ತುಮಕೂರು: ದ್ವಿಚಕ್ರವಾಹನಗಳಿಗೆ ಕಾರು ಡಿಕ್ಕಿ, ಇಬ್ಬರು ವಿದ್ಯಾರ್ಥಿಗಳ ಸಾವು

By Kannadaprabha NewsFirst Published Jan 7, 2024, 9:30 PM IST
Highlights

ಸ್ಥಳಕ್ಕೆ ಎಸೈ ಸಂಗಪ್ಪ ಮೇಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುರುವೇಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುರುವೇಕೆರೆ(ಜ.07): ದೇವಾಲಯಕ್ಕೆ ತೆರಳಿ ತಮ್ಮ ಗ್ರಾಮದತ್ತ ವಾಪಸಾಗುತ್ತಿದ್ದ ವಿದ್ಯಾರ್ಥಿಗಳು ಚಾಲನೆ ಮಾಡುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಸಮೀಪದ ಭಾನುವಾರ ಸಂತೆ ಗ್ರಾಮದ ಬಳಿ ನಡೆದಿದೆ.

ತಿಪಟೂರಿನ ಕಾಲೇಜೊಂದರಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಶಾಲೆಗೆ ಚಕ್ಕರ್ ಹಾಕಿ ಸಮೀಪದ ಆದಿಚುಂಚನಗಿರಿಗೆ ಬಂದಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿ ತಿಪಟೂರಿನ ಕಡೆ ತೆರಳುತ್ತಿದ್ದ ವೇಳೆ ತಿಪಟೂರಿನಿಂದ ಮೈಸೂರಿನ ಕಡೆ ಸಾಗುತ್ತಿದ್ದ ಕಾರು ಎರಡೂ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸುನಿಲ್ (೨೧) ಎಂಬ ವಿದ್ಯಾರ್ಥಿ ಮೃತ ಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯರಾದ ಕಾವ್ಯಾ, ಧರಣಿ, ಪಲ್ಲವಿ ಹಾಗೂ ವಿದ್ಯಾರ್ಥಿ ನರಸಿಂಹಮೂರ್ತಿಯನ್ನು ಕೂಡಲೇ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಚಾಮರಾಜನಗರ: ಕಳೆದ ವರ್ಷದಲ್ಲಿ ಬರೋಬ್ಬರಿ 58 ಆಕ್ಸಿಡೆಂಟ್‌ ಡೆತ್‌..!

ಆದರೆ ಚಿಕಿತ್ಸೆಗೆ ಸ್ಪಂದಿಸದೇ ಕಾವ್ಯಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾಳೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. ಎಲ್ಲರೂ ಇಪ್ಪತ್ತು ವರ್ಷಗಳ ಆಜುಬಾಜಿನವರು ಎಂದು ತಿಳಿದುಬಂದಿದೆ. ಎಲ್ಲ ವಿದ್ಯಾರ್ಥಿಗಳೂ ಸಹ ತಿಪಟೂರಿನ ಸುತ್ತಮುತ್ತಲ ಗ್ರಾಮಗಳವರು ಎಂದು ಹೇಳಲಾಗಿದೆ.

ಅಪಘಾತವಾದ ಕೂಡಲೇ ಕಾಲಿನಲ್ಲಿದ್ದವರು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ. ನರಸಿಂಹ ಮೂರ್ತಿಯ ಕಾಲು ತುಂಡಾಗಿದ್ದರೆ, ಧರಣಿ ಎಂಬ ವಿದ್ಯಾರ್ಥಿನಿ ಚಿಂತಾಜನಕ ಸ್ಥಿತಿಯಲ್ಲಿದ್ದಾಳೆಂದು ಹೇಳಲಾಗಿದೆ. ಪಲ್ಲವಿಗೂ ಹೆಚ್ಚಿನ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆಂದು ಹೇಳಲಾಗಿದೆ. ಸ್ಥಳಕ್ಕೆ ಎಸೈ ಸಂಗಪ್ಪ ಮೇಟಿ ಭೇಟಿ ನೀಡಿದ್ದರು. ತುರುವೇಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!