿನವೇ (ಭಾನುವಾರ ರಾತ್ರಿ) ಮನೆಯವರೆಲ್ಲರೂ ಊಟಕ್ಕೆ ಕುಳಿತಿದ್ದ ಸಂದರ್ಭದಲ್ಲಿ, ಆರೋಪಿ ಸುಚಿತ್ರಾ, ಆಕೆಯ ತಂದೆ ಲೋಕನಾಥ್, ಪ್ರಿಯಕರ ಕಮಲಾಕರ ಸ್ವಾಮಿ ಹಾಗೂ ಇತರೆ ನಾಲ್ವರು ಏಕಾಏಕಿ ಕಾರಿನಲ್ಲಿ ಬಂದು ಮನೆಗೆ ನುಗ್ಗಿದ್ದಾರೆ. ಮಗಳು ಸುಮಶ್ರೀಯನ್ನು ಬಲವಂತವಾಗಿ ಎಳೆದೊಯ್ಯಲು ಯತ್ನಿಸಿದ್ದಾರೆ. ಇದನ್ನು ತಡೆಯಲು ದೊಡ್ಡಪ್ಪ ವಸಂತ ನಾಯ್ಕ್, ತಂದೆ ಮಹೇಶ್ ಹಾಗೂ ನೆರೆಮನೆಯ ಕುಮಾರ್ ಅಡ್ಡಿಪಡಿಸಿದ್ದಾರೆ.

ಈ ವೇಳೆ ರೊಚ್ಚಿಗೆದ್ದ ಆರೋಪಿಗಳು, ವಸಂತ ನಾಯ್ಕ್ ಅವರ ಎದೆ ಮತ್ತು ಕೈಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾರೆ. ಅಡ್ಡಬಂದ ಮಹೇಶ್ ಮತ್ತು ಕುಮಾರ್ ಅವರ ಎದೆಗೂ ಇರಿಯಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದ ವಸಂತ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಪ್ರಾಣಬಿಟ್ಟಿದ್ದಾರೆ.

PREV
Read more Articles on
click me!

Recommended Stories

Kagodu Thimmappa: ಸಾಗರ ಮಾರಿಕಾಂಬ ಜಾತ್ರೆಯಲ್ಲಿ ಕುಸಿದು ಬಿದ್ದ ಕಾಂಗ್ರೆಸ್‌ ಹಿರಿಯ ನಾಯಕ, ಆಸ್ಪತ್ರೆಗೆ ದಾಖಲು!
ಬೆಂಗಳೂರು ಧರ್ಮರಾಯಸ್ವಾಮಿ ದೇಗುಲ ದ್ರೌಪದಿ ದೇವಿಯ 120 ಗ್ರಾಂ ಚಿನ್ನದ ಸರ ಕದ್ದ ಮುಜರಾಯಿ ಅಧಿಕಾರಿ; ಅಧ್ಯಕ್ಷರ ಆರೋಪ