ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿದು ಮೊನ್ನೆ ನಾಲ್ವರು ಸಾವನ್ನಪ್ಪಿದ್ದರು. ತಡರಾತ್ರಿ ಹರಿದು ಮುಂಜಾನೆ ಕಾಲಿಡುತ್ತಿರುವಾಗಲೇ ಮಲಗಿದ್ದ ನಾಲ್ವರ ಮೇಲೆ
ಗುಡ್ಡ ಹಾಗೂ ಟೆರೇಸ್ ಮನೆ ಎರಡೂ ಬಿದ್ದು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿದು ಮೊನ್ನೆ ನಾಲ್ವರು ಸಾವನ್ನಪ್ಪಿದ್ದರು. ತಡರಾತ್ರಿ ಹರಿದು ಮುಂಜಾನೆ ಕಾಲಿಡುತ್ತಿರುವಾಗಲೇ ಮಲಗಿದ್ದ ನಾಲ್ವರ ಮೇಲೆ ಗುಡ್ಡ ಹಾಗೂ ಟೆರೇಸ್ ಮನೆ ಎರಡೂ ಬಿದ್ದು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮುಖ್ಯಮಂತ್ರಿಗಳೇನೋ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಪರಿಹಾರ ನೀಡಿದ್ದಾರೆ. ಆದ್ರೆ, ಈ ಘಟನೆಯಿಂದ ಒಂದು ಕುಟುಂಬ ಜನ್ಮ ನೀಡಿದ ತಾಯಿ, ಒಡಹುಟ್ಟಿದವರನ್ನು ಕಳೆದುಕೊಂಡರೆ, ಮತ್ತೊಂದು ಕುಟುಂಬಕ್ಕೆ ತಮ್ಮ ಆಧಾರ ಸ್ತಂಭವೇ ಕಣ್ಮರೆಯಾದಂತಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ....
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸುರಿದ ಮಹಾಮಳೆಯಿಂದಾಗಿ ಸಾಕಷ್ಟು ಅವಾಂತರಗಳು ನಡೆದಿವೆ. ಗುಡ್ಡ ಕುಸಿತ ದುರಂತಕ್ಕೆ ಬಲಿಯಾದವರ ಮನೆಯ ಸ್ಥಿತಿ ಶೋಚನೀಯವಾಗಿದೆ. ಈ ದುರಂತದಲ್ಲಿ ಮುಟ್ಟಳ್ಳಿಯ ನಿವಾಸಿಗಳಾದ ಲಕ್ಷ್ಮೀ ನಾರಾಯಣ ನಾಯ್ಕ (60), ಆಕೆಯ ಪುತ್ರಿ ಲಕ್ಷ್ಮೀ ನಾಯ್ಕ (45), ಪುತ್ರ ಅನಂತ ನಾರಾಯಣ ನಾಯ್ಕ (38) ಹಾಗೂ ಸಹೋದರಿಯ ಮಗ ಪ್ರವೀಣ್ ರಾಮಕೃಷ್ಣ ನಾಯ್ಕ (16) ಸ್ಥಳದಲ್ಲೇ ಸಾವಿಗೀಡಾಗಿದ್ದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಸಿದ ಕಾರ್ಯಾಚರಣೆಯ ಮೂಲಕ ಮೃತದೇಹಗಳನ್ನು ಹೊರಕ್ಕೆ ತೆಗೆದು ಕೊನೆಗೂ ಆ ದೇಹಗಳಿಗೆ ಅಂತ್ಯಸಂಸ್ಕಾರ ಮಾಡಲಾಯ್ತು. ಆದರೆ, ನಾಲ್ವರನ್ನು ಕಳೆದುಕೊಂಡ ಎರಡು ಕುಟುಂಬಗಳ ನೋವು ಮಾತ್ರ ಎಲ್ಲರಲ್ಲೂ ಕಣ್ಣೀರು ತರಿಸುತ್ತಿದೆ.
undefined
ಅಂದಹಾಗೆ, ಮೃತ ಲಕ್ಷ್ಮೀ ನಾರಾಯಣ ನಾಯ್ಕ್ ಅವರಿಗೆ ಅನಂತ ನಾರಾಯಣ ನಾಯ್ಕ್, ಲಕ್ಷ್ಮೀ, ಈಶ್ವರ ನಾರಾಯಣ ನಾಯ್ಕ್, ಮಾಧವಿ ಸಂತೋಷ್ ಪೂಜಾರ್ ನಾಲ್ವರು ಮಕ್ಕಳು. ಇವರ ಪೈಕಿ ಈಶ್ವರ ಹಾಗೂ ಮಾಧವಿ ಮದುವೆಯಾಗಿ ಬೇರೆ ಮನೆಯಲ್ಲಿದ್ದರೆ, ಅನಂತ ಹಾಗೂ ಲಕ್ಷ್ಮೀ ಇದೇ ಮನೆಯಲ್ಲಿದ್ದರು. ಅಲ್ಲದೇ, ಜೀವನಕ್ಕಾಗಿ ಅನಂತ ಕಾಂಕ್ರೀಟ್ ಹಾಗೂ ಇತರ ಕೂಲಿ ಕೆಲಸ ಮಾಡಿದ್ರೆ, ಲಕ್ಷ್ಮೀ ನಾಯ್ಕ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ತಾಯಿ ಲಕ್ಷ್ಮೀ ನಾರಾಯಣ ನಾಯ್ಕ್ ವೃದ್ಧೆಯಾಗಿರೋದ್ರಿಂದ ಮನೆಯಲ್ಲಿದ್ದರು. ಆದರೆ, ದುರ್ಘಟನೆಯಲ್ಲಿ ಈ ಮೂವರು ದಾರುಣವಾಗಿ ಸಾವಿಗೀಡಾಗಿದ್ದಾರೆ.
ಇನ್ನು ಭಟ್ಕಳ ಹಾಡುವಳ್ಳಿ ಬಡಬಾಗಿಲಿನ ನಿವಾಸಿ ಮೃತ ಯುವಕ ಪ್ರವೀಣನ ಕುಟುಂಬದ ಕಥೆಯಂತೂ ಮತ್ತಷ್ಟು ನೋವಿನಿಂದ ಕೂಡಿದೆ. ಎಸ್ಎಸ್‌ಎಲ್‌ಸಿ ಮುಗಿಸಿ ಐಟಿಐ ಸೇರಿಕೊಂಡಿದ್ದ ಪ್ರವೀಣ (16) ಶ್ರಮಜೀವಿಯಾಗಿದ್ದ. ಈತನ ಪೋಷಕರು ವೃದ್ಧರಾಗಿದ್ದು, ತಾಯಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಂದೆಗೂ ವಯಸ್ಸಾಗಿರೋದ್ರಿಂದ ಹೆಚ್ಚು ದುಡಿದು ಕುಟುಂಬ ಸಾಕೋದು ಅಸಾಧ್ಯ. ಈ ಕಾರಣದಿಂದ ಕಾಲೇಜಿಗೆ ಹೋಗುತ್ತಾ ಸಂಜೆ ಹಾಗೂ ಲಭ್ಯ ಸಮಯಗಳಲ್ಲಿ ಬೇಕರಿ ಹಾಗೂ ಇತರೆಡೆ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಪ್ರವೀಣ, ಕುಟುಂಬವನ್ನು ನೋಡಿಕೊಳ್ಳುತ್ತಿದ್ದನಲ್ಲದೇ, ದುಡಿದ ಹಣದಲ್ಲಿ ತನ್ನ ಕಾಲೇಜು ಫೀಸ್ ಅನ್ನು ತಾನೇ ಭರಿಸಿದ್ದ. ಅಲ್ಲದೇ, ತನ್ನ ಸಹೋದರಿಯ ಶಿಕ್ಷಣ ವೆಚ್ಚವನ್ನು ಕೂಡಾ ಭರಿಸಿ ತಾನೇ ಖುದ್ದಾಗಿ ನಿಂತು ಸಹೋದರಿಯನ್ನು ಉತ್ತಮ ಶಾಲೆಗೆ ಸೇರಿಸುವ ಮೂಲಕ ಆಕೆಗೆ ಒಳ್ಳೆಯ ವಿದ್ಯಾಭ್ಯಾಸ ದೊರೆಯುವಂತೆ ನೋಡಿಕೊಂಡಿದ್ದ. ಆದರೆ, ಮುಟ್ಟಳ್ಳಿಯಿಂದಲೇ ಕಾಲೇಜಿಗೆ ತೆರಳುತ್ತಿದ್ದ ಪ್ರವೀಣ, ದುರ್ಘಟನೆ ನಡೆಯೋ ಹಿಂದಿನ ದಿನ ತನ್ನ ಪೋಷಕರು ಇರೋ ಮನೆಗೆ ತೆರಳಲು ಇಚ್ಛಿಸಿದ್ದ. ಆದರೆ, ಮಳೆಯ ಕಾರಣ ತನ್ನ ಮನೆಗೆ ಹೋಗಲಾಗದ್ದರಿಂದ ಮರುದಿನ ಹೋಗಬಹುದು ಎಂದು ನಿರ್ಧರಿಸಿದ್ದ ಎನ್ನಲಾಗಿದೆ. ರಾತ್ರಿ ಕುಟುಂಬಸ್ಥರ ಜತೆ ಮಲಗಿದ್ದ ಪ್ರವೀಣ ಬೆಳಗಾಗೋದ್ರೊಳಗೆ ಗುಡ್ಡ ಕುಸಿದ ಕಾರಣ ಮನೆಯೊಳಗೆ ಸಿಲುಕಿಕೊಂಡು ಕುಟುಂಬಸ್ಥರ ಜತೆಯೇ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗನನ್ನು ನೆನೆದು ಪೋಷಕರು ಕಣ್ಣೀರು ಹಾಕುತ್ತಿದ್ದು, ತಮ್ಮ ಜೀವನದ ಆಧಾರ ಸ್ತಂಭವೇ ಇಲ್ಲದಂತಾಗಿದೆ ಎಂದು ನೋವು ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಕಷ್ಟ ಪಟ್ಟು ಜೀವನ ಸಾಗಿಸುತ್ತಿದ್ದ ನಾಲ್ವರು ಗುಡ್ಡ ಕುಸಿತದಿಂದ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಿಂದ ಒಂದು ಕುಟುಂಬ ತಾಯಿ, ಸಹೋದರ- ಸಹೋದರಿಯನ್ನು ಕಳೆದುಕೊಂಡರೆ, ಇನ್ನೊಂದು ಕುಟುಂಬ ತಮ್ಮ ಪುತ್ರನನ್ನು ಕಳೆದುಕೊಳ್ಳುವ ಮೂಲಕ ಕುಟುಂಬದ ಆಧಾರ ಸ್ತಂಭವೇ ಇಲ್ಲದಂತಾಗಿದೆ. ಸರಕಾರ ಮಾನವೀಯತೆಯ ದೃಷ್ಠಿಯಿಂದ ಪ್ರಸ್ತುತ ನೀಡಿರುವ ಪರಿಹಾರಕ್ಕಿಂತಲೂ ಹೆಚ್ಚಿನ ಪರಿಹಾರ ಒದಗಿಸಿ ಆಧಾರ ತಪ್ಪಿರುವ ಕುಟುಂಬಗಳಿಗೆ ಮತ್ತೆ ಆಧಾರವಾಗಬೇಕಿದೆ.
ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ