ಹಿಂದೂ ಧರ್ಮವೇ ಭಾರತ ದೇಶವನ್ನು ಉಳಿಸಿದೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

By Kannadaprabha NewsFirst Published Oct 4, 2023, 3:30 AM IST
Highlights

ಇಡೀ ಪ್ರಪಂಚಕ್ಕೆ ಒಳ್ಳೆಯದು ಬಯಸುವ, ಪ್ರಕೃತಿ ಪೂಜಿಸುವ, ವಸುದೈವ ಕುಟುಂಬಕಂ ಎಂಬ ವಿಚಾರ ಕೊಟ್ಟವರು ಭಾರತೀಯರಾಗಿದ್ದಾರೆ. ವಿದೇಶಿಗರು ಕೂಡ ನಮ್ಮ ವಿಚಾರಕ್ಕೆ ಮಾರು ಹೋಗಿದ್ದಾರೆ, ವೈಚಾರಿಕತೆ ಆಧಾರದಲ್ಲಿ ನಮ್ಮ ಧರ್ಮವಿದೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಚಾಮರಾಜನಗರ(ಅ.04):  ಹಿಂದೂ ಧರ್ಮವೇ ಭಾರತ ದೇಶವನ್ನು ಉಳಿಸಿದೆ. ಇಸ್ರೋ ವಿಜ್ಞಾನಿಗಳು ಸಹ ಉಪಗ್ರಹ ಉಡಾವಣೆಗೂ ಮುನ್ನ ವಿಷ್ಣು ಹಾಗೂ ಶಿವನಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮದು ವೈಚಾರಿಕ ಧರ್ಮ ಎಂದು ತೋರಿದ್ದಾರೆ. ಆದ್ದರಿಂದ ಧರ್ಮ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. ಚಾಮರಾಜನಗರದ ಜೆಎಸ್ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಶ್ರೀಗಳ 108ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಡೀ ಪ್ರಪಂಚಕ್ಕೆ ಒಳ್ಳೆಯದು ಬಯಸುವ, ಪ್ರಕೃತಿ ಪೂಜಿಸುವ, ವಸುದೈವ ಕುಟುಂಬಕಂ ಎಂಬ ವಿಚಾರ ಕೊಟ್ಟವರು ಭಾರತೀಯರಾಗಿದ್ದಾರೆ. ವಿದೇಶಿಗರು ಕೂಡ ನಮ್ಮ ವಿಚಾರಕ್ಕೆ ಮಾರು ಹೋಗಿದ್ದಾರೆ, ವೈಚಾರಿಕತೆ ಆಧಾರದಲ್ಲಿ ನಮ್ಮ ಧರ್ಮವಿದೆ ಎಂದು ಹೇಳಿದರು.

ಚಾಮರಾಜನಗರ: ವೀಕ್ಷಣೆಗಿಲ್ಲ ಮಹದೇಶ್ವರನ 108 ಅಡಿ ಎತ್ತರದ ಪ್ರತಿಮೆ, ಮಾದಪ್ಪನ ಭಕ್ತರಿಗೆ ಭಾರೀ ನಿರಾಸೆ..!

ಖಾವಿ ಬಟ್ಟೆಯಲ್ಲಿ ಶ್ರೇಷ್ಠತೆ ಇದೆ, ವಿದೇಶದಲ್ಲೂ ಸಾಧು, ಸ್ವಾಮೀಜಿಗಳಿಗೆ ಗೌರವವಿದೆ. ಮಠ-ಮಂದಿರಗಳನ್ನು ಬೆಳೆಸುವ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕಿದೆ, ಸರ್ಕಾರ ಮಾಡಬಹುದಾದ ಕೆಲಸವನ್ನು ಇಂದು ಮಠಗಳು ಮಾಡುತ್ತಿವೆ, ಬಸವಣ್ಣನವರ ತತ್ವ, ವೈಚಾರಿಕತೆಯಲ್ಲಿ ಮಠಗಳು ಶಿಕ್ಷಣ ಕೊಡುತ್ತಿವೆ ಎಂದರು.

ಕರ್ನಾಟಕದಲ್ಲಿ ಬಸವಣ್ಣ ಹುಟ್ಟದಿದ್ದರೇ ನಮ್ಮ ಧರ್ಮ, ಸಂಸ್ಕಾರ ಕರ್ನಾಟಕದಲ್ಲಿ ಉಳಿಯುತ್ತಿರಲಿಲ್ಲ, ಕೇರಳದಲ್ಲಿ ನಾರಾಯಣಗುರು ಜನಿಸದಿದ್ದರೇ ಅಲ್ಲಿರುವ ಶೇ.30ರಷ್ಟು ಹಿಂದೂಗಳು ಸಹ ಇರುತ್ತಿರಲಿಲ್ಲ ಎಂದರು.

ಬುದ್ಧ, ಬಸವರು ಸನಾತನ ಧರ್ಮ ವಿರುದ್ಧ ಇದ್ದರು:

ಸಂಸದ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ಬುದ್ಧ, ಬಸವ, ಮಹಾವೀರ, ಗುರುನಾನಕ್ ಅವರುಗಳು ಸನಾತನ ಧರ್ಮದ ವಿರುದ್ಧ ಇದ್ದವರು, ಸನಾತನ ಧರ್ಮದ ಜಾತಿಯತೆ, ಮೌಢ್ಯತೆ ವಿರುದ್ಧ ಇದ್ದವರು. ಆದರೆ, ದಮನ ಮಾಡಲಿಲ್ಲ, ಮುಗಿಸುತ್ತೇವೆ ಎನ್ನುವುದು ತಪ್ಪು ಎಂದರು.

ಕುಟುಂಬ ಸಮೇತ ಮಲೆ ಮಹದೇಶ್ವರ ಸ್ವಾಮಿ ದರ್ಶನಕ್ಕೆ ಬಂದ  ನಟ ರಾಘವೇಂದ್ರ ರಾಜ್ ಕುಮಾರ್ 

ಸನಾತನ ಧರ್ಮದ ವಿರುದ್ಧ ಮತ್ತೊಂದು ಧರ್ಮ ಕಟ್ಟಿದ್ದರು. ಎಲ್ಲಾ ಜಾತಿಯವರನ್ನು ಒಳಗೊಂಡ ಧರ್ಮ ಬಸವ ಧರ್ಮ, 12ನೇ ಶತಮಾನದಲ್ಲಿ ವೈಚಾರಿಕ ಕ್ರಾಂತಿ, ಅಧಿಕಾರ ವಿಕೇಂದ್ರೀಕರಣ ಮಾಡಿದರು ಎಂದು ಹೇಳಿದರು.

ಕೆರೆಗೆ ನೀರು ವಿಚಾರದಲ್ಲಿ ಕ್ರೆಡಿಟ್ ಫೈಟ್

ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಇಬ್ಬರು ಸಚಿವರು ತಮ್ಮ ಭಾಷಣದಲ್ಲಿ ಕ್ರೆಡಿಟ್ ಫೈಟ್ ನಡೆಸಿದರು. ಮೊದಲು ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕೆರೆಗೆ ನೀರು ತುಂಬುವ ಯೋಜನೆ ತಂದದ್ದು ಬಿ.ಎಸ್.ಯಡಿಯೂರಪ್ಪ, ಗಡಿಜಿಲ್ಲೆಗೆ ಭಗಿರಥನಂತೆ ಬಂದರು, ಜೈಲಿಗೆ ಹೋಗಲೂ ಸಿದ್ಧ ಆದರೆ ಕೆರೆ ತುಂಬುವ ಯೋಜನೆಯಿಂದ ಹಿಂದೆ ಸರಿಯಲ್ಲ ಎಂದಿದ್ದರು, ಅವರನ್ನು ಚಾಮರಾಜನಗರ ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು. ಇದಾದ ನಂತರ, ಸಚಿವ ಕೆ.ವೆಂಕಟೇಶ್ ಮಾತನಾಡಿ, ಕೆರೆಗೆ ನೀರು ತುಂಬುವ ಯೋಜನೆ ಜಾರಿ ಮಾಡಿದವರು ಸಿದ್ದರಾಮಯ್ಯ, ಕೆರೆ ತುಂಬುವ ಯೋಜನೆ ಘೋಷಿಸಿದ್ದು ಯಡಿಯೂರಪ್ಪ ಆದರೂ ಅದಕ್ಕೆ ಅನುದಾನ ಕೊಟ್ಟಿದ್ದು ಸಿದ್ದರಾಮಯ್ಯ ಎಂದು ಕ್ರೆಡಿಟ್ ಫೈಟ್ ನಡೆಸಿದರು.

click me!