Karwar: ವೀಸಾ ವಿಸ್ತರಣೆಗಾಗಿ ಗೋಕರ್ಣದಲ್ಲಿರುವ ವಿದೇಶಿಗರ ಹರಸಾಹಸ

Suvarna News   | Asianet News
Published : Dec 27, 2021, 03:02 PM IST
Karwar: ವೀಸಾ ವಿಸ್ತರಣೆಗಾಗಿ ಗೋಕರ್ಣದಲ್ಲಿರುವ ವಿದೇಶಿಗರ ಹರಸಾಹಸ

ಸಾರಾಂಶ

ಕೊರೊನಾ ಕಾಟದ ಬಳಿಕ ಅದರ ರೂಪಾಂತರಿ ತಳಿ ಒಮಿಕ್ರಾನ್  (Omicron Variant)ಬಾಧೆ ವಿದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಭಾರತದಲ್ಲಿ ಇದರ ಪ್ರಮಾಣ ತೀರಾ ಕಡಿಮೆಯಿರೋದ್ರಿಂದ ಈ ಹಿಂದೆ ದೇಶಕ್ಕೆ ವೀಸಾ ಮೂಲಕ ಎಂಟ್ರಿ ಕೊಟ್ಟಿದ್ದ ವಿದೇಶಿಗರು ಇದೀಗ ತಮ್ಮ ದೇಶಗಳಿಗೆ ವಾಪಾಸ್ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಉತ್ತರ ಕನ್ನಡ (ಡಿ. 27):  ಕೊರೊನಾ ಕಾಟದ ಬಳಿಕ ಅದರ ರೂಪಾಂತರಿ ತಳಿ ಒಮಿಕ್ರಾನ್  (Omicron Variant)ಬಾಧೆ ವಿದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಭಾರತದಲ್ಲಿ ಇದರ ಪ್ರಮಾಣ ತೀರಾ ಕಡಿಮೆಯಿರೋದ್ರಿಂದ ಈ ಹಿಂದೆ ದೇಶಕ್ಕೆ ವೀಸಾ ಮೂಲಕ ಎಂಟ್ರಿ ಕೊಟ್ಟಿದ್ದ ವಿದೇಶಿಗರು ಇದೀಗ ತಮ್ಮ ದೇಶಗಳಿಗೆ ವಾಪಾಸ್ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಉತ್ತರಕನ್ನಡ (Uttara Kannada) ಜಿಲ್ಲೆಯ ಗೋಕರ್ಣದಲ್ಲಿರುವ (Gokarna) ವಿದೇಶಿಗರಂತೂ ತಮ್ಮ‌ ವೀಸಾಗಳನ್ನು ವಿಸ್ತರಣೆಗಾಗಿ ಹರಸಾಹಸ ಮಾಡುತ್ತಿದ್ದು, ಇಲ್ಲೇ ನೆಲೆಸಲು ತಾವು ನಡೆಸುತ್ತಿರುವ ಪ್ರಯತ್ನಗಳಿಗೆ ಸೂಕ್ತ ಪ್ರತಿಕ್ರಿಯೆ ದೊರೆಯದೆ ಕಂಗಾಲಾಗಿದ್ದಾರೆ. 

"

ವೀಸಾ (VISA) ವಿಸ್ತರಣೆ ಮಾಡಿಸಿಕೊಳ್ಳುತ್ತಾ ಉತ್ತರಕನ್ನಡ (Uttara Kannada) ಜಿಲ್ಲೆಯ ಗೋಕರ್ಣದ ರೆಸಾರ್ಟ್, ಹೋಂ‌ ಸ್ಟೇ ಹಾಗೂ ಹೋಟೆಲ್‌ಗಳಲ್ಲಿ  ಸಾಕಷ್ಟು ಸಮಯಗಳಿಂದ ನೆಲೆಸಿದ್ದ ವಿದೇಶಿಗರಿಗೆ ಇದೀಗ ದೊಡ್ಡ ತಲೆನೋವು ಎದುರಾಗಿದೆ. ಕೊರೊನಾ ಕಾಟದ ಬಳಿಕ ಇದೀಗ ವಿದೇಶದಲ್ಲಿ ರೂಪಾಂತರಿ ತಳಿ ಒಮಿಕ್ರಾನ್ ಕಂಟಕ ಹೆಚ್ಚಿದ್ದು, ಭಾರತದಲ್ಲಿ ಮಾತ್ರ ಈ ಸಮಸ್ಯೆ ದೊಡ್ಡ ಪ್ರಮಾಣದಲ್ಲೇನೂ ಕಂಡಿಲ್ಲ.‌ ಈ ಸಂದರ್ಭದಲ್ಲಿ ತಮ್ಮ ದೇಶಗಳಿಗೆ ಹಿಂತಿರುವುದು ದೊಡ್ಡ ರಿಸ್ಕ್ ಎಂದುಕೊಂಡಿರುವ ವಿದೇಶಿಗರು ಸದ್ಯಕ್ಕೆ ಭಾರತದಲ್ಲಿ ಉಳಿಯುವುದೇ ಬೆಸ್ಟ್ ಎಂದು ನಿರ್ಧರಿಸಿದ್ದಾರೆ. 

ಇದೇ ಕಾರಣದಿಂದ ಗೋಕರ್ಣದಲ್ಲಿರುವ ವಿದೇಶಿಗರು ತಮ್ಮ ವೀಸಾ ವಿಸ್ತರಣೆಗಾಗಿ ಮನವಿ ಸಲ್ಲಿಸಿದ್ದು, ಸೂಕ್ತ ಪ್ರತಿಕ್ರಿಯೆ ದೊರಕದ್ದರಿಂದ ಸರಕಾರಿ ಕಚೇರಿ, ಅಧಿಕಾರಿಗಳ ಭೇಟಿ- ಮಾತುಕತೆ ಮುಂದುವರಿಸಿದ್ದಾರೆ.‌ ಅಂದಹಾಗೆ, ಗೋಕರ್ಣದಲ್ಲಿ ಹೆಚ್ಚು ವಿದೇಶಿಗರಿದ್ದು,‌ ಇವರ ಪೈಕಿ ಸುಮಾರು 30 ಜನರು ಈಗಾಗಲೇ ವೀಸಾ ವಿಸ್ತರಣೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಕೋವಿಡ್ ಕಾರಣದಿಂದ ವೀಸಾ ವಿಸ್ತರಣೆ ಪ್ರಕ್ರಿಯೆ ಬಾಕಿಯಾಗಿತ್ತು. ಇತ್ತೀಚೆಗೆ ಮತ್ತೆ ಮನವಿ ಸಲ್ಲಿಸಿದ  ಹಿನ್ನೆಲೆ ಪೊಲೀಸ್ ಇಲಾಖೆ ಪರಿಶೀಲನೆ ನಡೆಸಿದೆಯಾದ್ರೂ, ಎಫ್‌ಆರ್‌ಆರ್‌ಒಯಿಂದ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. 

ಈ ಕಾರಣದಿಂದ ಗೋಕರ್ಣ ಪೊಲೀಸರಿಗೆ ಸೂಚನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಒಂದೋ ವಿದೇಶಿಗರು ವೀಸಾ ವಿಸ್ತರಣೆ ಸಂಬಂಧಿಸಿ ಅನುಮತಿ ಪಡೆದುಕೊಳ್ಳಬೇಕಿದೆ, ಇಲ್ಲವಾದಲ್ಲಿ ತೆರಳುವ ಅನುಮತಿ ಪಡೆದುಕೊಳ್ಳಬೇಕು. ಡಿಸೆಂಬರ್ ಕೊನೇಯವರೆಗೆ ಇವರಿಗೆ ಅವಕಾಶವಿದ್ದು, ವಿಸ್ತರಣಾ ವೀಸಾ ದೊರಕದಿದ್ದಲ್ಲಿ ಹಿಂತಿರುಗಬೇಕಾಗುತ್ತದೆ ಎಂದಿದ್ದಾರೆ. ಈ ಕುರಿತು ಪೋಲೀಸರು ಕಾರ್ಯ ಪ್ರವೃತ್ತರಾಗಿದ್ದು, ಈ 30 ಮಂದಿ ವಿದೇಶಿಗರ ಮೇಲೆ ಪೊಲೀಸರು ಕಣ್ಣಿರಿಸಿದ್ದಾರೆ. 

ಇನ್ನು ಈ ಬಗ್ಗೆ ಪ್ರತಿಕ್ರಯಿಸಿರುವ ಜಿಲ್ಲಾಧಿಕಾರಿ ಮುಲೈ ಮುಹಿಲ್, ಗೋಕರ್ಣದಲ್ಲಿರುವ ವಿದೇಶಿಗರಿಗೆ ಸಂಬಂಧಿಸಿ ಎಫ್‌ಆರ್‌ಆರ್‌ಒ‌ ಸೆಲ್ ನಿರ್ಧಾರ ಕೈಗೊಳ್ಳುತ್ತದೆ. ಅವರ ವೀಸಾ ಅವಧಿ ಮುಗಿದು, ವಿಸ್ತರಣೆ ಹಿನ್ನೆಲೆಯಲ್ಲಿ ತನ್ನನ್ನು ಭೇಟಿಯಾಗಿದ್ದರು. ಇವರ ವಿಸ್ತರಣೆ ವಿಚಾರ ಕೇಂದ್ರ ಸರಕಾರದ ಇಲಾಖೆ ಸಂಬಂಧಿಸಿದ್ದಾಗಿದ್ದರಿಂದ, ಸಂಬಂಧಪಟ್ಟ ಇಲಾಖೆಯ ಆದೇಶದ ಮೇರೆಗೆ ಪೊಲೀಸ್ ಇಲಾಖೆ ಕ್ರಮ‌ ಕೈಗೊಳ್ಳಲಿದೆ. ಎಫ್‌ಆರ್‌ಆರ್‌ಒ ಸೆಲ್‌ ಅನ್ನು ಸಂಪರ್ಕಿಸಲು ಸೂಚನೆ ಹಾಗೂ ಮಾರ್ಗದರ್ಶನ ನೀಡಲಾಗಿದೆ ಎಂದಿದ್ದಾರೆ. 

ಇದರೊಂದಿಗೆ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ರೆಸಾರ್ಟ್, ಹೋಂ ಸ್ಟೇಗಳನ್ನು ಬುಕ್ಕಿಂಗ್ ಮಾಡಿಕೊಂಡಿರುವ ಕೇರಳ ಹಾಗೂ ಮಹಾರಾಷ್ಟ್ರದ ಪ್ರವಾಸಿಗರು 72 ಗಂಟೆಗಳ ಅವಧಿಯ ಆರ್‌ಟಿಪಿಸಿಆರ್ ರಿಪೋರ್ಟ್ ತರಲು ಸೂಚಿಸಲಾಗಿದೆ. ಅಲ್ಲದೇ, ರೆಸಾರ್ಟ್ ಹಾಗೂ ಹೋಂ ಸ್ಟೇಗಳಲ್ಲಿರುವವರಿಗೆ 10ದಿನಗಳಿಗೊಮ್ಮೆ ಸ್ಯಾಂಪಲ್ ತೆಗೆದು ಪರೀಕ್ಷಣೆ ನಡೆಸಲಾಗುತ್ತಿದೆ. ಬಾರ್ಡರ್‌ಗಳಲ್ಲೂ ಕೇರಳ, ಮಹಾರಾಷ್ಟ್ರದಿಂದ ಬಂದವರಿಗೆ ಸ್ಕ್ರೀನ್ ಮಾಡಲಾಗುತ್ತಿದ್ದು, ಉಳಿದವರಿಗೆ ಸಾಮಾನ್ಯ ವಿವರಗಳೊಂದಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ ಎನ್ನುತ್ತಾರೆ ಜಿಲ್ಲಾಧಿಕಾರಿ. 

ವೀಸ್ತಾ ವಿಸ್ತರಣೆಗಾಗಿ ಮನವಿ ಸಲ್ಲಿಸಿದ್ದು, ಎಫ್ಆರ್‌ಆರ್‌ಒ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ. ಈ ಅನುಮತಿ ಪಡೆಯಲು ಡಿಸೆಂಬರ್ ಕೊನೇಯವರೆಗೆ ಮಾತ್ರ ಕಾಲಾವಕಾಶ ಇರೋದ್ರಿಂದ ವಿದೇಶಿಗರಿಗೆ ದೊಡ್ಡ ತಲೆನೋವಾಗಿದೆ. ಒಂದು ವೇಳೆ ಈ ವಿದೇಶಿಗರಿಗೆ ಅನುಮತಿ ದೊರೆಯದೆ ಹಿಂತಿರುಗಬೇಕಾದ ಸ್ಥಿತಿ ಎದುರಾದಲ್ಲಿ ಜಿಲ್ಲೆಯ ಪ್ರವಾಸೋದ್ಯಮದ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆಗಳಿವೆ.

PREV
Read more Articles on
click me!

Recommended Stories

ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್
ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ