ಜು.6ರಿಂದ ಎಲ್ಲಾ ಖಾಸಗಿ ಶಾಲಾ-ಕಾಲೇಜುಗಳು ಬಂದ್ : ಎಚ್ಚರ!

By Kannadaprabha NewsFirst Published Mar 9, 2020, 1:56 PM IST
Highlights

ಜುಲೈ 6 ರಿಂದ ಖಾಸಗಿ ಶಾಲೆಗಳು ಬಂದ್ ಮಾಡಲು ನಿರ್ಧರಿಸಿದ್ದು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಸಭೆ ನಡೆಸಿ ತೀರ್ಮಾನಿಸಲಾಗಿದೆ. 

ಹುಬ್ಬಳ್ಳಿ [ಮಾ.09]:  ಖಾಸಗಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಸದಿದ್ದರೆ ಜು. 6 ರಿಂದ ಎಲ್ಲ ಖಾಸಗಿ ಶಾಲಾ- ಕಾಲೇಜುಗಳನ್ನು ಬಂದ್ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ನಿರ್ಧರಿಸಿರುವ ಅನುದಾನರಹಿತ ಶಾಲೆಗಳ ಶಿಕ್ಷಕರು ಅದಕ್ಕೂ ಪೂರ್ವದಲ್ಲಿ ಧಾರವಾಡ ಶಿಕ್ಷಣ ಆಯುಕ್ತರ ಕಚೇರಿ ಎದುರು ನಿರಂತರ ಹೋರಾಟ, ಪ್ರಮುಖ ಮಠಾಧೀಶರ ಮೂಲಕವಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲು ನಿರ್ಣಯಿಸಿದರು.

"

ಇಲ್ಲಿನ ಲ್ಯಾಮಿಂಗ್ಟನ್ ಹೈಸ್ಕೂಲ್‌ನಲ್ಲಿ ಕರ್ನಾಟಕ ರಾಜ್ಯ ಖಾಸಗಿ ಆಡಳಿತ ಮಂಡಳಿ ಮತ್ತು ನೌಕರರ ಸಮನ್ವಯ ರಾಜ್ಯ ಹೋರಾಟ ಸಮಿತಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ನೌಕರರ ಒಕ್ಕೂಟ ನಡೆಸಿದ ಪೂರ್ವಭಾವಿ ಸಭೆಯಲ್ಲಿ ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಈ ನಿರ್ಧಾರ ಪ್ರಕಟಿಸಿದರು. 

ಬಜೆಟ್‌ನಲ್ಲಿ ಖಾಸಗಿ ಶಾಲೆಗಳಿಗೆ ಅನುದಾನ ನೀಡುವ ಕುರಿತಂತೆ ಸರ್ಕಾರ ಯಾವುದೆ ನಿರ್ಧಾರ ಕೈಗೊಳ್ಳದಿರುವುದು ಬೇಸರ ಮೂಡಿಸಿದೆ. ಹೀಗಾಗಿ ಪ್ರಸ್ತುತ ಹೋರಾಟ ಮಾರ್ಗ ಮಾತ್ರ ನಮ್ಮ ಮುಂದಿದೆ. ಮಾ. 16 ರಿಂದ 24 ರ ವರೆಗೆ ವಿವಿಧ ಜಿಲ್ಲೆಗಳಿಂದ ಧಾರವಾಡದ ಶಿಕ್ಷಣ ಆಯುಕ್ತರ ಕಚೇರಿ ಎದುರು ನಿರಂತರ ಧರಣಿ ನಡೆಸಲಾಗುವುದು. ಈ ಕುರಿತಂತೆ ಅನುದಾನರಹಿತ ಶಾಲಾ ಶಿಕ್ಷಕರ ಸಂಘ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕಿದೆ ಎಂದರು.

ಮಾರ್ಚ್ 9 ರಿಂದ ಬೆಂಗಳೂರಿನ ಪ್ರಿ -ಸ್ಕೂಲ್‌ಗಳಿಗೆ ರಜೆ...

ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಮಾತನಾಡಿ, ಅನುದಾನಿತ ಶಾಲೆಗಳು ಹೋರಾಟಕ್ಕೆ ಬೆಂಬಲ ನೀಡಬೇಕು. ಮಾನವೀಯತೆ ಕಳಕಳಿಯ ಆಧಾರದ ಮೇಲೆ ಸರ್ಕಾರ ಅನುದಾನರಹಿತ ಶಾಲೆಗಳ ಬೇಡಿಕೆ ಈಡೇರಿಸಬೇಕು. ಶಿಕ್ಷಣದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಸರ್ಕಾರ ಬೇಡಿಕೆ ಈಡೇರಿಕೆಗೆ ಮುಂದಾಗಲಿ ಎಂದರು. 

ಮಾಜಿ ಸಂಸದ ಅಮರಸಿಂಹ ಪಾಟೀಲ ಮಾತನಾಡಿದರು. ಸಭೆಯಲ್ಲಿ ನವಲಗುಂದ ಬಸವಲಿಂಗ ಸ್ವಾಮೀಜಿ, ಬೊಮ್ಮನಹಳ್ಳಿ ಶಿವಯೋಗೀಶ್ವರ ಸ್ವಾಮೀಜಿ, ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಹಾಗೂ ಖಾಸಗಿ ಶಾಲಾ ಸಂಘಟನೆಯ ಪದಾಧಿಕಾರಿಗಳಿದ್ದರು.

click me!