ಪರಿಸರ ಪ್ರೇಮ, ಪ್ರಾಣಿ ಪ್ರೇಮಕ್ಕೆ ಕೊನೆ ಇಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕೊಡುಗೆ ನೀಡಿ ಮಾದರಿಯಾಗುತ್ತಾರೆ. ಇಲ್ಲೊಬ್ಬರು ಸಮಾಜ ಸೇವಕರು ಮೃತವಾದ ನವಿಲಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಉಡುಪಿ[ಜ.29] ಉಡುಪಿಯ ಕಪ್ಪೆಟ್ಟು ಗ್ರಾಮದಲ್ಲಿ ಮಂಗಳವಾರ ರಾಷ್ಟ್ರೀಯ ಪಕ್ಷಿ ನವಿಲೊಂದು ಸತ್ತಿದ್ದು, ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಅವರು ಗೌರವಪೂರ್ವಕವಾಗಿ ನವಿಲಿಗೆ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.
ಮುಂಜಾನೆ ಸ್ಥಳೀಯ ನಿವಾಸಿ ಸುಕೇಶ್ ಎಂಬವರು ಅದನ್ನು ನೋಡಿದ್ದು ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ನಿತ್ಯಾನಂದ ಅವರು ಸತ್ತ ನವಿಲನ್ನು ಆದಿ ಉಡುಪಿಯಲ್ಲಿರುವ ಅರಣ್ಯ ಇಲಾಖೆಯ ಕಚೇರಿಗೆ ಕೊಂಡೊಯ್ದು ಒಪ್ಪಿಸಿದರು. ನವಿಲು ನಮ್ಮ ದೇಶದ ರಾಷ್ಟ್ರೀಯ ಪಕ್ಷಿಯಾಗಿರುವುದರಿಂದ, ಕಾನೂನಿನಂತೆ ಅಸಹಜ ರೀತಿಯಲ್ಲಿ ಮೃತಪಟ್ಟ ನವಿಲನ್ನು ಪಶುವೈದ್ಯರಾದ ಡಾ.ಸಂದೀಪ್ ಶೆಟ್ಟಿ ಅವರಿಂದ ಶವಪರೀಕ್ಷೆ ನಡೆಸಲಾಯಿತು.
undefined
ಕಾಯಕಯೋಗಿ ಜತೆ ಇದ್ದ ಶ್ವಾನ ಕಣ್ಮರೆ
ವೈದ್ಯರು ಮೃತ ಗಂಡು ನವಿಲಿಗೆ ಸುಮಾರು 3 ವರ್ಷ ವಯಸ್ಸಾಗಿದ್ದು, ಹೊಟ್ಟೆಯಲ್ಲಿ ಅದರ ಯಕೃತ್ತಿಗೆ ಹಾನಿಯಾಗಿರುವುದು ಪತ್ತೆಯಾಗಿದೆ. ಯಾವುದೇ ಕಾರಣಕ್ಕೆ ವಿಷಾಹಾರ ತಿಂದಿದೆ. ನವಿಲು, ನೀರು ಆಹಾರ ಸೇವಿಸಲಾಗದೇ, ಅಸ್ವಸ್ಥಗೊಂಡು ಮೃತಪಟ್ಟಿರಬೇಕು ಎಂದು ಹೇಳಿದ್ದಾರೆ.
ನಂತರ ಅರಣ್ಯ ಇಲಾಖೆಯ ನಿಯಮದಂತೆ, ರಾಷ್ಟ್ರಪಕ್ಷಿಗೆ ಅಂತಿಮ ಗೌರವ ಸಲ್ಲಿಸಿ, ಇಲಾಖೆಯ ಆವರಣದಲ್ಲಿರುವ ವನ್ಯಜೀವಿಗಳ ದಹನಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.