ಮೈಸೂರು: ವಿವಿಧ ಗ್ರಾಮಗಳಲ್ಲಿ ಅಸ್ಪೃಶ್ಯತೆ ಜೀವಂತ

By Kannadaprabha NewsFirst Published Jul 31, 2019, 2:35 PM IST
Highlights

ಈ ದಿನಗಳಲ್ಲಿಯೂ ಅಸ್ಪೃಷ್ಯತೆ ಆಚರಣೆಯಲ್ಲಿದೆ ಅಂದರೆ ನಂಬಬಹುದಾ..? ನಂಬುವುದು ಕಷ್ಟವಾದರೂ ಮೈಸೂರಿನ ನಂಜನಗೂಡು ತಾಲೂಕಿನ ಹಲವೆಡೆ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ. ಅರ್ಹರಿಗೆ ಸಿಗಬೇಕಾದ ಸೌಲಭ್ಯಗಳೂ, ಕೆಲವು ಅಧಿಕಾರಿಗಳ ಮೋಸದಿಂದಾಗಿ ಅನ್ಯರ ಪಾಲಾಗುತ್ತಿದೆ.

ಮೈಸೂರು(31): ನಂಜನಗೂಡು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ ಎಂಬ ದೂರುಗಳು ಕೇಳಿ ಬಂದಿದ್ದು, ಅಸ್ಪೃಶ್ಯತೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲಾಗುವುದು ಎಂದು ತಹಸೀಲ್ದಾರ್‌ ಕೆ.ಎಂ. ಮಹೇಶ್‌ಕುಮಾರ್‌ ಹೇಳಿದರು.

ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ. ಜಾತಿ, ಪಂಗಡಗಳ ಹಿತರಕ್ಷಣಾ ಸಭೆಯಲ್ಲಿ ಮಾತನಾಡಿ, ತಾಲೂಕಿನ ನಗರ್ಲೆ ಗ್ರಾಮದಲ್ಲಿ ಹೋಟೆಲ್‌ಗಳಿಗೆ ಇನ್ನೂ ದಲಿತರನ್ನು ಸೇರಿಸುತ್ತಿಲ್ಲ, ಕೋಣನೂರು ಗ್ರಾಮದಲ್ಲಿ ಸೆಸ್ಕ್‌ ಬಿಲ್‌ ಕಲೆಕ್ಟರ್‌ನ್ನು ಮೀಟರ್‌ ರೀಡಿಂಗ್‌ ಮಾಡಲು ಮನೆಯ ಒಳಗೆ ಸೇರಿಸದೇ ಅಸ್ಪೃಶ್ಯತೆ ಮಾಡಲಾಗುತ್ತಿದೆ ಎಂಬ ದೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಅದನ್ನು ತಡೆಗಟ್ಟಲು ಜಾಗೃತಿ ಮೂಡಿಸುವ ಜೊತೆಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಆಧಾರ್ ಕಾರ್ಡ್ ಸಮಸ್ಯೆ:

ತಾಲೂಕಿನಲ್ಲಿ ಆಧಾರ್‌ ಸಮಸ್ಯೆ ಹೆಚ್ಚಾಗಿದ್ದು, ಅದನ್ನು ನಿವಾರಿಸಲು ಗ್ರಾಮಗಳಿಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಲಾಗುವುದು. ಆ. 4 ರಂದು ತಾಲೂಕಿನ ಚಿಲಕಹಳ್ಳಿ ಗ್ರಾಮದ ಆದಿವಾಸಿಗಳ ಹಾಡಿಗೆ ಭೇಟಿ ನೀಡಿ ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ವಿತರಣೆ ಮಾಡಲಾಗುವುದು ಎಂದರು.

ದಲಿತರು ಮಾಡುವ ಅಡುಗೆ ಉಣ್ಣುವುದಿಲ್ಲ:

ತಾಲೂಕಿನ ಕುಪ್ಪರವಳ್ಳಿ, ದೇವನೂರು, ಚುಂಚನಹಳ್ಳಿ ಗ್ರಾಮದ ಶಾಲೆಗಳಲ್ಲಿ ದಲಿತರು ಅಡುಗೆ ಮಾಡುತ್ತಾರೆಂಬ ಕಾರಣಕ್ಕೆ ಮೇಲ್ವರ್ಗದವರು ಮಕ್ಕಳಿಗೆ ಊಟ ಮಾಡುಸುತ್ತಿಲ್ಲ, ಇದರಿಂದ ಅಧಿಕಾರಿಗಳು ಅವರನ್ನು ಬೇರೆ ಕೆಲಸಕ್ಕೆ ನಿಯೋಜಿಸಿ ಅಸ್ಪೃಶ್ಯತೆ ಆಚರಣೆಗೆ ಪೋಷಣೆ ಮಾಡುತ್ತಿದ್ದಾರೆ ಎಂದು ಮಲ್ಲೇಶ್‌ ದೂರಿದರು.

ಮಹದೇವು ಮಾತನಾಡಿ, ಆಶ್ರಯ ಮನೆಗಳಿಗೆ ಬಿಲ್‌ ಪಾವತಿ ಮಾಡಲು ಹಾಗೂ ಜಿಪಿಎಸ್‌ ಮಾಡಲು ಫಲಾನುಭವಿಗಳ ಬಳಿ ಹಣ ಪಡೆಯುತ್ತಿದ್ದಾರೆ, ಹಣ ನೀಡದಿದ್ದಲ್ಲಿ ಜಿಪಿಎಸ್‌ ಕೆಲಸವನ್ನೇ ಮಾಡುತ್ತಿಲ್ಲ ಎಂದು ದೂರಿದರು.

ಅಕ್ರಮ ಮದ್ಯ ಮಾರಾಟ:

ತಾಪಂ ಅಧ್ಯಕ್ಷ ಬಿ.ಎಸ್‌. ಮಹದೇವಪ್ಪ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಿರಾಣಿ ಅಂಗಡಿಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅವುಗಳನ್ನು ತಡೆಯಲು ಅಬಕಾರಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ದೂರುಗಳು ಕೇಳಿ ಬರುತ್ತಿವೆ, ನೀವು ಏನು ಕೆಲಸ ಮಾಡುತ್ತಿದ್ದೀರಿ ಎಂದು ಹರಿಹಾಯ್ದರು, ಇದರಿಂದ ಅಬಕಾರಿ ಇಲಾಖೆ ಇನ್‌ಸ್ಪೆಕ್ಟರ್‌ ಪ್ರೇಮ ಉತ್ತರಿಸಲಾಗದೆ ಮೌನಕ್ಕೆ ಶರಣಾದರು.

ತಹಸೀಲ್ದಾರ್‌ ಮಹೇಶ್‌ ಕುಮಾರ್‌ ಮಧ್ಯೆ ಪ್ರವೇಶಿಸಿ ನೀವು ಯಾವ ಗ್ರಾಮಕ್ಕೆ ಭೇಟಿ ನೀಡಿ ಯಾವ ದೂರು ದಾಖಲಿಸಿದ್ದೀರಿ ಎಂಬ ವಿವರವನ್ನು ಸಲ್ಲಿಸಿ ಎಂದು ಸೂಚನೆ ನೀಡಿದರು. ತಾಲೂಕಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯವಿಲ್ಲದ ಕಾರಣ ಸಂಬಂಧ ಪಟ್ಟಇಲಾಖೆಗೆ ಪತ್ರ ಬರೆದು ಹಾಸ್ಟೆಲ್‌ ಸೌಲಭ್ಯ ಒದಗಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.

ಅರ್ಹರ ಸಹಿ ಪಡೆದು ಅನ್ಯರಿಗೆ ಮಾರಾಟ:

ದಸಂಸ ಸಂಚಾಲಕ ಮಲ್ಲೇಶ್‌ ಮಾತನಾಡಿ, ಕೃಷಿ ಇಲಾಖೆಯಲ್ಲಿ ವಿತರಣೆ ಮಾಡುವ ಕೃಷಿ ಉಪಕರಣಗಳು ನಿಜವಾದ ಫಲಾನುಭವಿಗಳಿಗೆ ಸೇರದೆ ಅವರಿಂದ ಸಹಿ ಪಡೆದು ಅನ್ಯರಿಗೆ ಮಾರಾಟ ಮಾರಿಕೊಳ್ಳಲಾಗುತ್ತಿದೆ, ಸುಮರು 7 ಟ್ರಿಲ್ಲರ್‌ಗಳನ್ನು ಅಕ್ರಮವಾಗಿ ಮಾರಿಕೊಳ್ಳಲಾಗಿದೆ, ಆದ್ದರಿಂದ ಕೃಷಿ ಅಧಿಕಾರಿಗಳು ವಿತರಣೆ ಮಾಡಲಾದ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು. ಮೇಲ್ಮಟ್ಟದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ಸಮಾಜ ಕಲ್ಯಾಣಾಧಿಕಾರಿ ಜನಾರ್ಧನ್‌, ತಾಪಂ ಎಇಓ ಶ್ರೀನಿವಾಸ್‌, ಕೃಷಿ ಸಹಾಯಕ ನಿರ್ದೇಶಕ ದೀಪಕ್‌, ನಗರಸಭಾ ಪೌರಾಯುಕ್ತ ಕರಿಬಸವಯ್ಯ, ಸಿಡಿಪಿಒ ಗೀತಾಲಕ್ಷ್ಮೇ ಇದ್ದರು.

click me!