
ಬೆಂಗಳೂರು(ಜೂ. 03) ಭಾಷೆ ವಿಚಾರದಲ್ಲಿ ಗೂಗಲ್ ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತದೆ? 'Ugliest language in India' ಎಂಬ ಹುಡುಕಾಟಕ್ಕೆ #Kannada ಎಂದು ಉತ್ತರ ನೀಡುತ್ತಿದ್ದ ವೆಬ್ ಪುಟ ತೆಗೆದು ಹಾಕಲು ಕನ್ನಡಿಗರು ಬಂಡೇಳಬೇಕಾಯ್ತೆ? ಯಾವುದೇ ಭಾಷೆ ವಿರುದ್ಧದ ಇಂಥ ದ್ವೇಷವನ್ನು ಮೊದಲೇ ನಿಯಂತ್ರಿಸಲು Googleಗೆ ಅಸಾಧ್ಯವೇ? ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಗೂಗಲ್ ಮಾಡಿದ ಈ ಪ್ರಮಾದ ಒಪ್ಪುವಂಥದ್ದಲ್ಲ. ಭಾಷೆ ವಿಚಾರದಲ್ಲಿ ಯಾರೇ ಅದರೂ ಇನ್ನು ಮುಂದೆ ಎಚ್ಚರವಾಗಿರಬೇಕು. ಅದರಲ್ಲೂ ಕನ್ನಡದ ವಿಚಾರದಲ್ಲಂತೂ ಎಲ್ಲರೂ ಎರಡು ಪಟ್ಟು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ, ಒಂದೇ ಗಂಟೆಯಲ್ಲಿ ಸೃಷ್ಟಿಯಾದ ಕನ್ನಡಿಗರ ಸ್ವಾಭಿಮಾನದ ಅಲೆ,ಮರುಗಳಿಗೆಯಲ್ಲಿ ಸುನಾಮಿಯಾಗಿ ಪರಿಣಮಿಸಿದರೆ ಅಚ್ಚರಿ ಇಲ್ಲ ಎಂದಿದ್ದಾರೆ.
ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್ ಗೆ ತಕ್ಕ ಶಾಸ್ತಿ
ಇದು ನಿನ್ನ ಭಾಷೆ, ಇದು ದೇಶಭಾಷೆ, ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯಭಾಷೆ, ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿದಾರ್ಶನಿಕರನ್ನೂ ಹಡೆದಿರುವ ಭಾಷೆ ಎಂಬ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ಹಂಚಿಕೊಂಡಿದ್ದಾರೆ.
Ugliest language in Indiaಕ್ಕೆ ಗೂಗಲ್ ಕನ್ನಡ ಎಂಬ ಉತ್ತರ ನೀಡುತ್ತಿದ್ದುದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ತಕ್ಷಣವೇ ಪ್ರತಿಕ್ರಿಯೆ ವ್ಯಕ್ತವಾಗಿ ಗೂಗಲ್ ತನ್ನ ಎಡವಟ್ಟನ್ನು ತಿದ್ದಿಕೊಂಡಿತ್ತು. ಗೂಗಲ್ ವಿರುದ್ಧ ಕಾನೂನು ಸಮರ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.