ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೆ ತರುವುದಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದು, ಎಷ್ಟೇ ಕಷ್ಟವಾದರೂ ಅದನ್ನು ಜಾರಿಗೆ ತಂದೇ ತೀರುತ್ತೇವೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ತಿಳಿಸಿದ್ದಾರೆ.
ತುಮಕೂರು : ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೆ ತರುವುದಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದು, ಎಷ್ಟೇ ಕಷ್ಟವಾದರೂ ಅದನ್ನು ಜಾರಿಗೆ ತಂದೇ ತೀರುತ್ತೇವೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ತಿಳಿಸಿದ್ದಾರೆ.
ನಗರದ ಎಂಪ್ರೆಸ್ ಕಾಲೇಜು ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಮಾದಿಗ ಬಳಗದಿಂದ ಆಯೋಜಿಸಿದ್ದ ಸಮುದಾಯದ ಸಚಿವರು, ಜಿಲ್ಲೆಯ ಸಚಿವರು ಹಾಗೂ ಶಾಸಕರುಗಳಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ, ನ್ಯಾ.ಎ.ಜೆ.ಸದಾಶಿವ ಆಯೋಗ ರಚಿಸಿದ್ದು, ೨೦೨೩ರ ಚುನಾವಣೆ ಕಾಂಗ್ರೆಸ್ ಪಕ್ಷದ ಪ್ರಾಣಾಳಿಕೆಯ ಅಧ್ಯಕ್ಷರಾಗಿದ್ದ ಡಾ. ಜಿ.ಪರಮೇಶ್ವರ್ ಒಳಮೀಸಲಾತಿ ಜಾರಿ ವಿಚಾರ ಸೇರಿಸಿದ್ದಾರೆ. ಹಾಗಾಗಿ, ಅದನ್ನು ಶೇ100 ಕ್ಕೆ ನೂರರಷ್ಟು ಜಾರಿಗೆ ಸಿದ್ದ ಎಂದರು.
ಚುನಾವಣೆಯ ನಂತರ ಗೆದ್ದ ಶಾಸಕರಿಗೆ ಜವಾಬ್ದಾರಿ ಜ್ಞಾಪಿಸುತ್ತಿರುವ ಈ ಅಭಿನಂದನಾ ಕಾರ್ಯಕ್ರಮ ನಿಜಕ್ಕೂ ಮೆಚ್ಚುವಂತಹದ್ದು, ದಲಿತ ಸಮುದಾಯ ಎಚ್ಚೆತ್ತುಕೊಂಡಿರುವುದಕ್ಕೆ ಸಾಕ್ಷಿ ಎಂದ ಅವರು, ಅಭಿವೃದ್ದಿಯ ಕೀಲಿ ಕೈ ಆಗಿರುವ ರಾಜಕೀಯ ಅಧಿಕಾರ ಇಂದು ಎಲ್ಲರಿಗೂ ಅಗತ್ಯ.ಶಾಸನ ಮಾಡುವ ಜಾಗದಲ್ಲಿ ಶೋಷಿತರು ಇದ್ದಾಗ ಮಾತ್ರ, ಆ ಸಮುದಾಯಗಳಿಗೆ ನ್ಯಾಯ ಒದಗಿಸಲು ಸಾಧ್ಯ. ಹಾಗಾಗಿ, ಕೆಲಸ ಮಾಡುವವರನ್ನು ಆಯ್ಕೆ ಮಾಡಿ, ದಲಿತರು ರಾಜಕೀಯ ಜ್ಞಾನ ಬೆಳೆಸಿಕೊಂಡು, ಮತದ ಮೌಲ್ಯ ಅರಿತರೆ, ಭ್ರಷ್ಟಾಚಾರ ಮುಕ್ತ ಚುನಾವಣೆ ಸಾಧ್ಯ ಎಂದು ಆರ್.ಬಿ.ತಿಮ್ಮಾಪುರ್ ನುಡಿದರು.
ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಶೋಷಿತ ಸಮುದಾಯ ಸಂಘಟನೆ ಕೇವಲ ಜಿಲ್ಲಾ ಮಟ್ಟಕ್ಕೆ ಸೀಮಿತವಾಗಬಾರದು ತಾಲೂಕು ಮಟ್ಟಕ್ಕೂ ಮುಟ್ಟಬೇಕು. ಇಂದು ನಾವೆಲ್ಲರೂ ಮತದಾನದ ಹಕ್ಕು ಪಡೆಯುತಿದ್ದರೆ ಅದಕ್ಕೆ ಕಾರಣ ಅಂಬೇಡ್ಕರ್, ದಲಿತರ ಸಮಸ್ಯೆಯನ್ನು ನಾನು ಬಾಲ್ಯದಿಂದಲೂ ನೋಡಿದ್ದೇನೆ. ಆದರೆ, ಪರಿಸ್ಥಿತಿ ಕೊಂಚ ಬದಲಾವಣೆಯಿದೆ. ಒಗ್ಗಟ್ಟಿನ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಒಳಮೀಸಲಾತಿಯ ಬಗ್ಗೆ ಪ್ರಾಣಾಳಿಕೆಯಲ್ಲಿ ಉಲ್ಲೇಖವಿದೆ. ಆ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ಮೀಸಲಾತಿ ನಮ್ಮೆಲ್ಲರ ಹಕ್ಕು, ನ್ಯಾಯ ದೊರಕಿಸಿಕೊಡಲು ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಅಂಬೇಡ್ಕರ್ ಹೇಳಿರುವಂತೆ ಹೋರಾಟ ನಿರಂತರ. ಆದರೆ, ಅದು ಸನ್ಮಾರ್ಗದಲ್ಲಿ ಇರಬೇಕು. ಮುಂದುವರೆದ ಸಮಾಜಗಳ ರೀತಿ ಬೆಳೆದು ಮುಖ್ಯವಾಹಿನಿಗೆ ಬರಲು ಪ್ರಯತ್ನ ನಡೆಸಬೇಕಿದೆ. ಚಿತ್ರದುರ್ಗದ ಐಕ್ಯತಾ ಸಮಾವೇಶದಲ್ಲಿ ನೀಡಿದ ಭರವಸೆಯಂತೆ ಒಳಮೀಸಲಾತಿ ಜಾರಿಗೆ ಬದ್ದರಾಗಿದ್ದೇವೆ. ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಮಾತನಾಡಿದ್ದು, ಯಾವ ವರ್ಗಕ್ಕೂ ಅನ್ಯಾಯವಾಗದಂತೆ ನ್ಯಾಯ ಒದಗಿಸಲು ಮುಂದಿನ ದಿನಗಳಲ್ಲಿ ಸದನದಲ್ಲಿ ಮಂಡನೆಯಾಗಲಿದೆ. ಇದರ ಬಗ್ಗೆ ಸಂಶಯ ಬೇಡ ಎಂದರು.
ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಬೇಕಾದರೆ ಸಂವಿಧಾನ ಒಂದರಿಂದಲೇ ಸಾಧ್ಯ. ಮುಂದಿನ ಚುನಾವಣೆಯ ಫಲಿತಾಂಶ ಸಂವಿಧಾನದ ಉಳಿವು, ಅಳಿವಿನ ಮೇಲೆ ನಿಂತಿದೆ. ಈಗ ಮೈಮರೆತರೆ ಭವಿಷ್ಯದ ದಿನಗಳು ಘೋರ ಅನಿಸಲಿವೆ. ಹಾಗಾಗಿ, ನಾವೆಲ್ಲರೂ ಎಚ್ಚೆತ್ತುಕೊಂಡು ಒಗ್ಗೂಡಬೇಕಿದೆ. ಜಿಲ್ಲೆಯ ವಿವಿಧ ಸಮಿತಿಗಳಲ್ಲಿ ಸಮುದಾಯದ ಯುವಕರಿಗೆ ಆದ್ಯತೆ ನೀಡಬೇಕೆಂದು ಕೆ.ಎನ್.ರಾಜಣ್ಣ ಅವರಲ್ಲಿ ಮನವಿ ಮಾಡಿದ ಮುನಿಯಪ್ಪ, ನೀವು ಯುವಕರ ಕೈ ಹಿಡಿದರೆ, ಯುವ ಸಮುದಾಯ ನಿಮ್ಮ ಕೈ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೋಡಿಯಾಲ ಮಹದೇವ್, ಮಾದಿಗ ಸಮುದಾಯ ಕೇವಲ ಮತ ಬ್ಯಾಂಕ್ ಆಗಿ ಮಾತ್ರ ಕೆಲಸ ಮಾಡದೆ, ರಾಜಕೀಯ ಅಧಿಕಾರ ದೊರೆಯಬೇಕು ಎಂಬಲ್ಲಿ ಸಮುದಾಯದ ಸಚಿವರ ಜೊತೆಗೆ, ಜಿಲ್ಲೆಯ ಸಚಿವರು, ಶಾಸಕರಿಗೆ ಸನ್ಮಾನ ಏರ್ಪಡಿಸಿ, ಹೋರಾಟಗಾರರಿಗೆ ಆದ್ಯತೆ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದೇವೆ. ಚುನಾವಣೆ ವೇಳೆ ಮನೆ ಮನೆಗೆ ಪ್ರಚಾರ ಮಾಡಿದ ನಮಗೂ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಬೇಕೆಂಬುದು ಜಿಲ್ಲಾ ಮಾದಿಗ ಬಳಗದ ಮನವಿಯಾಗಿದೆ ಎಂದರು.
ಶಾಸಕ ಟಿ.ಬಿ.ಜಯಚಂದ್ರ, ಕೆಪಿಸಿಸಿ ವಕ್ತಾರ ನಿಕೇತ್‌ರಾಜ್ ಮೌರ್ಯ, ಶಾಸಕರಾದ ಹೆಚ್.ಡಿ. ರಂಗನಾಥ್, ಕೆ.ಷಡಕ್ಷರಿ, ಜೋತಿಗಣೇಶ್, ಮಾಜಿ ಶಾಸಕ ಗಂಗಹನುಮಯ್ಯ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ಡಿ.ಟಿ.ವೆಂಕಟೇಶ್, ಲಿಡ್ಕರ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ, ವಾಲೆಚಂದ್ರಯ್ಯ,ಎಂ.ವಿ.ರಾಘವೇಂದ್ರ ಸ್ವಾಮಿ, ಕೊಟ್ಟ ಶಂಕರ್,ಇಕ್ಬಾಲ್ ಅಹಮದ್, ತುಮಕೂರು ಜಿಲ್ಲಾ ಮಾದಿಗ ಬಳಗದ ಅಧ್ಯಕ್ಷ ಕೋಡಿಯಾಲ ಮಹದೇವ್, ಕಾರ್ಯಾಧ್ಯಕ್ಷ ಬಂಡೆಕುಮಾರ್, ಉಪಾಧ್ಯಕ್ಷ ಟಿ.ಸಿ.ರಾಮಯ್ಯ, ಡಾ.ಸಿದ್ದಾಪುರ ರಂಗಶಾಮಣ್ಣ, ಪಾವಗಡ ರಾಮಾಂಜಿ, ನಾಗರಾಜು ಗೂಳರಿವೆ ವೇದಿಕೆಯಲ್ಲಿದ್ದರು
ಸಚಿವರಾದ ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಕೆ.ಎನ್.ರಾಜಣ್ಣ ಹಾಗೂ ಜಿಲ್ಲೆಯ ಶಾಸಕರನ್ನು ಅಭಿನಂದಿಸಲಾಯಿತು. ಅಲ್ಲದೆ ಅತಿ ಹೆಚ್ಚು ಅಂಕ ಪಡೆದ ಮಾದಿಗ ಸಮುದಾಯದ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಯಿತು.