ಹಾಳಾದ ರಸ್ತೆ, ಸಾಮಾಜಿಕ ಜಾಲತಾಣಗಳಲ್ಲಿ ಯುವತಿ ತರಾಟೆ: ಸ್ಪಷ್ಟನೆ ನೀಡಿದ ಶಾಸಕ ಭಟ್

By Govindaraj S  |  First Published Aug 27, 2022, 5:26 PM IST

ಈ ಬಾರಿ ಮಳೆಯಿಂದ ಉಡುಪಿ ಜಿಲ್ಲೆಯ ರಸ್ತೆಗಳು ಹದಗೆಟ್ಟು ಹೋಗಿವೆ. ಗ್ರಾಮೀಣ ರಸ್ತೆಗಳಿಂದ, ರಾಷ್ಟ್ರೀಯ ಹೆದ್ದಾರಿವರೆಗೆ ಎಲ್ಲಿಗೆ ಹೋದರೂ ಹೊಂಡಾ ಗುಂಡಿ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಸ್ತೆ ದುರವಸ್ಥೆಯದ್ದೇ ಚರ್ಚೆ! 


ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ 

ಉಡುಪಿ (ಆ.27): ಈ ಬಾರಿ ಮಳೆಯಿಂದ ಉಡುಪಿ ಜಿಲ್ಲೆಯ ರಸ್ತೆಗಳು ಹದಗೆಟ್ಟು ಹೋಗಿವೆ. ಗ್ರಾಮೀಣ ರಸ್ತೆಗಳಿಂದ, ರಾಷ್ಟ್ರೀಯ ಹೆದ್ದಾರಿವರೆಗೆ ಎಲ್ಲಿಗೆ ಹೋದರೂ ಹೊಂಡಾ ಗುಂಡಿ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಸ್ತೆ ದುರವಸ್ಥೆಯದ್ದೇ ಚರ್ಚೆ! ಮಂಗಳೂರಿಗೆ ಪ್ರಧಾನಿ ಬರ್ತಾರೆ ಅನ್ನೋ ಕಾರಣಕ್ಕೆ  ರಸ್ತೆ ರಿಪೇರಿ ಆಗ್ತಾ ಇದೆ. ಉಡುಪಿಯಲ್ಲಿ ಯಾವಾಗ? ನಗರದ ರಸ್ತೆ ರಿಪೇರಿಯಾಗಲು ಯಾವ ಗಣ್ಯರು ಬರಬೇಕು? ಎಂದು ಯುವತಿಯೊಬ್ಬಳು ಉಡುಪಿ ಶಾಸಕ ರಘುಪತಿ ಭಟ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗುತ್ತಿದೆ. ಆಕೆಯ ಬಿಸಿ ಬಿಸಿ ಪ್ರಶ್ನೆಗೆ ಶಾಸಕ ಭಟ್, ಕೂಲ್ ಕೂಲ್ ಉತ್ತರಕೊಟ್ಟಿದ್ದಾರೆ.

Tap to resize

Latest Videos

ಸದ್ಯ ವೈರಲ್ ಆಗುತ್ತಿರುವ ಯುವತಿಯ ಹೇಳಿಕೆ ಈ ರೀತಿ ಇದೆ: ನಾನು ಮಾಡಿದ ಈ ವಿಡಿಯೋವನ್ನು ಶಾಸಕ ರಘುಪತಿ ಭಟ್ಟರು ನೋಡಬೇಕು. ಈ ಸಮಸ್ಯೆಗೆ ಪರಿಹಾರ ಸಿಗುವವರೆಗೆ ಶೇರ್ ಮಾಡಬೇಕು. ನಾವು ಇಷ್ಟು ವರ್ಷಗಳಿಂದ ಟೋಲ್, ರೋಡ್, ವಾಹನ ತೆರಿಗೆ ಕಟ್ಟುತ್ತಿದ್ದೇವೆ. ಇದು ಯಾರ ಹೊಟ್ಟೆಗೆ ಮಣ್ಣು ಹಾಕಲು ಕಟ್ಟುತ್ತಿದ್ದೇವೆ ಹೇಳಿ.. ಕೇಳಿದ್ರೆ ಡ್ರೈನೇಜ್ ಕಟ್ಟಿದ್ದೇವೆ, ಅದು ಕಟ್ಟಿದ್ದೇವೆ, ಇದು ಕಟ್ಟಿದ್ದೇವೆ ಎಂದು ಹೇಳುತ್ತಾರೆ. ಯಾವುದಾದರೂ ಕೆಲಸ ಸರಿಯಾಗಿ ಮಾಡುತ್ತೀರಾ? ರಘುಪತಿ ಭಟ್ಟರೇ ನಿಮಗೆ ನನ್ನದೊಂದು ಪ್ರಶ್ನೆ.. 

ಅಕ್ರಮ ನಿರ್ಮಾಣದ ನೆಪದಲ್ಲಿ ಬಡ ಮೀನುಗಾರರ ತಾತ್ಕಾಲಿಕ ಶೆಡ್ ಕೆಡವಿದ ಉಡುಪಿ ನಗರಸಭೆ

ನೀವು ನಿಮ್ಮ ಮನೆಗೆ ಇದೇ ರಸ್ತೆಯಲ್ಲಿ ಹೋಗುತ್ತೀರಿ. ನಿಮಗೆ ಸ್ವಲ್ಪವೂ ಬೇಸರವಾಗುವುದಿಲ್ಲವೇ? ಇವತ್ತು ನಾನು ಮನೆಗೆ ಹೋಗುವಾಗ ಸ್ಕೂಟರ್ ಸವಾರರೊಬ್ಬರು ಹೊಂಡದಲ್ಲಿ ಬಿದ್ದಿದ್ದರು. ಇದು ನನ್ನ ಕಣ್ಣೆದುರೇ ಆದ ಅಪಘಾತ. ಅವರಿಗೆ ಏನಾದರೂ ಆಗಿರುತ್ತಿದ್ದರೆ? ಅವರ ಜೊತೆ ಒಂದು ಮಗುವಿದ್ದರೆ, ಏನಾಗುತ್ತಿತ್ತು. ನೀವು ಸರ್ಕಾರಿ ವಾಹನದಲ್ಲಿ ಓಡಾಡುತ್ತಿರಿ. ನೀವು ಓಡಾಡುವಾಗ ಹೊಂಡ ಇದೆಯೋ ? ಹೊಂಡಕ್ಕೆ ಯಾರಾದರೂ ಬಿದ್ದಿದ್ದಾರೋ ಗೊತ್ತಾಗೋದಿಲ್ಲ. ನಾವು ಕಷ್ಟಪಟ್ಟು ಗಾಡಿ ಖರೀದಿ ಮಾಡುತ್ತೇವೆ. ನಮ್ಮ ವಾಹನಕ್ಕೆ ಹಾನಿಯಾದರೆ ಖರ್ಚು ನೀವು ಕೊಡುತ್ತೀರಾ?

 ಅಂಬಾಗಿಲು ಮಣಿಪಾಲ ರಸ್ತೆ ಫೇವರ್ ಫಿನಿಷ್ ಯಾಕೆ ಮಾಡಿಲ್ಲ. ನಿಮಗೆ ಸ್ವಲ್ಪವಾದರೂ ಕಾಮನ್ ಸೆನ್ಸ್ ಮನುಷ್ಯತ್ವ ಇದೆಯಾ? ಹೊಂಡ ಜಾಸ್ತಿ ಇದೆ. ರಸ್ತೆ ಕಡಿಮೆ ಇದೆ ಯಾರು ಕೇಳುವವರಿಲ್ಲ. ಕಾಂಗ್ರೆಸ್ ಕಾರ್ಯಕರ್ತ ಅನ್ನುತ್ತೀರಿ, ಬಿಜೆಪಿ ಕಾರ್ಯಕರ್ತ ಅನ್ನುತ್ತೀರಿ, ಸಮಸ್ಯೆ ಬಗ್ಗೆ ಯಾರಿಗೂ ಏನು ಬೇಕಾಗಿಲ್ಲ. ಪ್ರಧಾನ ಮಂತ್ರಿ ಬರ್ತಾರೆ ಅನ್ನೋ ಕಾರಣಕ್ಕೆ ಮಂಗಳೂರು ರಸ್ತೆಗಳು ರಿಪೇರಿ ಆಗುತ್ತಿವೆ. ನಮ್ಮ ಊರಿನ ರಸ್ತೆಗಳು ಸರಿಯಾಗಲು ಯಾರು ಬರಬೇಕು? ನಮ್ಮದೇ ತೆರಿಗೆ ಹಣ ಬಳಸಿಕೊಂಡು ಸರಿಯಾದ ರಸ್ತೆ ಮಾಡಿಕೊಡಿ.

ಸಾಮಾಜಿಕ ಜಾಲತಾಣದಲ್ಲಿಯೇ ಉತ್ತರ ನೀಡಿದ ಶಾಸಕ ರಘುಪತಿ ಭಟ್: ಈ ವಿಡಿಯೋದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ರಘುಪತಿ ಭಟ್ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರು ರಸ್ತೆಯ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ. ನಾನು ಮನೆಗೆ ಹೋಗುವ ರಸ್ತೆ ಇದಾಗಿದ್ದು, ಈ ರಸ್ತೆ ಸಮಸ್ಯೆಯ ಬಗ್ಗೆ ನನಗೆ ಗಂಭೀರತೆ ಇದೆ. ಈಗಾಗಲೇ ಒಂದು ಬಾರಿ ಪ್ಯಾಚ್ ವರ್ಕ್ ಮಾಡಿದ್ದೆವು. ಕಳೆದ ಬಾರಿ ಮತ್ತೊಮ್ಮೆ ಜೋರು ಮಳೆಯಾಗಿದ್ದರಿಂದ ರಸ್ತೆ ಹಾಳಾಗಿದೆ ಎಂದಿದ್ದಾರೆ. ಜನತೆಗೆ ನಾನು ಈ ಮೂಲಕ ಸ್ಪಷ್ಟನೆ ನೀಡುತ್ತೇನೆ. ಈ ರಸ್ತೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಕೇವಲ ಜಲ್ಲಿ ಹಾಕಲಾಗಿದೆ.

ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದೆಂದು ಸಣ್ಣ ಲೇಯರ್ ಡಾಂಬರ್ ಹಾಕಲಾಗಿದೆ, ಇನ್ನು ಎರಡು ಲೇಯರ್ ಡಾಮರ್ ಹಾಕುವುದು ಬಾಕಿ ಇದೆ ಎಂದರು. ಜಲ್ಲಿ ಹಾಕಿ ಹಾಗೆ ಬಿಡುವುದಾಗಿ ಗುತ್ತಿಗೆದಾರರು ಹೇಳಿದ್ದರು. ಆದರೆ ಜನರ ಅನುಕೂಲಕ್ಕೆ ಒಂದು ಸಣ್ಣ ಲೇಯರ್ ಡಾಂಬರ್ ಹಾಕಲು ಸೂಚಿಸಿದ್ದೇನು. ಹೊಸ ರಸ್ತೆಯಾದ ಕಾರಣ ಮೊದಲ ಮಳೆಗೆ ರಸ್ತೆ ಸಿಂಕ್ ಆಗುವುದು ಸಾಮಾನ್ಯ, ಇದು ಕಳಪೆ ಕಾಮಗಾರಿಯಲ್ಲ ಏಕೆಂದರೆ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ, ಮಳೆ ನಿಂತ ತಕ್ಷಣ ಪ್ಯಾಚ್ ವರ್ಕ್ ಮಾಡುತ್ತೇವೆ ಎಂದರು. ಕಳೆದ ಡಿಸೆಂಬರ್ ತಿಂಗಳಲ್ಲಷ್ಟೇ ಈ ಕಾಮಗಾರಿ ಪ್ರಾರಂಭವಾಗಿದೆ, ಇದೊಂದು ದೊಡ್ಡ ಕಾಮಗಾರಿಯಾಗಿದ್ದು ಸಾರ್ವಜನಿಕರು ಸಹಕರಿಸಬೇಕು.

ಬಾಟಲಿ ಒಳಗೆ ಅವಿತು ಕುಳಿತ ಗಣೇಶನ ದರ್ಶನ ಭಾಗ್ಯ!

ಸಿಂಗಲ್ ರೋಡನ್ನು ಸದ್ಯ ಚತುಷ್ಪತ ರಸ್ತೆಯಾಗಿ ಮಾರ್ಪಡಿಸುತ್ತಿದ್ದೇವೆ. ಈ ರಸ್ತೆ ಕಾಮಗಾರಿಗೆ 26 ಕೋಟಿ ಅನುದಾನ ತಂದಿದ್ದೇನೆ. 56 ಕೋಟಿ ರೂಪಾಯಿ ಭೂಸ್ವಾಧೀನ ಆಗುವುದನ್ನು, ಟಿಡಿಆರ್ ಮೂಲಕ ಜನರ ಮನವೊಲಿಸಿ ಕಾಮಗಾರಿ ಮಾಡುತ್ತಿದ್ದೇವೆ, ಈ ಬಗ್ಗೆ ನೂರಕ್ಕೂ ಅಧಿಕ ಸಭೆ ನಡೆಸಿದ್ದೇನೆ ಎಂದು ಹೇಳಿದರು. ಕೆಲಸ ಆಗುವ ಸಮಯದಲ್ಲಿ ಇಂತಹ ಅವ್ಯವಸ್ಥೆಗಳಾಗುವುದು ಸಹಜ, ಒಮ್ಮೆ ಕಾಮಗಾರಿ ಮುಗಿದರೆ ಏಳೆಂಟು ವರ್ಷ ಯಾವುದೇ ತೊಂದರೆ ಆಗಲ್ಲ, ಅಭಿವೃದ್ಧಿ ಮಾಡಲು ಹೊರಟರೆ ಟೀಕೆ ಬರುತ್ತದೆ.ಅಭಿವೃದ್ಧಿ ಮಾಡದಿದ್ದರೆ ಯಾರು ಟೀಕಿಸುವುದಿಲ್ಲ, ನಾಗರಿಕರಾಗಿ ಅವರಿಗೆ ಪ್ರಶ್ನಿಸುವ ಹಕ್ಕಿದೆ, ಆದರೆ ಗೊಂದಲಕ್ಕೀಡಾಗಬೇಡಿ ಎಂದವರು ಹೇಳಿದರು.

click me!