ಮಂಗಳೂರು ಹೊರವಲಯದ ಪಡೀಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ, ಬ್ರೇಕ್ ಫೇಲ್ ಆದರೂ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಡಿ.09): ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರಯಾಣಿಸುತ್ತಿದ್ದ ಕಾರು ಬ್ರೇಕ್ ಫೇಲ್ ಆದ ಘಟನೆ ಮಂಗಳೂರು ಹೊರವಲಯದ ಪಡೀಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು(ಶುಕ್ರವಾರ) ನಡೆದಿದ್ದು, ಬ್ರೇಕ್ ಫೇಲ್ ಆದರೂ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
ಹೌದು, ಮಂಗಳೂರಿನಿಂದ ಬಿ.ಸಿ.ರೋಡ್ ಕಡೆಗೆ ಯು.ಟಿ.ಖಾದರ್ ತಮ್ಮ ಫಾರ್ಚ್ಯೂನರ್ ಕಾರಿನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಪಡೀಲ್ ಬಳಿ ಬ್ರೇಕ್ ಫ್ಯೂಡ್ ಸೋರಿಕೆಯಾಗಿ ಏಕಾಏಕಿ ಫಾರ್ಚ್ಯೂನರ್ ಕಾರು ಬ್ರೇಕ್ ಫೇಲ್ ಆಗಿದೆ ಎನ್ನಲಾಗಿದೆ. ಆದರೆ ಬ್ರೇಕ್ ಫೇಲ್ ಆದರೂ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ: ಛಿದ್ರ ಛಿದ್ರವಾದ ಯುವಕನ ದೇಹ
ಕಾರು ಚಲಾಯಿಸುತ್ತಿದ್ದ ಲಿಬ್ಝಿತ್ ತಕ್ಷಣ ಹ್ಯಾಂಡ್ ಬ್ರೇಕ್ ಮತ್ತು ಗೇರ್ ಬ್ಯಾಲೆನ್ಸ್ ಮೂಲಕ ಕಾರು ನಿಲ್ಲಿಸಿದ್ದಾರೆ. ಬಳಿಕ ಬೇರೆ ಕಾರಿನ ಮೂಲಕ ಖಾದರ್ ಬಿ.ಸಿ.ರೋಡ್‌ಗೆ ತೆರಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕಾರು ಸರ್ವೀಸ್ ಮಾಡಿಸಿದ್ದು, ಸದ್ಯ ಏಕಾಏಕಿ ಈ ಸಮಸ್ಯೆ ಕಾಣಿಸಿಕೊಂಡಿರುವುದರ ಬಗ್ಗೆ ಕಂಪೆನಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಖಾದರ್ ಪೊಲೀಸ್ ಎಸ್ಕಾರ್ಟ್ ಜೊತೆ ಸಾಗುತ್ತಿದ್ದು, ಅಕ್ಕಪಕ್ಕವೂ ಬೇರೆ ಯಾವುದೇ ವಾಹನ ಸಂಚಾರ ಇರದ ಕಾರಣ ಚಾಲಕ ಕಾರನ್ನು ನಿಯಂತ್ರಣಕ್ಕೆ ತಂದಿದ್ದಾರೆ.