ಹಿರೇಕೊಳಲೆ ಭಾಗದಲ್ಲಿ ಕಾಣಿಸಿಕೊಂಡಿರುವ ಹುಲಿಗಳು ಮುಳ್ಳಯ್ಯನಗಿರಿ ತಪ್ಪಲಿನಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಎರಡು ಹುಲಿಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಭಾಗದ ಜನ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು
ಚಿಕ್ಕಮಗಳೂರು(ಅ.20): ನಗರ ಸಮೀಪದಲ್ಲಿರುವ ಹಿರೇಕೊಳಲೆ ಗ್ರಾಮದ ಶ್ರೀಕಂಠೇಗೌಡ ಅವರ ಕಾಫಿ ತೋಟದಲ್ಲಿ ಶನಿವಾರ ಸಂಜೆ 5.30 ರ ವೇಳೆಗೆ ಎರಡು ಹುಲಿಗಳು ಕಾಣಿಸಿಕೊಂಡಿವೆ.
ಸಂಜೆ ಶ್ರೀಕಂಠೇಗೌಡ ಅವರು ಮನೆಯಲ್ಲಿದ್ದಾಗ ಕಾಫಿ ತೋಟದಲ್ಲಿ ಹುಲಿಗಳು ಘರ್ಜಿಸಿದ ಶಬ್ಧ ಕೇಳಿ ಕೂಡಲೇ ಅವರು ತಮ್ಮ ತೊಟದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಕರೆದುಕೊಂಡು ತೋಟಕ್ಕೆ ಹೋಗಿದ್ದಾರೆ. ಈ ವೇಳೆ ಎರಡು ಹುಲಿಗಳು ಒಟ್ಟಿಗೆ ಇರುವುದನ್ನು ನೋಡಿ ಆತಂಕಗೊಂಡಿದ್ದಾರೆ.
ಕೂಡಲೇ ಶ್ರೀಕಂಠೇಗೌಡರು ಹಾಗೂ ತೋಟದ ಕಾರ್ಮಿಕರು ಕೂಗಾಡಲು ಆರಂಭಿಸಿದ್ದಾರೆ. ಆಗ ಹುಲಿಗಳು ಒಂದೊಂದು ದಿಕ್ಕಿಗೆ ಓಡಿ ಹೋಗಿವೆ. ತಕ್ಷಣ ತೋಟದ ಮಾಲೀಕರು ಡಿಎಫ್‌ಒ ರಮೇಶ್ ಬಾಬು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳಾದ ಸಂಪತ್ ಮತ್ತಿತರರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜೊತೆಗೆ ಹುಲಿಗಳ ಹೆಜ್ಜೆ ಗುರುತುಗಳನ್ನು ಫೋಟೋ ತೆಗೆದುಕೊಂಡಿದ್ದಾರೆ. ಅಲ್ಲದೆ ಹುಲಿಗಳನ್ನು ಓಡಿಸಲು ಕ್ರಮ ಕೈಗೊಂಡಿದ್ದಾರೆ.
ಹಿರೇಕೊಳಲೆ ಭಾಗದಲ್ಲಿ ಕಾಣಿಸಿಕೊಂಡಿರುವ ಹುಲಿಗಳು ಮುಳ್ಳಯ್ಯನಗಿರಿ ತಪ್ಪಲಿನಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಎರಡು ಹುಲಿಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಭಾಗದ ಜನ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.