Halakki Community: ಶಾಸಕಿ ರೂಪಾಲಿ ಮನವಿಗೆ ಅಮಿತ್‌ ಶಾ ಸ್ಪಂದನೆ

By Kannadaprabha News  |  First Published Dec 18, 2021, 6:44 AM IST

*  ಮನವಿ ಪರಿಶೀಲನೆ ಬಗ್ಗೆ ಅಮಿತ್‌ ಶಾ ಪತ್ರ
*  ಪರಿಶಿಷ್ಟ ಪಂಗಡಕ್ಕೆ ಹಾಲಕ್ಕಿ ಒಕ್ಕಲಿಗರ ಸೇರ್ಪಡೆಗೆ ಕ್ರಮ
*  ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದ್ದ ರೂಪಾಲಿ


ಕಾರವಾರ(ಡಿ.18): ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದು, ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಸೇರಿದಂತೆ ಶಾಸಕಿ ರೂಪಾಲಿ ನಾಯ್ಕ(Roopali Naik) ಅವರ ಬೇಡಿಕೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಪೂರಕವಾಗಿ ಸ್ಪಂದಿಸಿದ್ದಾರೆ. ಈಚೆಗೆ ಗೋವಾಕ್ಕೆ(Goa) ಆಗಮಿಸಿದ್ದ ಅಮಿತ್‌ ಶಾ ಅವರನ್ನು ಭೇಟಿಯಾದ ಕಾರವಾರ ಅಂಕೋಲಾ(Karwar-Ankola) ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದ್ದರು.

ಶಾಸಕರು ನೀಡಿದ ಮನವಿಯನ್ನು ಅಮಿತ್‌ ಶಾ ಸಂಬಂಧಪಟ್ಟ ಸಚಿವಾಲಯಕ್ಕೆ ಸೂಕ್ತ ಕ್ರಮಕ್ಕಾಗಿ ಕಳುಹಿಸಿದ್ದಾರೆ. ಆದರೆ ಹಾಲಕ್ಕಿ ಒಕ್ಕಲಿಗರನ್ನು(Halakkai Okkaliga) ಪರಿಶಿಷ್ಟ ಪಂಗಡಕ್ಕೆ(Scheduled Tribe) ಸೇರ್ಪಡೆ ಮಾಡುವ ಮನವಿಯ ಬಗ್ಗೆ ಸ್ವತಃ ಅಮಿತ್‌ ಶಾ ಕ್ರಮ ಕೈಗೊಳ್ಳಲಿದ್ದಾರೆ.

Latest Videos

undefined

Kashi Corridor Project Master Mind: ಗೋಕರ್ಣಕ್ಕೆ ಕಾಶಿ ಕಾರಿಡಾರ್ ರೂವಾರಿ ನಿತಿನ್ ಭೇಟಿ

ಪರಿಶಿಷ್ಟ ಪಂಗಡಕ್ಕೆ ಹಾಲಕ್ಕಿ ಒಕ್ಕಲಿಗರ ಸೇರ್ಪಡೆಗೆ ಕ್ರಮ:

ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆನ್ನುವುದು ಸುಮಾರು 1.50 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಹಾಲಕ್ಕಿ ಒಕ್ಕಲಿಗರ ಬಹುಕಾಲದ ಬೇಡಿಕೆಯಾಗಿದೆ. ಪದ್ಮಶ್ರೀ ಸುಕ್ರಿ ಗೌಡ ಹಾಗೂ ಪದ್ಮಶ್ರೀ ತುಳಸಿ ಗೌಡ ಇದೆ ಸಮುದಾಯದಿಂದ ಬಂದು ನಾಡಿಗೆ, ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ. ಹಾಲಕ್ಕಿ ಒಕ್ಕಲಿಗರ ಬಗ್ಗೆ ಈಗಾಗಲೇ ವೈಜ್ಞಾನಿಕ ಅಧ್ಯಯನ ನಡೆಸಲಾಗಿದೆ. ಇವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ(Central Government) ಶಿಫಾರಸನ್ನೂ ಮಾಡಲಾಗಿದೆ. ಹಾಲಕ್ಕಿ ಒಕ್ಕಲಿಗರ ಈ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಕ್ರಮ ಕೈಗೊಳ್ಳುವಂತೆ ರೂಪಾಲಿ ನಾಯ್ಕ ಮನವಿ ಮಾಡಿದ್ದರು. ಈ ಬೇಡಿಕೆಗೆ ಸ್ಪಂದಿಸಿರುವ ಅಮಿತ್‌ ಶಾ ಈ ಬೇಡಿಕೆಯ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಶಾಸಕರಿಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಸೂಕ್ತ ಕ್ರಮಕ್ಕೆ ವಿವಿಧ ಇಲಾಖೆಗೆ ಶಾ ಪತ್ರ:

ಕರಾವಳಿಯ(Coastal) ಪ್ರದೇಶದ ಅಭಿವೃದ್ಧಿಯ ಬಾಗಿಲು ತೆರೆಯುವ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ(Hubballi-Ankola Railway Line) ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂಬ ರೂಪಾಲಿ ನಾಯ್ಕ ಅವರ ಬೇಡಿಕೆಯ ಪತ್ರವನ್ನು ಶಾ ರೈಲ್ವೆ ಇಲಾಖೆಗೆ(Department of Railways) ಕ್ರಮ ಕೈಗೊಳ್ಳಲು ಕಳುಹಿಸಿದ್ದಾರೆ. ಸೀಬರ್ಡ್‌ ನಿರಾಶ್ರಿತರ ಪ್ರತಿ ಕುಟುಂಬಕ್ಕೊಂದು ಉದ್ಯೋಗ, ಸೀಬರ್ಡ್‌(Seabird) ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರೆಂದು ಪರಿಗಣಿಸಿ ಸೌಲಭ್ಯ, ಉದ್ಯೋಗ(Job), ಸಹಾಯ ಕಲ್ಪಿಸಬೇಕು. ನೌಕಾನೆಲೆಯಲ್ಲಿ ಶಿಪ್‌ ಯಾರ್ಡ್‌ ನಿರ್ಮಿಸಿ, ನೌಕಾನೆಲೆಗೆ ಅಗತ್ಯ ಉಪಕರಣಗಳ ತಯಾರಿಕೆಗೆ ಪೂರಕ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂಬ ಮನವಿಯನ್ನು ಅಮಿತ್‌ ಶಾ ಸೂಕ್ತ ಕ್ರಮಕ್ಕಾಗಿ ರಕ್ಷಣಾ ಇಲಾಖೆಗೆ ಕಳುಹಿಸಿದ್ದಾರೆ.

ಹಾಲಕ್ಕಿಗಳ ಪ. ಪಂಗಡಕ್ಕೆ ಸೇರ್ಪಡೆಗೆ ಅಮಿತ್‌ ಶಾಗೆ ಆಗ್ರಹಿಸಿದ ರೂಪಾಲಿ

ಹಿಂದುಳಿದ ಗಡಿ ಪ್ರದೇಶವಾದ ಕ್ಷೇತ್ರದಲ್ಲಿ ಸ್ಥಾಪನೆಯಾಗುವ ಕೈಗಾರಿಕಾ ಘಟಕಗಳಿಗೆ ಮಾರಾಟ ಹಾಗೂ ವಾಣಿಜ್ಯ ತೆರಿಗೆಯಿಂದ ವಿನಾಯಿತಿ ನೀಡುವ ಮನವಿಯನ್ನು ಹಣಕಾಸು ಇಲಾಖೆಗೆ ಕಳುಹಿಸಿದ್ದಾರೆ. ಅಂಕೋಲಾ ಹುಬ್ಬಳ್ಳಿ ಚತುಷ್ಪಥ ರಸ್ತೆ ನಿರ್ಮಾಣವಾಗಬೇಕೆಂಬ ಶಾಸಕರ ಮನವಿಯನ್ನು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯಕ್ಕೆ ಕಳುಹಿಸಿದ್ದಾರೆ. ಸಂಬಂಧಪಟ್ಟಇಲಾಖೆಗಳಿಗೆ ಸೂಕ್ತ ಕ್ರಮಕ್ಕಾಗಿ ಪತ್ರ ಕಳುಹಿಸಿರುವುದನ್ನೂ ಅಮಿತ್‌ ಶಾ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಹಾಲಕ್ಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ನನ್ನ ಬಹುದೊಡ್ಡ ಕನಸಾಗಿದೆ. ಈ ನ್ಯಾಯಯುತ ಬೇಡಿಕೆ ಬಗ್ಗೆ ಅಮಿತ್‌ ಶಾ ಅವರಿಗೆ ಮನವಿ ಮಾಡಿದ್ದು, ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಸೇರಿದಂತೆ ಎಲ್ಲ ಬೇಡಿಕೆಗಳಿಗೆ ಅಮಿತ್‌ ಶಾ ಸ್ಪಂದಿಸಿ, ಸಂಬಂಧಪಟ್ಟ ಸಚಿವಾಲಯಕ್ಕೆ ಸೂಕ್ತ ಕ್ರಮಕ್ಕಾಗಿ ಪತ್ರ ಕಳುಹಿಸಿದ್ದಾರೆ. ಈ ಎಲ್ಲ ಭರವಸೆಗಳೂ ಈಡೇರುವ ಬಗ್ಗೆ ವಿಶ್ವಾಸವಿದೆ ಅಂತ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ಎಸ್‌. ನಾಯ್ಕ ತಿಳಿಸಿದ್ದಾರೆ.  
 

click me!