
ಹೊನ್ನಾವರ (ನ.5): ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ದೇಶದ ರಾಷ್ಟ್ರಗೀತೆ ಕುರಿತು ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈಗ ಇರುವ ರಾಷ್ಟ್ರಗೀತೆ ಜನಗಣಮನ ಮೂಲತಃ ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದ ಗೀತೆ ಎಂದು ಕಾಗೇರಿ ಹೇಳಿದ್ದಾರೆ. ಹೊನ್ನಾವರದಲ್ಲಿ ನಡೆದ ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಂದೇ ಮಾತರಂ ದೇಶದ ರಾಷ್ಟ್ರಗೀತೆಯಾಗಬೇಕಾಗಿತ್ತು. ಜನಗಣಮನಕ್ಕೆ ಸರಿಸಮಾನವಾದ ಗೀತೆ ವಂದೇ ಮಾತರಂ. ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ ಕೊಟ್ಟ ಕೊಡುಗೆ ನಮಗೆ ಸದಾ ಪ್ರೇರಣೆ . ವಂದೇ ಮಾತರಂ ರಾಷ್ಟ್ರಗೀತೆಯಾಗಿಸಲು ಹಿಂದೆ ಸಾಕಷ್ಟು ಒತ್ತಡ ಕೇಳಿಬಂದಿತ್ತು. ಆದರೆ, ನಮ್ಮ ಪೂರ್ವಜರು ಬ್ರಿಟಿಷ್ ಅಧಿಕಾರಿಯ ಸ್ವಾಗತಕ್ಕೆ ರಚನೆಯಾದ ಜನಗಣಮನವೂ ಇರಲಿ ಎಂದರು. ಜೊತೆಗೆ ವಂದೇ ಮಾತರಂ ಗೀತೆಯೂ ಇರಲಿ ಅಂತ ಸೇರಿಸಿದರು ಎಂದಿದ್ದಾರೆ.
ನಾವು ಇವತ್ತು ಅದನ್ನು ಒಪ್ಪಿಕೊಂಡು ಪಾಲಿಸುತ್ತಿದ್ದೇವೆ. ವಂದೇ ಮಾತರಂ 150ನೇ ವರ್ಷದಲ್ಲಿ ಮತ್ತೆ ಕಂಠ ಕಂಠಗಳಲ್ಲಿ ಪ್ರತಿಧ್ವನಿಸಬೇಕು. ಭಾರತ್ ಮಾತಾಕಿ ಜೈ ನಮ್ಮ ಉಸಿರಿನ ಭಾಗ ಆಗುವಂತೆ ಆಗಬೇಕು. ನಾಡಿನ ಜನರ ಮಧ್ಯೆ ಆ ವಂದೇ ಮಾತರಂ ಹಾಡು ಕಂಠಸ್ಥವಾಗಿ ಮೊದಲು ಮೊಳಗಬೇಕು ಎಂದು ಕಾಗೇರಿ ಹೇಳಿದ್ದಾರೆ.