ಸಿರಿಧಾನ್ಯಗಳ ಮಹತ್ವ ಅರಿಯುವಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಶ್ಲಾಘಿಸಿದರು.
ತುಮಕೂರು : ಸಿರಿಧಾನ್ಯಗಳ ಮಹತ್ವ ಅರಿಯುವಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಶ್ಲಾಘಿಸಿದರು.
ತುಮಕೂರಿನಲ್ಲಿ ಇಲಾಖೆಯಿಂದ ಮತ್ತು ಸಾವಯವ ಮೇಳದ ಅಂಗವಾಗಿ ನಾಗರಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕಾಲ್ನಡಿಗೆ ಜಾಥಾಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದರು.
ಈಗಾಗಲೇ ನಮ್ಮ ದೇಶದಲ್ಲಿ ಸಿರಿಧಾನ್ಯಗಳ ಮಹತ್ವನ್ನು ಜನರು ಬಹಳಷ್ಟುಅರಿತುಕೊಂಡಿದ್ದಾರೆ. ಅದರಲ್ಲೂ ಕರ್ನಾಟಕ ಮುಂಚೂಣಿಯಲ್ಲಿದ್ದು, ಕಳೆದ 15 ವರ್ಷಗಳಿಂದ ರೈತರು, ಸರ್ಕಾರ ಮತ್ತು ಅಧಿಕಾರಿಗಳು ಸಿರಿಧಾನ್ಯಗಳ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಸಿರಿಧಾನ್ಯಗಳ ಮಹತ್ವ ತಿಳಿಸುವ ಸಲುವಾಗಿ ಈ ಜಾಥಾ ಮಾಡಲಾಗುತ್ತಿದೆ ಎಂದ ಅವರು, ಸಿರಿಧಾನ್ಯಗಳು ಆರೋಗ್ಯಕ್ಕೆ ಬಹಳ ಒಳ್ಳೆಯ ಆಹಾರವಾಗಿದೆ. ಜತೆಗೆ ಈ ಸಿರಿಧಾನ್ಯಗಳು ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಯಾಗಿವೆ. ತುಮಕೂರು ಕಡಿಮೆ ಮಳೆಯಾಗುವ ಜಿಲ್ಲೆ. ಹೀಗಾಗಿ ಈ ಪ್ರದೇಶದ ಮಣ್ಣಿನಲ್ಲಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಸಿರಿಧಾನ್ಯಗಳನ್ನು ಬೆಳೆಯಬಹುದು ಎಂಬುದು ವಿಜ್ಞಾನಿಗಳ ಸಲಹೆಯಾಗಿದೆ. ಯಾವುದು ನಮ್ಮ ನೆಲಕ್ಕೆ ಒಗ್ಗುತ್ತದೋ ಅಂತಹ ಆಹಾರದ ಬೆಳೆಯನ್ನು ಬೆಳೆಯಲು ಮುಂದಾಗುವುದು ಒಳಿತು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾರಂಭವಾದ ಈ ಕಾಲ್ನಡಿಗೆ ಜಾಥಾ ನಗರದ ಪ್ರಮುಖ ರಸ್ತೆಗಳ ಮುಖೇನ ಸರ್ಕಾರಿ ಜೂನಿಯರ್ ಕಾಲೇಜುವರೆಗೆ ಸಾಗಿ ಸಿರಿಧಾನ್ಯ ಮತ್ತು ಸಾವಯವ ಮೇಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಕಾಲ್ನಡಿಗೆ ಜಾಥಾದಲ್ಲಿ ಕೃಷಿ ಇಲಾಖೆ ಉಪನಿರ್ದೇಶಕ ಅಶೋಕ್, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣಪ್ಪ, ತೋಟಗಾರಿಕೆ ಉಪನಿರ್ದೇಶಕ ರಘು, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ, ತಹಶೀಲ್ದಾರ್ ಸಿದ್ದೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಿರಿಧಾನ್ಯ ಸವಿದ ಅಧಿಕಾರಿಗಳು:
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹಾಗೂ ಮತ್ತಿತರ ಅಧಿಕಾರಿಗಳು ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಸಾರ್ವಜನಿಕರಿಗೆ ಉಣಬಡಿಸಿ ನಂತರ ತಾವೂ ಸವಿದರು.
ಸಿರಿಧಾನ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಾಲ್ನಡಿಗೆ ಜಾಥಾ ನಡೆಸಿದ್ದೇವೆ. ಹಾಗೆಯೇ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸುಮಾರು 9 ಬಗೆಯ ಸಿರಿಧಾನ್ಯಗಳು ಇವೆ. ಈ 9 ಬಗೆಯ ಸಿರಿಧಾನ್ಯಗಳನ್ನು ಉತ್ತಮ ಆರೋಗ್ಯ ದೃಷ್ಟಿಯಿಂದ ಬಳಸಬೇಕು. ಜಿಲ್ಲೆಯ ರೈತರಿಗೆ ಈ ಸಿರಿಧಾನ್ಯ ಬೆಳೆ ಬೆಳೆಯಲು ಅಗತ್ಯ ಪ್ರೋತ್ಸಾಹವನ್ನು ನೀಡುವ ಅಗತ್ಯವಿದೆ.
ಡಾ.ಕೆ.ವಿದ್ಯಾಕುಮಾರಿ ಜಿ.ಪಂ. ಸಿಇಓ
2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ವಿಶ್ವಸಂಸ್ಥೆ ಘೋಷಿಸಿರುವ ಹಿನ್ನೆಲೆಯಲ್ಲಿ ಸಿರಿಧಾನ್ಯ ಬೆಳೆ ಬೆಳೆಯಲು ಹಾಗೂ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಜನರಲ್ಲಿ ಅರಿವು ಮೂಡಿಸಲು ಕಾಲ್ನಡಿಗೆ ಜಾಥಾ ನಡೆಸಲಾಗುತ್ತಿದೆ. ಸಿರಿಧಾನ್ಯ ಅತಿ ಹೆಚ್ಚು ಪೌಷ್ಠಿಕಾಂಶ, ಫೈಬರ್ ಹೊಂದಿರುವ ಆಹಾರ ಪದಾರ್ಥ. ರಾಗಿ, ನವಣೆ, ಆರ್ಕ ಸೇರಿದಂತೆ ಇತರೆ ಸಿರಿಧಾನ್ಯಗಳನ್ನು ಉತ್ತಮ ಆರೋಗ್ಯಕ್ಕಾಗಿ ಬಳಸಬಹುದಾಗಿದೆ. ಅಲ್ಲದೆ ಮಧುಮೇಹಿಗಳಿಗೆ ಸಿರಿಧಾನ್ಯಗಳು ಉತ್ತಮ ಆಹಾರವಾಗಿದೆ.
ಕೆ.ಎಚ್.ರವಿ ಜಂಟಿ ಕೃಷಿ ನಿರ್ದೇಶಕ