VAO EXAM SCAM; ಬಗೆದಷ್ಟು ಹೊರಬರುತ್ತಿವೆ ನೂರಾರೂ ಬನ್ನೂರುಗಳು? OMRನಲ್ಲಿ ತುಂಬಿದ್ದು 10 ಕಾಲಂ, ಬಂದಿದ್ದು 80 ಕ್ಕೂ ಹೆಚ್ಚು ಅಂಕ!

Published : Nov 02, 2026, 02:59 PM ISTUpdated : Nov 02, 2026, 08:18 PM IST
KPSC, KEA SCAM Update

ಸಾರಾಂಶ

ಇತ್ತೀಚೆಗೆ ನಡೆದ ಕೆಇಎ ಗ್ರಾಮ ಆಡಳಿತಾಧಿಕಾರಿ (VAO) ಪರೀಕ್ಷೆಯಲ್ಲಿ ಗೂಗಲ್ ಲೆನ್ಸ್ ಬಳಸಿ ಅಕ್ರಮವೆಸಗಿದ ಆರೋಪಗಳು ಬೆಳಕಿಗೆ ಬಂದಿವೆ. ರಾಜ್ಯದಾದ್ಯಂತ ಇಂತಹ ಹತ್ತಾರು "ಶಂಕರ ಬನ್ನೂರು"ಗಳು ವ್ಯವಸ್ಥೆಯ ಕಣ್ಣು ತಪ್ಪಿಸಿರಬಹುದು ಎಂಬ ಬಲವಾದ ಶಂಕೆ ಈಗ ದಟ್ಟವಾಗಿದೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇತ್ತೀಚೆಗೆ ನಡೆಸಿದ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯು ಈಗ ರಾಜ್ಯಾದ್ಯಂತ ದೊಡ್ಡ ಮಟ್ಟದ ಹಗರಣವಾಗಿ ರೂಪಾಂತರಗೊಳ್ಳುತ್ತಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿಯ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಸಿ ಅಕ್ರಮ ಎಸಗಿದ್ದ ಆರೋಪಿ ಶಂಕರ ಬನ್ನೂರು ಸಿಕ್ಕಿಬಿದ್ದ ಬೆನ್ನಲ್ಲೇ, ಈ ವಂಚನೆಯ ಜಾಲ ಎಷ್ಟು ಆಳವಾಗಿ ಬೇರೂರಿದೆ ಎನ್ನುವ ಆತಂಕಕಾರಿ ಸತ್ಯಗಳು ಹೊರಬರುತ್ತಿವೆ. ಈ ಪ್ರಕರಣವು ಕೇವಲ ಒಬ್ಬ ಅಭ್ಯರ್ಥಿಗೆ ಸೀಮಿತವಾಗಿರದೆ, ರಾಜ್ಯದಾದ್ಯಂತ ಇಂತಹ ಹತ್ತಾರು "ಶಂಕರ ಬನ್ನೂರು"ಗಳು ವ್ಯವಸ್ಥೆಯ ಕಣ್ಣು ತಪ್ಪಿಸಿರಬಹುದು ಎಂಬ ಬಲವಾದ ಶಂಕೆ ಈಗ ದಟ್ಟವಾಗಿದೆ.

ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ 25, ವಿಎಓನಲ್ಲಿ 151: ಸಂಶಯದ ಹುತ್ತ!

ಈ ಹಗರಣ ಬೆಳಕಿಗೆ ಬರಲು ಕಾರಣವಾಗಿದ್ದು ಅಭ್ಯರ್ಥಿಗಳ ಅಂಕಗಳಲ್ಲಿ ಕಂಡುಬಂದ ಅಜಾಗಜಾಂತರ ವ್ಯತ್ಯಾಸ. ಇತ್ತೀಚೆಗೆ ನಡೆದ ಕೆಎಸ್‌ಆರ್‌ಪಿ (KSRP) ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಗಳಿಸಿ ಫೇಲಾಗಿದ್ದ ಇದೇ ಶಂಕರ ಬನ್ನೂರು, ಕೆಲವೇ ದಿನಗಳ ಅಂತರದಲ್ಲಿ ನಡೆದ ಅತ್ಯಂತ ಕಠಿಣವಾದ ವಿಎಓ ಪರೀಕ್ಷೆಯಲ್ಲಿ ಬರೋಬ್ಬರಿ 151.25 ಅಂಕಗಳನ್ನು ಬಾಚಿ ರಾಜ್ಯಕ್ಕೇ ಪ್ರಥಮ ಸ್ಥಾನ (ಟಾಪರ್) ಪಡೆದುಕೊಂಡಿದ್ದ! ಪೊಲೀಸ್ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಗಳಿಸಲೂ ಪರದಾಡಿದ ವ್ಯಕ್ತಿ, ರಾಜ್ಯಮಟ್ಟದ ಪರೀಕ್ಷೆಯಲ್ಲಿ ಟಾಪರ್ ಆಗಿದ್ದು ಹೇಗೆ ಎಂದು ಜಾಗೃತ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದಾಗ ಈ ಹಗರಣದ ವಾಸನೆ ಹೊರಬರಲಾರಂಭಿಸಿತು.

ಗೂಗಲ್ ಲೆನ್ಸ್ ಬಳಸಿ ಹೈಟೆಕ್ ಕಳ್ಳಾಟ

ಕೆಇಎ ಸೂಚನೆಯ ಮೇರೆಗೆ ಹಾವೇರಿ ಜಿಲ್ಲಾಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಶಿಗ್ಗಾವಿ ಪರೀಕ್ಷಾ ಕೇಂದ್ರದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆಘಾತಕಾರಿ ಸತ್ಯ ಬಯಲಾಗಿದೆ. ಕೊನೆಯ ಬೆಂಚ್‌ನಲ್ಲಿ ಕುಳಿತಿದ್ದ ಶಂಕರ ಬನ್ನೂರು, ಕಟ್ಟುನಿಟ್ಟಿನ ತಪಾಸಣೆಯ ನಡುವೆಯೂ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದ. ಕೊಠಡಿಯ ಮೇಲ್ವಿಚಾರಕರ ಕಣ್ಣು ತಪ್ಪಿಸಿ, ಮೊಬೈಲ್‌ನಲ್ಲಿದ್ದ ಗೂಗಲ್ ಲೆನ್ಸ್ ಅಪ್ಲಿಕೇಶನ್ ಮೂಲಕ ಪ್ರಶ್ನೆಪತ್ರಿಕೆಯನ್ನು ಸ್ಕ್ಯಾನ್ ಮಾಡಿ, ಆನ್‌ಲೈನ್‌ನಲ್ಲಿ ತಕ್ಷಣವೇ ಉತ್ತರಗಳನ್ನು ಹುಡುಕಿ ಒಎಂಆರ್ ಶೀಟ್ ಭರ್ತಿ ಮಾಡಿದ್ದ. ಸಿಸಿಟಿವಿಯಲ್ಲಿ ಈ ಕಳ್ಳಾಟ ಸ್ಪಷ್ಟವಾಗಿ ಸೆರೆಯಾಗಿದ್ದು, ಪ್ರಸ್ತುತ ಶಿಗ್ಗಾವಿ ಪೊಲೀಸರು ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಕೆಇಎ ಮುಂದಿರುವ ಸವಾಲು: ಸಮಗ್ರ ತನಿಖೆ ಅಗತ್ಯ

ಈಗ ಮೂಡಿರುವ ಅತಿ ದೊಡ್ಡ ಪ್ರಶ್ನೆಯೆಂದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕೇವಲ ಶಿಗ್ಗಾವಿಯ ಈ ಒಂದು ಪ್ರಕರಣಕ್ಕೆ ತನಿಖೆಯನ್ನು ಸೀಮಿತಗೊಳಿಸುತ್ತದೆಯೇ ಅಥವಾ ರಾಜ್ಯಾದ್ಯಂತ ವ್ಯಾಪಕ ತನಿಖೆ ನಡೆಸುತ್ತದೆಯೇ? ಎಂಬುದು. ಪ್ರಾಮಾಣಿಕ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೆಇಎ ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕಿದೆ,

• ಅಂಕಗಳ ಮರುಪರಿಶೀಲನೆ: ಇತ್ತೀಚಿನ ಪೊಲೀಸ್ ಅಥವಾ ಇತರೆ ಪರೀಕ್ಷೆಗಳಲ್ಲಿ 20-30 ಅಂಕ ಪಡೆದು, ವಿಎಓ ಪರೀಕ್ಷೆಯಲ್ಲಿ ದಿಢೀರನೆ 120 ಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಅವರ ಸಿಸಿಟಿವಿ ದೃಶ್ಯಾವಳಿಗಳನ್ನು ಮರುಪರಿಶೀಲಿಸಬೇಕು.

• ಪರೀಕ್ಷಾ ಕೇಂದ್ರಗಳ ಸಿಬ್ಬಂದಿ ವಿಚಾರಣೆ; ಮೊಬೈಲ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಳಗೆ ಬಿಟ್ಟು ನಿರ್ಲಕ್ಷ್ಯ ವಹಿಸಿದ ಶಿಗ್ಗಾವಿ ಕೇಂದ್ರದ ಮೇಲ್ವಿಚಾರಕರು ಹಾಗೂ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಬೇಕು.

• ಸ್ವತಂತ್ರ ಸಂಸ್ಥೆಗೆ ಜವಾಬ್ದಾರಿ: ಈ ಹಗರಣದ ಹಿಂದೆ ದೊಡ್ಡ ಭ್ರಷ್ಟ ಜಾಲವಿರುವ ಸಾಧ್ಯತೆ ಇರುವುದರಿಂದ, ಇದನ್ನು ಸಿಐಡಿ (CID) ನಂತಹ ಉನ್ನತ ಮಟ್ಟದ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು.

ಉಪಸಂಹಾರ!

ಲಕ್ಷಾಂತರ ಬಡ, ಮಧ್ಯಮ ವರ್ಗದ ಯುವಕರು ಹಗಲಿರುಳು ಕಷ್ಟಪಟ್ಟು ಸರ್ಕಾರಿ ನೌಕರಿಗಾಗಿ ಓದುತ್ತಿದ್ದಾರೆ. ಆದರೆ ಇಂತಹ ಹೈಟೆಕ್ ಕಳ್ಳತನಗಳು ಮತ್ತು ಭ್ರಷ್ಟಾಚಾರಗಳು ಅರ್ಹ ಅಭ್ಯರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡುತ್ತಿವೆ. ಶಿಗ್ಗಾವಿಯ ಶಂಕರ ಬನ್ನೂರು ಪ್ರಕರಣ ಕೇವಲ ಒಂದು ಉದಾಹರಣೆಯಷ್ಟೇ. ಇದರ ಹಿಂದೆ ಅಡಗಿರುವ ಭ್ರಷ್ಟಾಚಾರದ ಸಂಪೂರ್ಣ ಹೊಗೆಯನ್ನು ಅಡಗಿಸಿ, ನಿಜವಾದ ತಪ್ಪಿತಸ್ಥರನ್ನು ಜೈಲಿಗಟ್ಟದಿದ್ದರೆ ಪರೀಕ್ಷಾ ಮಂಡಳಿಗಳ ಮೇಲಿನ ಸಾರ್ವಜನಿಕರ ನಂಬಿಕೆ ಸಂಪೂರ್ಣವಾಗಿ ನಶಿಸಿಹೋಗಲಿದೆ. ಕೆಇಎ ಈ ಕೂಡಲೇ ಎಚ್ಚೆತ್ತುಕೊಂಡು ಸಮಗ್ರ ತನಿಖೆಯ ಮೂಲಕ ಅರ್ಹರಿಗೆ ನ್ಯಾಯ ಒದಗಿಸಬೇಕಾಗಿದೆ.

PREV
Read more Articles on
click me!

Recommended Stories

ಗೋಕರ್ಣ ಸಮುದ್ರದಲ್ಲಿ ಮುಳುಗಿ ಬೆಳ್ಳಂದೂರಿನ ಅಲೋರಿಯಾ ಇಕೋಸ್ಪೇಸ್‌ನ ಮೂವರು ಟೆಕ್ಕಿಗಳು ಸಾವು
'ಕಳೆದ 11 ವರ್ಷಗಳಿಂದ ಬಸ್‌ ಟಿಕೆಟ್‌ ದರ ಏರಿಸಿಲ್ಲ' ರಾಜಾರೋಷವಾಗಿ ಸುಳ್ಳು ಹೇಳಿದ ಸಚಿವ ಬೈರತಿ ಸುರೇಶ್‌, 2025ರ ಶೇ.15ರಷ್ಟು ಏರಿಕೆ ಮರೆತುಹೋಯ್ತಾ?