ಯಲಹಂಕದ ಮದರ್‌ ಡೈರಿಗೆ ಅಮಿತ್‌ ಶಾ ಭೇಟಿ: ಕೆಎಂಎಫ್‌ ಕಾರ್ಯಕ್ಕೆ ಮೆಚ್ಚುಗೆ

By Kannadaprabha NewsFirst Published Aug 5, 2022, 7:48 AM IST
Highlights

ಯಲಹಂಕದ ಮದರ್‌ ಡೇರಿಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕೆಎಂಎಫ್‌ ಮತ್ತು ಡೇರಿ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮ

ಕನ್ನಡಪ್ರಭ ವಾರ್ತೆ ಬೆಂಗಳೂರು

ಯಲಹಂಕದ ಮದರ್‌ ಡೇರಿಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕೆಎಂಎಫ್‌ ಮತ್ತು ಡೇರಿ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮದರ್‌ ಡೇರಿಯಲ್ಲಿರುವ ಹಾಲಿನ ಪುಡಿ ಘಟಕ ಮತ್ತು ಡೇರಿಯ ಇತರೆ ಚಟುವಟಿಕೆಗಳ ಬಗ್ಗೆ ಹಿರಿಯ ಅಧಿಕಾರಿಗಳು ಶಾ ಅವರಿಗೆ ವಿವರಿಸಿದರು. ಆಗ ಕೆಎಂಎಫ್‌ ಮತ್ತು ಡೇರಿ ಚಟುವಟಿಕೆಗಳನ್ನು ಶ್ಲಾಘಿಸಿದ ಶಾ, ಕೆಎಂಎಫ್‌ ಮತ್ತು ನಂದಿನಿ ಬ್ರ್ಯಾಂಡ್‌ ಅನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಸಚಿವ ಎಸ್‌.ಟಿ.ಸೋಮಶೇಖರ್‌, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕ ಎಸ್‌.ಆರ್‌.ವಿಶ್ವನಾಥ್‌, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌, ಪಶು ಸಂಗೋಪನೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸಲ್ಮಾ ಕೆ. ಫಹೀಮ್‌, ಸಹಕಾರ ಸಂಘಗಳ ನಿಬಂಧಕ ಡಾ.ಕೆ.ರಾಜೇಂದ್ರ, ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಹಾಜರಿದ್ದರು.

ಬಿಗಿ ಪೊಲೀಸ್‌ ಬಂದೋಬಸ್ತ್‌:

ಅಮಿತ್‌ ಶಾ ಭೇಟಿ ಹಿನ್ನೆಲೆಯಲ್ಲಿ ಮದರ್‌ ಡೇರಿ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡೇರಿಯ ಅಕ್ಕಪಕ್ಕದ ಅಂಗಡಿಗಳ ಮುಂದೆ ನಿಂತಿದ್ದ ವಾಹನಗಳನ್ನು ಪೊಲೀಸರು ತೆರವು ಮಾಡಿಸಿದರು. ಮದರ್‌ ಡೇರಿಯ ಸಿಬ್ಬಂದಿಯನ್ನು ಸಹ ಪೊಲೀಸರು ತಪಾಸಣೆ ನಡೆಸಿ ಪ್ರವೇಶಕ್ಕೆ ಅನುಮತಿ ಕಲ್ಪಿಸಿದರು. ಬೆಂಗಳೂರಿನ ಯಲಹಂಕದ ಮದರ್‌ ಡೇರಿಗೆ ಗುರುವಾರ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡೇರಿ ಚಟುವಟಿಕೆಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮತ್ತಿತರರು ಹಾಜರಿದ್ದರು.

ಗುಜರಾತ್‌ನಲ್ಲಿ ಸೆ.12ರಿಂದ ವಿಶ್ವ ಡೇರಿ ಶೃಂಗಸಭೆ

ಅಂತಾರಾಷ್ಟ್ರೀಯ ಡೇರಿ ಫೆಡರೇಷನ್‌(ಐಡಿಎಫ್‌) ವತಿಯಿಂದ ಸೆ.12ರಿಂದ 15ರವರೆಗೆ ಗುಜರಾತ್‌ನ ಆನಂದ್‌ನಲ್ಲಿ ‘ವಿಶ್ವ ಡೇರಿ ಶೃಂಗ’ ಸಭೆ ನಡೆಯುತ್ತಿದ್ದು ಅಮೂಲ್‌ನೊಂದಿಗೆ ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್‌) ಸಹ ಮುಖ್ಯ ಪ್ರಾಯೋಜಕತ್ವ ಪಡೆದಿದೆ. ಕೆಎಂಎಫ್‌ ದೇಶದ 2ನೇ ಅತಿದೊಡ್ಡ ಸಹಕಾರಿ ಸಂಸ್ಥೆಯಾಗಿದ್ದು ನಾಲ್ಕೂವರೆ ದಶಕಗಳಿಂದ ಸಹಕಾರ ಚಳವಳಿಯ ತತ್ವಗಳನ್ನು ಮೈಗೂಡಿಸಿಕೊಂಡು ಗ್ರಾಮೀಣ ಹಾಲು ಉತ್ಪಾದಕರ ಅರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅಲ್ಲದೇ ಗ್ರಾಮೀಣ ಉದ್ಯೋಗ ಮತ್ತು ಹಾಲು ಉತ್ಪಾದನೆಗೆ ಆದ್ಯತೆ ನೀಡಿದೆ. ಇದೀಗ ವಿಶ್ವ ಡೇರಿ ಶೃಂಗ ಸಭೆಯ ಪ್ರಾಯೋಜಕತ್ವ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ತಿಳಿಸಿದ್ದಾರೆ.

ಐಡಿಎಫ್‌ ರಾಷ್ಟ್ರೀಯ ಸಂಸ್ಥೆಯಾಗಿದ್ದು, ದೇಶದ ಗ್ರಾಮೀಣ ಪ್ರದೇಶದ ಲಕ್ಷಾಂತರ ಹಾಲು ಉತ್ಪಾದಕರಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಹೈನೋದ್ಯಮ ಕಾರ್ಯಕ್ರಮಗಳನ್ನು ಏರ್ಪಡಿಸಿ ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಅಂತಾರಾಷ್ಟ್ರೀಯ ಡೇರಿ ಫೆಡರೇಷನ್‌ನ ವಿಶ್ವ ಡೇರಿ ಶೃಂಗಸಭೆಗೆ ವಿಶ್ವದಾದ್ಯಂತ ಸುಮಾರು 1500 ಸಂಖ್ಯೆ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಡೇರಿ ಸಂಸ್ಕರಣಾ ಕಂಪನಿಗಳ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳು ಮತ್ತು ಉದ್ಯೋಗಿಗಳು, ಡೇರಿ ರೈತರು, ಡೇರಿ ಉದ್ಯಮಕ್ಕೆ ಪೂರೈಕೆದಾರರು, ಶಿಕ್ಷಣ ತಜ್ಞರು, ಸರ್ಕಾರಿ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಡೇರಿ ಫೆಡರೇಷನ್‌ ವಿಶ್ವದ ಡೇರಿ ಉತ್ಪನ್ನಗಳು ಸುರಕ್ಷಿತ ಮತ್ತು ಸಮರ್ಥನೀಯವೆಂದು ಖಚಿತಪಡಿಸಿಕೊಳ್ಳಲು ನೀತಿ, ನಿಬಂಧನೆಗಳು, ಮಾನದಂಡಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವಿಶ್ವದ 43 ಸದಸ್ಯ ರಾಷ್ಟ್ರಗಳಲ್ಲಿ 1200ಕ್ಕೂ ಹೆಚ್ಚು ಅರ್ಹ ಡೇರಿ ತಜ್ಞರೊಂದಿಗೆ ಐಡಿಎಫ್‌ ಜಾಗತಿಕ ಹಾಲು ಉತ್ಪಾದನೆಯ ಶೇ.75ರಷ್ಟನ್ನು ಪ್ರತಿನಿಧಿಸುತ್ತಿದೆ ಎಂದು ಕೆಎಂಎಫ್‌ ತಿಳಿಸಿದೆ.

click me!