
ಬೆಂಗಳೂರು (ನ.10): ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಸ್ಥಗಿತವಾಗಿರುವುದಕ್ಕೆ ಕೇಂದ್ರ ಸರ್ಕಾರದ 'ಉಡಾನ್-2' (UDAN-2) ಯೋಜನೆಯ ದೋಷಗಳೇ ಮುಖ್ಯ ಕಾರಣ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ (MB Patil) ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಸಚಿವರು ನೇರ ಸವಾಲು ಎಸೆದಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, 'ನಾಗರಿಕ ವಿಮಾನಯಾನದ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು ರಾಜ್ಯ ಸರ್ಕಾರವು ಸಮಗ್ರ ನೂತನ ವೈಮಾನಿಕ ನೀತಿಯನ್ನು ರೂಪಿಸಿದ್ದು, ಇದನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ರಾಜ್ಯ ಸರ್ಕಾರವೇ ನಿರ್ವಹಿಸುವ ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿದ ಅನುದಾನ, ವಿಜಿಎಫ್ (VGF) ಹಾಗೂ ಸಮರ್ಥ ಕಾರ್ಯಾಚರಣೆ ಸೇರಿದಂತೆ ಹಲವು ಅಂಶಗಳು ಇದರಲ್ಲಿವೆ. ಇದು ಇಡೀ ದೇಶಕ್ಕೇ ಮಾದರಿಯಾಗಲಿದೆ' ಎಂದರು.
ಉಡಾನ್ ಯೋಜನೆಯನ್ನು 3 ವರ್ಷಗಳಿಂದ 5 ವರ್ಷಗಳಿಗೆ ವಿಸ್ತರಿಸಬೇಕು ಹಾಗೂ ನಂತರದ 5 ವರ್ಷಗಳ ಕಾಲ 50:50 ವೆಚ್ಚದ ಅನುಪಾತದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ನಡೆಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಸಲಹೆ ನೀಡಿದ್ದೆವು. ಆದರೆ ಕೇಂದ್ರ ಸರ್ಕಾರ ಇದಕ್ಕೆ ಬೆಲೆ ಕೊಡಲಿಲ್ಲ. ಇದರ ಪರಿಣಾಮವಾಗಿ ಇಂದು ದೇಶಾದ್ಯಂತ 17 ವಿಮಾನ ನಿಲ್ದಾಣಗಳು ಸ್ಥಗಿತಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
'ನಾವು ಸಾವಿರಾರು ಕೋಟಿ ರೂ. ಖರ್ಚು ಮಾಡಿ ವಿಮಾನ ನಿಲ್ದಾಣ ನಿರ್ಮಿಸಿ ಕೇಂದ್ರಕ್ಕೆ ವಹಿಸುವುದು ಸರಿಯಲ್ಲ. ಕಲಬುರಗಿ ವಿಮಾನ ನಿಲ್ದಾಣಕ್ಕೆ 1,000 ಕೋಟಿ ರೂ. ಖರ್ಚು ಮಾಡಿ ಕೊಟ್ಟರೂ ರಾಜ್ಯಕ್ಕೆ ನಯಾಪೈಸೆ ಬರುತ್ತಿಲ್ಲ. ಹೀಗಾಗಿ ಶಿವಮೊಗ್ಗ, ರಾಯಚೂರು, ವಿಜಯಪುರ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಿಸುತ್ತಿದ್ದೇವೆ. ಕಲಬುರಗಿಗೆ KKRDB ಯಿಂದ 80% ಮತ್ತು ರಾಜ್ಯ ಸರ್ಕಾರದಿಂದ 20% ಹಣ ಕೊಟ್ಟು ಸೇವೆ ಪುನರಾರಂಭಿಸಿದ್ದೇವೆ. ಸಂಸದ ರಾಘವೇಂದ್ರ ಅವರಿಗೆ ಸಾಮರ್ಥ್ಯವಿದ್ದರೆ ಶಿವಮೊಗ್ಗ ಏರ್‌ಪೋರ್ಟ್‌ಗೂ ಹೀಗೆ ಹಣ ತರಲಿ ನೋಡೋಣ' ಎಂದು ಸವಾಲು ಹಾಕಿದರು.
ಇದೇ ವೇಳೆ ಪೆಟ್ರೋಲ್‌ನಲ್ಲಿ ಅಳತೆ ಮೀರಿ ಎಥೆನಾಲ್ (Ethanol) ಸೇರಿಸುತ್ತಿರುವ ವಿಚಾರವಾಗಿ ಸಚಿವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 'ಪೆಟ್ರೋಲ್‌ನಲ್ಲಿ ಎಥೆನಾಲ್ ಅತಿಯಾಗಿ ಮಿಶ್ರಣ ಮಾಡುತ್ತಿರುವುದಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೇ ಪ್ರಮುಖ ಕಾರಣ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು' ಎಂದು ಒತ್ತಾಯಿಸಿದರು.
ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿರುವ ಮುರುಗೇಶ್ ನಿರಾಣಿ ಹಾಗೂ ಪ್ರಭಾಕರ್ ಕೋರೆ ಅವರನ್ನೇ ಈ ಬಗ್ಗೆ ಕೇಳಿ ನೋಡಲಿ. ಪ್ರಯೋಗಾಲಯಗಳ ಫಲಿತಾಂಶದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಏಕೆ ಅನುಮಾನ? ಎಥೆನಾಲ್ ಉತ್ಪಾದನೆಗೆ ವಿಪರೀತ ಉತ್ತೇಜನ ಕೊಟ್ಟ ಕೇಂದ್ರ, ಅದರ ಖರೀದಿಗೆ ಮುಂದಾಗದೆ ಏಕಾಏಕಿ ಹೇರಿಕೆ ಮಾಡಿದ್ದರಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಭಾರಿ ಅನಾಹುತವಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದರು.