ಕರಾವಳಿಯಲ್ಲಿ ಮತ್ಸ್ಯಬರ; ಮೀನುಗಾರರಿಗೆ ಸಿಗುತ್ತಾ ಪರಿಹಾರ..?

By Kannadaprabha NewsFirst Published Sep 7, 2019, 2:05 PM IST
Highlights

ಕಳೆದ ಕೆಲವು ತಿಂಗಳಿಂದ ಹವಾಮಾನ ವೈಪರೀತ್ಯದಿಂದಾಗಿ ಕರಾವಳಿಯಲ್ಲಿ ಮೀನುಗಾರರ ವ್ಯಾಪಾರಕ್ಕೆ ಬರೆ ಬಿದ್ದಿದೆ. ಮೀನುಗಾರಿಕೆ ನಡೆಸಿ ಜೀವನ ಸಾಗಿಸುವ ಜನ ಕಡಲಿಗೆ ಇಳಿಯಲು ಸಾಧ್ಯವಾಗದೆ ನಷ್ಟದ ದಿನಗಳನ್ನು ಕಾಣುವಂತಾಗಿದೆ. ಮತ್ಸ್ಯ ಬರ ಉಂಟಾಗಿರುವುದಾಗಿ ಘೋಷಿಸಿ ಪರಿಹಾರ ನೀಡಬೇಕೆಂದು ಮೀನುಗಾರರು ಒತ್ತಾಯಿಸಿದ್ದಾರೆ.

ಉಡುಪಿ(ಸೆ.07): ಮೀನುಗಾರಿಕಾ ಋುತುವಿನಲ್ಲಿ ಮತ್ಸ್ಯಬರ ಉಂಟಾಗಿದೆ ಎಂದು ಘೋಷಿಸಬೇಕು ಮತ್ತು ಮೀನುಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಯುವ ಕಾಂಗ್ರೆಸ್‌ನ ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಸ್‌ ವಿ. ಅಮೀನ್‌ ಕಾಪುವಿನಲ್ಲಿ ಆಗ್ರಹಿಸಿದ್ದಾರೆ.

ಈ ವರ್ಷ ಸುಮಾರು 7 ತಿಂಗಳು ಹವಾಮಾನ ವೈಪರೀತ್ಯದಿಂದ ಕರಾವಳಿಯಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಾಗದೇ ಮೀನುಗಾರರು ಭಾರೀ ಸಂಕಷ್ಟಕ್ಕೊಳಗಾಗಿದ್ದಾರೆ. ಆದ್ದರಿಂದ ಮತ್ಸ್ಯ ಬರ ಎಂದು ಘೋಷಿಸಲು ಅವರು ಒತ್ತಾಯಿಸಿದ್ದಾರೆ.

ಕೇವಲ ಎರಡೇ ದಿನ ಮೀನುಗಾರಿಕೆ:

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರ ಈ ಸಾಲಿನಲ್ಲಿ ಮೀನುಗಾರಿಕೆ ಸಂಪೂರ್ಣ ಸ್ತಬ್ಧಗೊಂಡಿದೆ. ವಿಪರೀತ ಮಳೆ, ಗಾಳಿ, ಸಮುದ್ರದ ಪ್ರಕ್ಷುಬ್ದ ವಾತಾವರಣದಿಂದಾಗಿ ಮೀನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಇದುವರೆಗೆ ಕೇವಲ 2 ದಿನ ಮೀನುಗಾರಿಕೆ ನಡೆದಿದೆ ಎಂದಿದ್ದಾರೆ.

ಲಕ್ಷಾಂತರ ಮಂದಿ ಮೀನುಗಾರರು ಕಂಗಾಲು:

ಮೀನುಗಾರಿಕೆಯನ್ನು ಜೀವನಾಧಾರವಾಗಿ ನಂಬಿಕೊಂಡಿದ್ದ ಲಕ್ಷಾಂತರ ಮಂದಿ ಮೀನುಗಾರರು ಕಂಗಾಲಾಗಿದ್ದಾರೆ. ಬಡ ಸಾಂಪ್ರದಾಯಿಕ ಮೀನುಗಾರರಂತೂ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಶೋಚನೀಯ ಪರಿಸ್ಥಿತಿಗೆ ತಲುಪಿದ್ದಾರೆ. ಕೆಲವು ಮೀನುಗಾರರಂತೂ ಆದಾಯವಿಲ್ಲದೆ ಸಾಲದ ಹೊರೆಯಿಂದ ಅತಂತ್ರರಾಗಿದ್ದಾರೆ. ಆದ್ದರಿಂದ ಮೀನುಗಾರರ ಈ ಸೂಕ್ಷ್ಮ ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಶೀಘ್ರ ಸ್ಪಂದಿಸಬೇಕು ಎಂದು ಅವರು ಹೇಳಿದರು.

ಸೀಫುಡ್ ಪ್ರಿಯರಿಗೆ ಸಚಿವ ಕೋಟ ಶ್ರೀನಿವಾಸ್‌ ಸಿಹಿ ಸುದ್ದಿ..!

ಈ ಬಾರಿ ಮತ್ಸ್ಯಬರ ಎಂದು ಘೋಷಿಸಿ:

ಕೃಷಿಗೆ ಬರ ಉಂಟಾದಾಗ ರೈತರಿಗೆ ಯಾವ ರೀತಿ ಬರ ಪೀಡಿತ ಪ್ರದೇಶ ಎಂದು ಘೋಷಿಸಿ ತುರ್ತು ಬರ ಪರಿಹಾರಗಳನ್ನು ವಿತರಿಸಲಾಗುತ್ತದೆಯೋ ಅದೇ ರೀತಿ ಈಗ ಸಮುದ್ರದಲ್ಲಿ ಕಂಡು ಬಂದಿರುವ ಮತ್ಸ್ಯ ಕ್ಷಾಮವನ್ನು ಮತ್ಸ್ಯ ಬರ ಎಂದು ಘೋಷಿಸಿ ಬಡ ಮೀನುಗಾರರಿಗೆ ಬರ ಪರಿಹಾರಗಳನ್ನು ಸರ್ಕಾರ ಘೋಷಿಸಬೇಕು. ಮೀನುಗಾರಿಕಾ ಇಲಾಖಾಧಿಕಾರಿಗಳು ಈ ಬಗ್ಗೆ ತುರ್ತಾಗಿ ಸಮಗ್ರ ಸಮೀಕ್ಷೆ ನಡೆಸ ಸ್ಪಂದಿಸಬೇಕು ಎಂದರು.

ಸೊಸೈಟಿ ಸಾಲವನ್ನೂ ಮನ್ನಾ ಮಾಡಿ:

ಇತ್ತೀಚೆಗೆ ರಾಜ್ಯ ಸರ್ಕಾರ ಮೀನುಗಾರಿಕಾ ಸಾಲ ಮನ್ನಾ ಘೋಷಿಸಿದ್ದು, ಇದರಲ್ಲಿ ಹಲವರು ಗೊಂದಲಗಳು ಕಾಣ ಸಿಗುತ್ತಿದೆ. ಜಿಲ್ಲೆಯ ಬಹುತೇಕ ಮೀನುಗಾರರು ಮೀನುಗಾರಿಕಾ ಸಹಕಾರಿ ಸಂಘದ ಮೂಲಕ ಸಾಲಗಳನ್ನು ಪಡೆದುಕೊಂಡಿದ್ದು, ಈ ಸಹಕಾರಿ ಸಂಘಗಳು ಸಾಲ ಮನ್ನಾ ಮಾಡುತ್ತಿಲ್ಲ. ಇದರಿಂದಾಗಿ ಮೀನುಗಾರರಲ್ಲಿ ಗೊಂದಲ ಉಂಟಾಗಿದ್ದು, ಸಾಲ ಮನ್ನಾ ಎಂಬುದು ಕೇವಲ ಘೋಷಣೆ ಎಂಬಂತೆ ಭಾಸವಾಗುತ್ತಿದೆ.

ಗುಲಾಬಿ ಬಯಸಿದ್ದೂ ಮೀನುಗಾರಿಕೆ, ಸಿಕ್ಕಿದ್ದೂ ಅದೇ ಖಾತೆ..! ಪೂಜಾರಿ ಮನೆಗೆ ಬಂತು ರಾಶಿ ಮೀನು..!

click me!