ಉಡುಪಿಯ ಮಲ್ಪೆ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣವಾಯ್ತು ನಾರ್ವೆ ದೇಶದ ಬೃಹತ್ ಸರಕು ಹಡಗು ವಿಲ್ಸನ್ ಎನರ್ಜಿ 1

Published : Nov 02, 2026, 04:31 PM IST
Karnataka Malpe Shipyard Builds Largest Ship for Norway

ಸಾರಾಂಶ

ಉಡುಪಿಯ ಮಲ್ಪೆಯಲ್ಲಿರುವ 'ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್ ಲಿಮಿಟೆಡ್' ನಾರ್ವೆ ದೇಶದ ಸಂಸ್ಥೆಗಾಗಿ ತನ್ನ ಇತಿಹಾಸದಲ್ಲೇ ಅತ್ಯಂತ ಬೃಹತ್ ಸರಕು ಹಡಗನ್ನು ನಿರ್ಮಿಸಿದೆ. ₹1,041 ಕೋಟಿ ಮೌಲ್ಯದ ಒಪ್ಪಂದದ ಭಾಗವಾಗಿ ನಿರ್ಮಾಣಗೊಂಡಿರುವ 99 ಮೀಟರ್ ಉದ್ದದ ಈ ಹಡಗಿಗೆ 'ವಿಲ್ಸನ್ ಎನರ್ಜಿ 1' ಎಂದು ಹೆಸರಿಡಲಾಗಿದೆ.

ಉಡುಪಿ (ನ.2): ಜಾಗತಿಕ ಕಡಲ ಉದ್ಯಮ ಹಾಗೂ ವಾಣಿಜ್ಯ ನೌಕಾ ನಿರ್ಮಾಣ ಕ್ಷೇತ್ರದಲ್ಲಿ ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆ ಚಾರಿತ್ರಿಕ ಮೈಲಿಗಲ್ಲು ನೆಟ್ಟಿದೆ. ಮಲ್ಪೆಯಲ್ಲಿರುವ 'ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್ ಲಿಮಿಟೆಡ್' (UCSL) ನಾರ್ವೆ ದೇಶದ ಪ್ರಸಿದ್ಧ ಹಡಗು ಯಾನ ಸಂಸ್ಥೆಗೆ ತಯಾರಿಸಿರುವ ತನ್ನ ಇತಿಹಾಸದಲ್ಲೇ ಅತ್ಯಂತ ಬೃಹತ್ ಸರಕು ಹಡಗನ್ನು ಅನಾವರಣ ಮಾಡಿದೆ. ನಾರ್ವೆ ಮೂಲದ 'ವಿಲ್ಸನ್ ಎಎಸ್‌ಎ' (Wilson ASA) ಸಂಸ್ಥೆಯ ಜೊತೆಗಿನ ಸುಮಾರು ₹1,041 ಕೋಟಿ ಮೌಲ್ಯದ ಬಹು-ಹಡಗು ರಫ್ತು ಒಪ್ಪಂದದ ಭಾಗವಾಗಿ ನಿರ್ಮಿಸಲಾಗಿರುವ 99 ಮೀಟರ್ ಉದ್ದದ ನೂತನ ಸರಕು ಹಡಗಿಗೆ 'ವಿಲ್ಸನ್ ಎನರ್ಜಿ 1' (Wilson Energy 1) ಎಂದು ಹೆಸರಿಡಲಾಗಿದೆ. 2021 ರಲ್ಲಿ ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್ ಲಿಮಿಟೆಡ್ (UCSL) ನೂತನ ಆಡಳಿತದಡಿ ಆರಂಭಗೊಂಡ ನಂತರ ಮಲ್ಪೆ ನೌಕಾಂಗಣದಲ್ಲಿ ನಿರ್ಮಾಣಗೊಂಡ ಅತ್ಯಂತ ದೊಡ್ಡ ವಾಣಿಜ್ಯ ಹಡಗು ಇದಾಗಿದೆ.

ಈ ಬೃಹತ್ ಯೋಜನೆಯು ಒಟ್ಟು 6,300 ಡೆಡ್‌ವೇಟ್ ಟನ್ (DWT) ಹೊತ್ತೊಯ್ಯುವ ಸಾಮರ್ಥ್ಯದ 8 ಡ್ರೈ ಕಾರ್ಗೋ ಸಾಗಣೆ ಹಡಗುಗಳ ನಿರ್ಮಾಣದ ಒಪ್ಪಂದಕ್ಕೆ ಒಳಪಟ್ಟಿದ್ದು, ಅದರಲ್ಲಿ 'ವಿಲ್ಸನ್ ಎನರ್ಜಿ 1' ಮೊದಲ ಹಡಗಾಗಿದೆ.

'ವಿಲ್ಸನ್ ಎನರ್ಜಿ 1' ಹಡಗಿನ ವಿಶೇಷತೆಗಳೇನು?

ನೆದರ್‌ಲ್ಯಾಂಡ್ಸ್ ಮೂಲದ ಪ್ರಸಿದ್ಧ 'ಕೊನೊಶಿಪ್ ಇಂಟರ್ನ್ಯಾಷನಲ್ ಬಿವಿ' (Conoship International BV) ಸಂಸ್ಥೆಯು ಈ ಸುಧಾರಿತ ಹಡಗಿನ ವಿನ್ಯಾಸ ರೂಪಿಸಿದೆ. ಯೂರೋಪ್ ಕರಾವಳಿ ತೀರದ ಜಲಮೂಲಗಳಲ್ಲಿ ಸರಕು ಸಾಗಣೆ ಮಾಡಲು ಈ ಹಡಗನ್ನು ವಿಶೇಷವಾಗಿ ತಯಾರಿಸಲಾಗಿದೆ. ಈ ಹಡಗು 99 ಮೀಟರ್ ಉದ್ದ ಹಾಗೂ 15.85 ಮೀಟರ್ ಅಗಲವನ್ನು ಹೊಂದಿದ್ದು, 3,16,278 ಕ್ಯೂಬಿಕ್ ಫೀಟ್ ಸರಕು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಡೀಸೆಲ್-ಎಲೆಕ್ಟ್ರಿಕ್ ಪ್ರೊಪಲ್ಷನ್ ಸಿಸ್ಟಮ್: ಇಂಧನ ಉಳಿತಾಯ ಮತ್ತು ನಿರ್ವಹಣಾ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಇದರಲ್ಲಿ ಡೀಸೆಲ್-ಎಲೆಕ್ಟ್ರಿಕ್ ಪ್ರೊಪಲ್ಷನ್ ತಂತ್ರಜ್ಞಾನ ಬಳಸಲಾಗಿದೆ. ಇದರಲ್ಲಿ ಡೀಸೆಲ್ ಜನರೇಟರ್‌ಗಳು ವಿದ್ಯುತ್ ಉತ್ಪಾದಿಸಿ, ಹಡಗನ್ನು ಮುನ್ನೆಡೆಸುವ ಮೋಟಾರ್‌ಗಳಿಗೆ ಚಾಲನೆ ನೀಡುತ್ತವೆ. ಭವಿಷ್ಯದಲ್ಲಿ ಪರಿಸರ ಸ್ನೇಹಿ 'ವಿಂಡ್-ಅಸಿಸ್ಟೆಡ್ ಪ್ರೊಪಲ್ಷನ್' (ಗಾಳಿಯ ನೆರವಿನಿಂದ ಚಲಿಸುವ) ತಂತ್ರಜ್ಞಾನಕ್ಕೆ ಈ ಹಡಗನ್ನು ಸುಲಭವಾಗಿ ಮೇಲ್ದರ್ಜೆಗೇರಿಸಬಹುದಾಗಿದೆ.

8 ಹಡಗುಗಳ ಬೃಹತ್ ಒಪ್ಪಂದ – ಕಾಮಗಾರಿ ಪ್ರಗತಿ

ನಾರ್ವೆಯ ವಿಲ್ಸನ್ ಎಎಸ್‌ಎ ಸಂಸ್ಥೆ ಹಾಗೂ ಮಲ್ಪೆಯ ಯುಸಿಎಸ್‌ಎಲ್ ನಡುವೆ 2024 ರ ಜೂನ್ ತಿಂಗಳಲ್ಲಿ 8 ಬೃಹತ್ ಹಡಗುಗಳ ಒಪ್ಪಂದಕ್ಕೆ ಅಧಿಕೃತ ಸಹಿ ಬಿದ್ದಿತ್ತು. ಒಪ್ಪಂದದ ಪ್ರಕಾರ, ಮೊದಲ ಹಡಗು 'ವಿಲ್ಸನ್ ಎನರ್ಜಿ 1' 2026 ರ ಡಿಸೆಂಬರ್ ವೇಳೆಗೆ ನಾರ್ವೆ ಸಂಸ್ಥೆಗೆ ಅಧಿಕೃತವಾಗಿ ಹಸ್ತಾಂತರಗೊಳ್ಳಲಿದೆ. ಇಡೀ 8 ಹಡಗುಗಳ ಸರಣಿಯ ಕಾಮಗಾರಿಯು 2028 ರ ಮಳೆಗಾಲದ ಅವಧಿಗೂ ಮುನ್ನವೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಮಲ್ಪೆಯಲ್ಲಿ ನಡೆದ ಜಲಪ್ರವೇಶ ಕಾರ್ಯಕ್ರಮದಲ್ಲಿ ವಿಲ್ಸನ್ ಎಎಸ್‌ಎ ಸಂಸ್ಥೆಯ ಅಧ್ಯಕ್ಷ ಈವಿಂಡ್ ಈಡೆಸ್‌ವಿಕ್ (Eivind Eidesvik) ಹಾಗೂ ಅವರ ಪುತ್ರಿ ಅನ್ನಾ ಈಡೆಸ್‌ವಿಕ್ ಜಂಟಿಯಾಗಿ 'ವಿಲ್ಸನ್ ಎನರ್ಜಿ 1' ಹಡಗನ್ನು ನೀರಿಗಿಳಿಸಿದರು. ಭಾರತದಲ್ಲಿರುವ ನಾರ್ವೆ ದೇಶದ ರಾಯಭಾರಿ ಮೇ-ಎಲಿನ್ ಸ್ಟೆನರ್ (May-Elin Stener) ಅವರು ಸರಣಿಯ 3ನೇ ಹಡಗಿನ ತಳಪಾಯ (Keel laying) ನೆರವೇರಿಸಿದರು. ಇದೇ ವೇಳೆ 4ನೇ ಹಡಗಿನ ಸ್ಟೀಲ್ ಕಟಿಂಗ್ (Steel cutting) ಕಾರ್ಯಕ್ಕೆ ಚಾಲನೆ ನೀಡಲಾಯಿತು ಹಾಗೂ 2ನೇ ಹಡಗಿನ ನಿರ್ಮಾಣ ಕಾಮಗಾರಿ ಈಗಾಗಲೇ ಭರದಿಂದ ಸಾಗಿದೆ.\

ಹಿಂದಿನ ಯೋಜನೆಗಿಂತ ಬೃಹತ್ ಆವೃತ್ತಿ

ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್‌ಗೆ ನಾರ್ವೆಯ ವಿಲ್ಸನ್ ಸಂಸ್ಥೆಯ ಜೊತೆಗಿನ ಭಾಗಿದಾರಿಕೆ ಹೊಸದೇನಲ್ಲ. ಈ ಮುನ್ನ ಇದೇ ಮಲ್ಪೆ ಶಿಪ್‌ಯಾರ್ಡ್, ನಾರ್ವೆ ಸಂಸ್ಥೆಗೆ ತಲಾ 89 ಮೀಟರ್ ಉದ್ದ ಹಾಗೂ 3,800 DWT ಸಾಮರ್ಥ್ಯದ 6 ಡ್ರೈ ಕಾರ್ಗೋ ಸಾಗಣೆ ಹಡಗುಗಳನ್ನು ಯಶಸ್ವಿಯಾಗಿ ನಿರ್ಮಿಸಿ ನೀಡಿತ್ತು. ಆ ಸರಣಿಯ ಮೊದಲ ಹಡಗನ್ನು 2025 ರ ಏಪ್ರಿಲ್‌ನಲ್ಲಿ ನೀಡಲಾಗಿದ್ದು, ಕೇವಲ 14 ತಿಂಗಳ ದಾಖಲೆ ಅವಧಿಯಲ್ಲಿ ಎಲ್ಲಾ 6 ಹಡಗುಗಳನ್ನು ಪೂರೈಸಲಾಗಿತ್ತು.

ಈ ಹಿಂದೆ ನಿರ್ಮಿಸಿದ 3,800 DWT ಹಡಗುಗಳಿಗೆ ಹೋಲಿಸಿದರೆ, ಪ್ರಸ್ತುತ ಜಲಪ್ರವೇಶ ಮಾಡಿರುವ ಹಡಗುಗಳು 6,300 DWT ಬೃಹತ್ ಸಾಮರ್ಥ್ಯವನ್ನು ಹೊಂದಿದ್ದು, ಮಲ್ಪೆ ನೌಕಾಂಗಣದ ವಾಣಿಜ್ಯ ಹಡಗು ನಿರ್ಮಾಣ ಸಾಮರ್ಥ್ಯ ಭಾರಿ ಪ್ರಮಾಣದಲ್ಲಿ ಬೆಳೆದಿರುವುದಕ್ಕೆ ಸಾಕ್ಷಿಯಾಗಿದೆ.

ಮಲ್ಪೆಯ ಕರಾವಳಿ ನೌಕಾ ಸಂಸ್ಥೆಯ ಅಭಿವೃದ್ಧಿ ಹಾದಿ

ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್ ಲಿಮಿಟೆಡ್ (UCSL) ಎಂಬುದು ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ದೈತ್ಯ ಸಂಸ್ಥೆಯಾದ 'ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್'ನ (CSL) ಶೇಕಡಾ 100 ರಷ್ಟು ಸಂಪೂರ್ಣ ಒಡೆತನದ ಉಪಸಂಸ್ಥೆಯಾಗಿದೆ. ಮುಂಚೆ 'ತೆಬ್ಮಾ ಶಿಪ್‌ಯಾರ್ಡ್ಸ್' (Tebma Shipyards) ಎಂದು ಕರೆಯಲ್ಪಡುತ್ತಿದ್ದ ಈ ಮಲ್ಪೆ ನೌಕಾಂಗಣವನ್ನು 2020 ರಲ್ಲಿ ಕೊಚ್ಚಿನ್ ಶಿಪ್‌ಯಾರ್ಡ್ ತನ್ನ ವಶಕ್ಕೆ ತೆಗೆದುಕೊಂಡು, 2021 ರಿಂದ ನೂತನ ಆಡಳಿತದಡಿ ಸುಸಜ್ಜಿತವಾಗಿ ಕಾರ್ಯಾಚರಣೆ ಆರಂಭಿಸಿತ್ತು. 'ವಿಲ್ಸನ್ ಎನರ್ಜಿ 1' ಹಡಗಿನ ಯಶಸ್ವಿ ಲಾಂಚ್‌ ಕರಾವಳಿ ಕರ್ನಾಟಕದ ಶಿಪ್‌ಯಾರ್ಡ್ ಜಾಗತಿಕ ಗ್ರಾಹಕರಿಗೆ ಬೃಹತ್ ವಾಣಿಜ್ಯ ನೌಕೆಗಳನ್ನು ನಿರ್ಮಿಸಿಕೊಡುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲು ಸಹಕಾರಿಯಾಗಿದೆ. ₹1,041 ಕೋಟಿ ಮೌಲ್ಯದ ಈ ಬೃಹತ್ ಯೋಜನೆ ಮುಂಬರುವ ಎರಡು ವರ್ಷಗಳ ಕಾಲ ಮಲ್ಪೆ ನೌಕಾಂಗಣಕ್ಕೆ ಬೃಹತ್ ಮಟ್ಟದ ಉದ್ಯೋಗ ಹಾಗೂ ಕೈಗಾರಿಕಾ ಚಟುವಟಿಕೆಗಳನ್ನು ಒದಗಿಸಲಿದೆ.

PREV
Read more Articles on
click me!

Recommended Stories

ರಾಜ್ಯೋತ್ಸವದ ಸಂಭ್ರಮದಲ್ಲಿ ಕರ್ನಾಟಕಕ್ಕೆ ಹೊಸ ಗರಿ: ಮಲೆನಾಡಿನ ಮರಗಂತಿ ಕಪ್ಪೆಗೆ ರಾಜ್ಯ ಉಭಯಜೀವಿ ಮನ್ನಣೆ
ಗೋಕರ್ಣ ಸಮುದ್ರದಲ್ಲಿ ಮುಳುಗಿ ಬೆಳ್ಳಂದೂರಿನ ಅಲೋರಿಯಾ ಇಕೋಸ್ಪೇಸ್‌ನ ಮೂವರು ಟೆಕ್ಕಿಗಳು ಸಾವು