Uttara Kannada: ಪ್ರವಾಸಿಗರನ್ನು ಕೈಬೀಸಿ ಕರೆಯಲಿದೆ ಭೀಮಕೋಲ ಡ್ಯಾಂ ಬಳಿಯ ಪಂಚವಟಿ ಉದ್ಯಾನವನ

By Govindaraj S  |  First Published Mar 17, 2023, 2:20 AM IST

ಅದು ಗಿಡ ಗಂಟಿಗಳು ಬೆಳೆದುಕೊಂಡು ಪಾಳು ಬಿದ್ದಿದ್ದ ಪ್ರದೇಶ. ಕೆರೆಗೆ ಹೊಂದಿಕೊಂಡಿದ್ದ ಪ್ರದೇಶ ಇದೀಗ ಅರಣ್ಯ ಇಲಾಖೆಯ ಆಸಕ್ತಿಯಿಂದ ಸುಂದರ ಉದ್ಯಾನವನ ರೂಪುಗೊಂಡಿದೆ. 


ಭರತ‌್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಮಾ.17): ಅದು ಗಿಡ ಗಂಟಿಗಳು ಬೆಳೆದುಕೊಂಡು ಪಾಳು ಬಿದ್ದಿದ್ದ ಪ್ರದೇಶ. ಕೆರೆಗೆ ಹೊಂದಿಕೊಂಡಿದ್ದ ಪ್ರದೇಶ ಇದೀಗ ಅರಣ್ಯ ಇಲಾಖೆಯ ಆಸಕ್ತಿಯಿಂದ ಸುಂದರ ಉದ್ಯಾನವನ ರೂಪುಗೊಂಡಿದೆ. ಹಚ್ಚ ಹಸಿರಿನ ಪರಿಸರವಿದ್ರೂ ಯಾರಿಗೂ ಬೇಡದಂತಿದ್ದ ಪ್ರದೇಶವೀಗ ಎಲ್ಲರೂ ಕಣ್ಣರಳಿಸಿ ನೋಡುವಂತಹ ನಿಸರ್ಗದತ್ತ ಪ್ರವಾಸಿ ತಾಣದ ರೂಪವನ್ನು ಪಡೆದುಕೊಂಡಿದೆ. ಅಷ್ಟಕ್ಕೂ ಆ ಪ್ರದೇಶವಾದ್ರೂ ಯಾವುದು? ಅದು ಇರೋದಾದ್ರೂ ಎಲ್ಲಿ? ಅಂತೀರಾ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. 

Tap to resize

Latest Videos

ಹೌದು, ಕರಾವಳಿ ನಗರಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ‌ ಇದೀಗ ಹೊಸ ಉದ್ಯಾನವನವೊಂದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕಾರವಾರ ತಾಲೂಕಿನ ಹೋಟೆಗಾಳಿ ಗ್ರಾಮದ ಭೀಮಕೋಲ ಕೆರೆ ಪಕ್ಕದಲ್ಲಿ, ಪಾಳು ಬಿದ್ದಿದ್ದ ಪ್ರದೇಶವನ್ನು ಇದೀಗ ಅರಣ್ಯ ಇಲಾಖೆ ಸುಂದರ ವನವನ್ನಾಗಿ ಪರಿವರ್ತಿಸಿದೆ. ಜಿಲ್ಲಾ ಪಂಚಾಯತ್‌ನ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದ ಭೀಮಕೋಲ ಡ್ಯಾಂ ಬಳಿ ಸಾಮಾಜಿಕ ಅರಣ್ಯ ವಿಭಾಗದಿಂದ ಪಂಚವಟಿ ಹೆಸರಿನ ವನ ನಿರ್ಮಾಣಗೊಂಡಿದೆ. 

ರಾಹುಲ್ ಗಾಂಧಿ ಮಕ್ಕಳಂತೆ ಇದ್ದಾರೆ ಬುದ್ಧಿ ಬೆಳೆದಿಲ್ಲ: ಶಿವರಾಜ್ ಸಿಂಗ್ ಚೌಹಾಣ್

ರಾಮಾಯಣದಲ್ಲಿ ಬರುವ ಪಂಚವಟಿ ವನದಂತೆ ಇಲ್ಲಿಯೂ ಆಲ, ಅರಳಿ, ನೆಲ್ಲಿ, ಅತ್ತಿ ಮತ್ತು ಬಿಲ್ವಪತ್ರೆ ಮರಗಳ ಪಂಚ ಗಿಡಗಳನ್ನು ನೆಟ್ಟು ವನ ನಿರ್ಮಿಸಲಾಗಿದ್ದು, ಇದರೊಂದಿಗೆ ರಾಶಿ ವನ, ಚಿಟ್ಟೆ ಉದ್ಯಾನವನ್ನ ಕೂಡ ನಿರ್ಮಿಸಲಾಗಿದೆ. ಜತೆಗೆ ಎರಡು ಕುಟೀರಗಳನ್ನು ನಿರ್ಮಿಸಿದ್ದು, ಇಲ್ಲಿಗೆ ಬರುವಂತಹ ಪ್ರವಾಸಿಗರು ಇಲ್ಲಿಯೇ ಕುಳಿತು ನಿಸರ್ಗದ ಸೌಂದರ್ಯವನ್ನ ಸವಿಯಬಹುದಾಗಿದೆ. ಅಲ್ಲದೇ, ಈಗಾಗಲೇ ಕೆರೆಯ ಇನ್ನೊಂದು ದಡದಲ್ಲಿ ವಾಕಿಂಗ್ ಪಾಥ್ ಇದ್ದು ಸಂಜೆ ವೇಳೆ ವಾಯುವಿಹಾರಕ್ಕೂ ಹೇಳಿ ಮಾಡಿಸಿದ ಸ್ಥಳವಾಗಿ ರೂಪುಗೊಂಡಿದೆ. 

ಇನ್ನು ಈ ಹಿಂದಿನ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ಎಂ.ಪ್ರಿಯಾಂಗಾ ಅವರ ಮುತುವರ್ಜಿಯಿಂದಾಗಿ ಭೀಮಕೋಲ ಕೆರೆಯ ಒಂದು ಬದಿಗೆ ವಾಕಿಂಗ್ ಪಾತ್ ನಿರ್ಮಿಸಲಾಗಿತ್ತು. ಇದರಿಂದಾಗಿ ಪಾಳುಬಿದ್ದಿದ್ದ ಜಾಗ ಪ್ರವಾಸಿಗರನ್ನು ಸೆಳೆಯುವ ತಾಣವಾಗಿ ಮಾರ್ಪಾಟಾಗಿತ್ತು. ಆದರೆ, ಇಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಆಶ್ರಯ ಪಡೆದುಕೊಳ್ಳಲು ವ್ಯವಸ್ಥೆ ಇರಲಿಲ್ಲ. ಹೀಗಾಗಿ ಇದೀಗ ಕಾರವಾರದ ಸಾಮಾಜಿಕ ಅರಣ್ಯ ವಿಭಾಗದಿಂದ ಇಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಜೋಯಿಡಾ, ದಾಂಡೇಲಿ ಮಾರ್ಗವಾಗಿ ಕಾರವಾರಕ್ಕೆ ಆಗಮಿಸುವ ಪ್ರವಾಸಿಗರನ್ನು ಈ ಭೀಮಕೋಲ ಪ್ರದೇಶ ನಿಸರ್ಗದ ದರ್ಶನ ಮಾಡಿಸುವ ತಾಣವಾಗಿ ಕೈಬೀಸಿ ಕರೆಯುತ್ತಿದೆ. 

ಪ್ರೀತಿಸಿ ಮದುವೆಯಾದ 3ನೇ ದಿನಕ್ಕೆ ಪತ್ನಿಯ ಕೊಲೆ: ಪ್ರಿಯಕರನ ಮನೆ ಮುಂದೆ ಯುವತಿ ಶವವಿಟ್ಟು ಪೋಷಕರ ಪ್ರತಿಭಟನೆ

ಒಟ್ಟಿನಲ್ಲಿ ಕಾರವಾರ ಕಡಲತೀರದ ಸುಂದರತೆಯನ್ನು ಸವಿಯಲು ಭೇಟಿ ನೀಡುತ್ತಿದ್ದ ಪ್ರವಾಸಿಗರನ್ನು ಸೆಳೆಯಲು ಭೀಮಕೋಲದಂತಹ ನೈಸರ್ಗಿಕ ತಾಣಗಳು ಸಿದ್ಧವಾಗಿದೆ. ಪ್ರವಾಸಕ್ಕೆಂದು ಬರುವ ಪ್ರವಾಸಿಗರು ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಕಂಡು ಜೀವನವನ್ನು ಇನ್ನಷ್ಟು ಧನ್ಯಗೊಳಿಸಬಹುದು. 

click me!