ಭಾರೀ ಮಳೆಯಿಂದ ತತ್ತರಿಸಿದ್ದ ಉಡುಪಿ ಜನರು ಬದುಕು ಈಗ ಹೇಗಿದೆ. ದಾಖಲೆ ಮಳೆಯಿಂದ ಸಂಪೂರ್ಣ ಮುಳುಗಿ ಹೋಗಿದ್ದ ಉಡುಪಿ ಈಗೇನಾಗಿದೆ..?
ಉಡುಪಿ/ಮಂಗಳೂರು (ಸೆ.22): ಭಾನುವಾರವಷ್ಟೇ ಇತಿಹಾಸದಲ್ಲಿ ಕಂಡು ಕೇಳರಿಯದ ದಾಖಲೆ ಮಳೆಗೆ ಸಾಕ್ಷಿಯಾಗಿದ್ದ ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮಳೆ ಸಂಪೂರ್ಣ ಇಳಿಮುಖವಾಗಿದ್ದು, ಅಸ್ತವ್ಯಸ್ತಗೊಂಡಿದ್ದ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇದೇವೇಳೆ ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆಯಾರ್ಭಟ ಕಡಿಮೆಯಾಗಿದ್ದು ನದಿತೀರ ಪ್ರದೇಶಗಳಲ್ಲಿ ಪ್ರವಾಹ ಇಳಿಮುಖವಾಗಿದೆ.
ಉಡುಪಿ ನಗರವನ್ನು ಕಂಗಾಲು ಮಾಡಿದ್ದ ಪ್ರವಾಹ ಸೋಮವಾರ ಸಂಪೂರ್ಣ ಇಳಿದಿದ್ದು ನೆರೆ ನೀರಿನಿಂದ ಮುಳುಗಿದ್ದ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತೆ ಆರಂಭವಾಗಿದೆ. ಜಿಲ್ಲೆಯ 7 ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 137 ಮಂದಿ ಆಶ್ರಯ ಪಡೆದಿದ್ದಾರೆ. ಉಳಿದಂತೆ 24 ಕಾಳಜಿ ಕೇಂದ್ರಗಳಲ್ಲಿದ್ದ 1064 ಮಂದಿ ತಮ್ಮ ಮನೆಗೆ ಹಿಂತಿರುಗಿದ್ದಾರೆ. ಮನೆಯೊಳಗೆ ನೀರು, ಕೆಸರು ನುಗ್ಗಿ ಆಗಿರುವ ಅವಾಂತರವನ್ನು ಸರಿಪಡಿಸುತಿದ್ದಾರೆ.
ಬೆಳಗಾವಿಯಲ್ಲಿ ಭಾರೀ ಮಳೆ; ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನ ರಕ್ಷಣೆ ..
ಆದರೆ ಗ್ರಾಮೀಣ ಪ್ರದೇಶಗಳ ನದಿ ಪಾತ್ರಗಳಲ್ಲಿ ಪ್ರವಾಹ ಇಳಿಮುಖವಾಗಿದ್ದರೂ, ಅಪಾಯ ಕಡಿಮೆಯಾಗಿಲ್ಲ. ನದಿಗಳು ತುಂಬಿ ಹರಿಯುತ್ತಿರುವುದರಿಂದ ಮತ್ತೆ ಮಳೆಯಾದರೆ ನೀರುಕ್ಕುವ ಆತಂಕ ಇದ್ದೇ ಇದೆ. ಪ್ರಾಥಮಿಕ ವರದಿಯಂತೆ ಜಿಲ್ಲೆಯ ಪ್ರವಾಹಪೀಡಿತ ಉಡುಪಿ, ಬ್ರಹ್ಮಾವರ, ಕಾಪು ಮತ್ತು ಕಾರ್ಕಳ ತಾಲೂಕುಗಳಲ್ಲಿ 1100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ, ಅವುಗಳಲ್ಲಿ 20ಕ್ಕೂ ಹೆಚ್ಚ ಮನೆಗಳು ವಾಸಕ್ಕೆ ಯೋಗ್ಯವಲ್ಲದಷ್ಟುಜಖಂಗೊಂಡಿವೆ. ಕಾಪುವಿನ ಅಲೆವೂರು ಗ್ರಾಮದಲ್ಲಿ ಪಾಪನಾಶಿನಿ ಹೊಳೆಗೆ ಅಡ್ಡಲಾಗಿ ಕಟ್ಟಿರುವ ಮತ್ತು ಉಡುಪಿ- ಪೆರ್ಡೂರು ಹೆದ್ದಾರಿಯಲ್ಲಿ ಹಿರಿಯಡ್ಕ ಬಳಿ ಸ್ವರ್ಣಾ ನದಿಗೆ ಕಟ್ಟಿರುವ 30 ವರ್ಷಗಳಷ್ಟುಹಳೆಯದಾದ ಮಾಣಾಯಿ ಸೇತುವೆ ಮಳೆಗೆ ಶಿಥಿಲಗೊಂಡಿದೆ.
ಅಪಾರ್ಟ್‌ಮೆಂಟ್‌ನಲ್ಲಿ ಆತಂಕ: ಏತನ್ಮಧ್ಯೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಇಲ್ಲಿನ ಬಹುಮಹಡಿ ವಸತಿ ಸಮುಚ್ಚಯದ ಹಿಂಬದಿಯ ಗುಡ್ಡ ಕುಸಿದು, ಕಟ್ಟಡದ ತಡೆಗೋಡೆ ಬಿದ್ದಿದೆ. ಇದರಿಂದ ಕಟ್ಟಡಕ್ಕೆ ಅಪಾಯವಾಗುವ ಆತಂಕ ಉಂಟಾಗಿದೆ. ಎಂಟು ಮಹಡಿಯ ವಸತಿ ಸಮುಚ್ಛಯದಲ್ಲಿ 32 ವಸತಿಗೃಹಗಳಿದ್ದು, ಪ್ರಸ್ತುತ ಅದರಲ್ಲಿ ಕೆಲವೇ ವಸತಿಗೃಹಗಳಲ್ಲಿ 25 ಮಂದಿ ಮಾತ್ರ ವಾಸಿಸುತ್ತಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಅವರನ್ನು ಬೇರೆಡೆಗೆ ತೆರಳುವುದಕ್ಕೆ ಅಧಿಕಾರಿಗಳು ಸೂಚಿಸಿದ್ದಾರೆ.