ಪತ್ನಿಯ ಅಗಲಿಕೆಯಿಂದ ನೊಂದ ಪತಿ, ಮಕ್ಕಳೊಂದಿಗೆ ಕಾಲುವೆ ಹಾರಿ ಆತ್ಮಹತ್ಯೆ| ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದ ಬಳಿಯ ಎಚ್‌ಎಲ್ ಕಾಲುವೆಯಲ್ಲಿ ನಡೆದ ಘಟನೆ| ತಂದೆ, ಮಗಳು ಸಾವು, ಮತ್ತೋರ್ವ ಮಗಳ ರಕ್ಷಣೆ|
ಬಳ್ಳಾರಿ(ಆ.22): ಅನಾರೋಗ್ಯದಿಂದ ಸಾವಿಗೀಡಾದ ಪತ್ನಿಯ ಅಗಲಿಕೆಯಿಂದ ನೊಂದ ಪತಿ, ಮಕ್ಕಳೊಂದಿಗೆ ಕಾಲುವೆ ಹಾರಿದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಲಕುಂದಿ ಗ್ರಾಮದ ಬಳಿಯ ಎಚ್‌ಎಲ್ ಕಾಲುವೆಯಲ್ಲಿ ಶುಕ್ರವಾರ ಸಂಭವಿಸಿದೆ.
ಘಟನೆಯಲ್ಲಿ ಬಳ್ಳಾರಿ ನಿವಾಸಿ ಗಣೇಶ ಆಚಾರ್ಯ ಹಾಗೂ ಎರಡನೇ ಮಗಳು 12 ವರ್ಷದ ಸ್ಫೂರ್ತಿ ಸಾವಿಗೀಡಾಗಿದ್ದಾರೆ. ಮೊದಲ ಮಗಳು ಕೀರ್ತನಾ ಬದುಕುಳಿದಿದ್ದಾಳೆ. ಗಣೇಶ ಆಚಾರ್ಯ ಅವರು ನಗರದ ಪೆಟ್ರೋಲ್ ಬಂಕ್‌ವೊಂದರಲ್ಲಿ ವ್ಯವಸ್ಥಾಪಕರಾಗಿದ್ದರು.
ಬಳ್ಳಾರಿ: ಆರೋಗ್ಯ ಸಚಿವ ಶ್ರೀರಾಮುಲು ತಾಯಿ ವಿಧಿವಶ
ಪತ್ನಿ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಗಣೇಶ ಆಚಾರ್ಯ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಹಲಕುಂದಿ ಬಳಿಯ ಎಚ್‌ಎಲ್‌ಸಿ ಬಳಿ ತೆರಳಿದ್ದಾರೆ. ಮೂವರು ಕಾಲುವೆ ಹಾರಿದ್ದು, ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಗೃಹರಕ್ಷಕ ದಳ ಸಿಬ್ಬಂದಿ ಮೊದಲ ಮಗಳನ್ನು ರಕ್ಷಿಸಿದ್ದಾರೆ. ಪುತ್ರಿ ಸ್ಫೂರ್ತಿಯ ಮೃತದೇಹ ಪತ್ತೆಯಾಗಿದ್ದು, ಗಣೇಶ್ ಅವರ ಮೃತದೇಹದ ಶೋಧ ಕಾರ್ಯ ನಡೆದಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.