ಬೆಂಗ್ಳೂರಲ್ಲಿ ರಸ್ತೆ ಬದಿ ಅನಧಿಕೃತ ಪ್ರತಿಮೆ ಶೀಘ್ರ ತೆರವು: ಬಿಬಿಎಂಪಿ

By Kannadaprabha NewsFirst Published Sep 2, 2021, 2:19 PM IST
Highlights

* ಹೈಕೋರ್ಟ್‌ ಸೂಚನೆ ಹಿನ್ನೆಲೆ 
* ಪ್ರತಿಮೆಗಳ ಸರ್ವೇ ಕಾರ್ಯ ಆರಂಭಿಸಿದ ಪಾಲಿಕೆ
* ಪಾಲಿಕೆ ಅನುಮತಿ ಪಡೆಯದೆ ಸ್ಥಾಪಿಸಿರುವ ಪುತ್ಥಳಿ ತೆರವಿಗೆ ಪೂರ್ವಸಿದ್ಧತೆ 
 

ಬೆಂಗಳೂರು(ಸೆ.02): ರಾಜ್ಯ ಹೈಕೋರ್ಟ್ ಸೂಚನೆ ಮೇರೆಗೆ ನಗರದಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪಿಸಿರುವ ಪ್ರತಿಮೆ ಮತ್ತು ಧ್ವಜ ಕಂಬಗಳನ್ನು ತೆರವುಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸರ್ವೆ ಕಾರ್ಯ ಆರಂಭಿಸಿದೆ.

ನಗರದ ವಿವಿಧ ಬಡಾವಣೆಗಳಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪನೆ ಮಾಡಿರುವ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಬಸವಣ್ಣ ಸೇರಿದಂತೆ ಕೆಲ ಮಹಾನ್ ನಾಯಕರ ಮತ್ತು ಬಾವುಟ ಕಂಬಗಳು ಸಾಕಷ್ಟು ಇವೆ. ಬಿಬಿಎಂಪಿ ಅನುಮತಿ ಪಡೆದು ಪ್ರತಿಷ್ಠಾಪಿಸಿರುವ ಪ್ರತಿಮೆಗಳನ್ನು ಹೊರತುಪಡಿಸಿ ಉಳಿದ ಪ್ರತಿಮೆ, ಧ್ವಜಕಂಬಗಳು ಎಷ್ಟೆಷ್ಟು ಇವೆ ಎಂಬುದರ ಪತ್ತೆ ಕಾರ್ಯವನ್ನು ವಲಯಗಳ ಜಂಟಿ ಆಯುಕ್ತರು ಪ್ರಾರಂಭಿಸಿದ್ದಾರೆ. 

ಈಗಾಗಲೇ ಬಿಬಿಎಂಪಿ ಕಾವೇರಿನಗರ ಪಾರ್ಕ್, ಪಟ್ಟೇಗಾರ್‌ಪಾಳ್ಯ, ಶಿವನಹಳ್ಳಿ ಮುಖ್ಯರಸ್ತೆ, ಚೋಳರಪಾಳ್ಯ, ಬಳೇಪೇಟೆ ವೃತ್ತ, ಎಂ.ಸಿ. ಲೇಔಟ್, ವಿಜಯನಗರ ಉಪ ನೋಂದಣಾಧಿಕಾರಿ ಕಚೇರಿ ಸಮೀಪ, ಶೇಷಾದ್ರಿಪುರದ ದತ್ತಾತ್ರೇಯ ರಸ್ತೆ, ಮಾಗಡಿ ರಸ್ತೆಯ ಕೆಂಪಾಪುರ ಅಗ್ರಹಾರ, ಟಿಸಿಎಂ ರಾಯನ್ ವೃತ್ತ, ಟಿ.ಆರ್.ಮಿಲ್ ವೃತ್ತ, ಅಕ್ಕಿಪೇಟೆ ವೃತ್ತ ಸಮೀಪ, ಮಂಜುನಾಥ್ ನಗರ ವೃತ್ತ, ಬಾಷ್ಯಂ ವೃತ್ತ, ಮಂಜುನಾಥ ನಗರ ಮುಖ್ಯರಸ್ತೆ, ಗಾಂಧಿನಗರ ಪಾರ್ಕ್ ರಸ್ತೆ, ಮಾಗಡಿ ರಸ್ತೆ ದಾಸರಹಳ್ಳಿ, ಶೇಷಾದ್ರಿಪುರಂ ವೃತ್ತ, ಪೈಪ್ ಲೈನ್ ವಿಜಯನಗರ, ವಿಜಯನಗರ ಸಮೀಪದ ಟೋಲ್ ಗೇಟ್ ವೃತ್ತ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪಿಸಿರುವ ಪ್ರತಿಮೆಗಳ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಬಿಬಿಎಂಪಿ ಅನಧಿಕೃತ ಪುತ್ಥಳಿಗಳ ತೆರವು: ನಟ ಅನಿರುದ್ಧ ಪ್ರತಿಕ್ರಿಯೆ

ಸೆ.2ಕ್ಕೆ ವರದಿ ನೀಡಲು ಸೂಚನೆ: 

ರಾಜ್ಯ ಹೈಕೋರ್ಟ್‌ಗೆ ಸುರೇಶ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದರು. ಅನಧಿಕೃತವಾಗಿ ರಸ್ತೆ, ಫುಟ್ ಪಾತ್, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿರುವ ಪ್ರತಿಮೆ ಮತ್ತು ಧ್ವಜಕಂಬ ತೆರವುಗೊಳಿಸುವಂತೆ ಮನವಿ ಮಾಡಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪಿಸಿ ರುವ ಪ್ರತಿಮೆಗಳು ಧ್ವಜಕಂಬಗಳನ್ನು ತೆರವುಗೊಳಿಸಿ ಸೆ.2ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರು ಮತ್ತು ಬಿಬಿಎಂಪಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅನಧಿಕೃತ ಪ್ರತಿಮೆಗಳ ಸರ್ವೆ ಕಾರ್ಯ ಮುಗಿದ ಕೂಡಲೇ ಪುತ್ಥಳಿಗಳು ಮತ್ತು ಅನಧಿಕೃತ ಪ್ರತಿಮೆಗಳನ್ನು ತೆರವು ಕಾರ್ಯಾಚರಣೆ ಆರಂಭಗೊಳ್ಳಲಿದೆ.

ಬಿಬಿಎಂಪಿ ಪಾಲಿಗೆ ಬಿಸಿತುಪ್ಪ !

ಹೈಕೋರ್ಟ್ ಪಾಲಿಕೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣ್ಯರ ಅನಧಿಕೃತ ಪ್ರತಿಮೆಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿರುವುದು ಬಿಬಿಎಂಪಿ ಅಧಿಕಾರಿಗಳಿಗೆ ನುಂಗಲಾರದ ತುಪ್ಪದಂತಾಗಿದೆ.
ಚಿತ್ರ ನಟರಾದ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರನಾಗ್, ಜ್ಞಾನಯೋಗಿ ಬಸವಣ್ಣ ಸೇರಿದಂತೆ ವಿವಿಧ ಮಹಾನುಭಾವರ ಪುತ್ಥಳಿಗಳನ್ನು ಬಡಾವಣೆಗಳ ವೃತ್ತಗಳಲ್ಲಿ ಅವರ ಅಭಿಮಾನಿಗಳು ಕಳೆದ ಹತ್ತಿಪ್ಪತ್ತು ವರ್ಷಗಳ ಹಿಂದೆಯೇ ಪ್ರತಿಷ್ಠಾಪನೆ ಮಾಡಿದ್ದಾರೆ. ಇದೀಗ ನ್ಯಾಯಾಲಯ ಅನಧಿಕೃತ ಪ್ರತಿಮೆಗಳ ತೆರವಿಗೆ ಸೂಚನೆ ನೀಡಿದ್ದು ಅಭಿಮಾನಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

ಬಿಬಿಎಂಪಿಯಿಂದ ಅನುಮತಿ ಪಡೆಯದೆ ಪ್ರತಿಷ್ಠಾಪಿಸಿರುವ ಪುತ್ಥಳಿಗಳ ಸರ್ವೇ ಕಾರ್ಯ ಆರಂಭ ಮಾಡಲಾಗಿದೆ. ಅಲ್ಲದೆ, ಸಂಬಂಧಿಸಿದವರಿಗೆ ನೋಟಿಸ್ ನೀಡಿ, ಅನಧಿಕೃತ ಪ್ರತಿಮೆಗಳ ತೆರವಿಗೆ ಸೂಚಿಸಲಾಗಿದೆ. ವಲಯಗಳ ಜಂಟಿ ಆಯುಕ್ತರು ಇದರ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಹೈಕೋರ್ಟ್‌ ಆದೇಶದ ಜಾರಿಗೆ ಕ್ರಮಕೈಗೊಂಡಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. 
 

click me!